
ಕಡರನಾಯ್ಕನಹಳ್ಳಿ: ಹರಿಹರ ತಾಲ್ಲೂಕಿನ ಕೆಲವು ಗ್ರಾಮಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಅರೆಬರೆ ಅಭಿವೃದ್ಧಿ ಕಾಮಗಾರಿ ನಡೆದಿರುವುದರಿಂದ ರಸ್ತೆಗಳು ಸಂಚಾರಕ್ಕೆ ಸಮರ್ಪವಾಗಿಲ್ಲ. ಇದರಿಂದಾಗಿ ಪ್ರಯಾಣಿಕರು ಹೈರಾಣಾಗುವಂತಾಗಿದೆ.
ಹೊಳೆ ಸಿರಿಗೆರೆಯಿಂದ ಹಳ್ಳಿಹಾಳ್ ಗ್ರಾಮದವರೆಗಿನ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಗುಂಡಿ ಮುಚ್ಚಲು ಸರ್ಕಾರ ₹18 ಲಕ್ಷ ಅನುದಾನ ನೀಡಿದ್ದು, ಇಂಗಳಗೊಂದಿಯಿಂದ ಹೊಳೆ ಸಿರಿಗೆರೆ ಮಾರ್ಗದ ರಸ್ತೆ ದುರಸ್ತಿ ಕಂಡಿದೆ. ಆದರೆ ಹೊಳೆ ಸಿರಿಗೆರೆ ಕೆರೆಯಿಂದ ಹಳ್ಳಿಹಾಳ್ ಗ್ರಾಮದವರೆಗೆ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಕಡರನಾಯ್ಕನಹಳ್ಳಿ ಗ್ರಾಮದ ಎಸ್. ಅನಂತ, ಮೊಸವಳ್ಳಿ ಸುರೇಶ್ ಮತ್ತಿತರರು ದೂರಿದ್ದಾರೆ.
ಕೆಲವು ಕಡೆ ಗುಂಡಿಗಳಿಗೆ ಜೆಲ್ಲಿಕಲ್ಲು ಹಾಕಿ ಹಾಗೆಯೇ ಬಿಟ್ಟಿದ್ದರೆ, ಇನ್ನೂ ಕೆಲವು ಕಡೆ ಅದನ್ನೂ ಮಾಡಿಲ್ಲ. ಒಂದಿಷ್ಟು ಭಾಗದಲ್ಲಿ ಜೆಲ್ಲಿಕಲ್ಲಿನ ಮೇಲೆ ಡಾಂಬರು ಹಾಕಿದ್ದರೂ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಕೊಕ್ಕನೂರು- ಕಡರನಾಯ್ಕನಹಳ್ಳಿ ಮಾರ್ಗದ ನಾಲ್ಕು ಕಿಲೋಮೀಟರ್ ಪೈಕಿ 2 ಕಿಲೋಮೀಟರ್ ಮಾತ್ರ ಕಾಮಗಾರಿ ಆಗಿದೆ. ಬಾಕಿ ಮಾರ್ಗದ ಕಾಮಗಾರಿ ಪ್ರಾರಂಭವಾಗಿ 4 ವರ್ಷಗಳಾದರೂ, ಪೂರ್ಣಗೊಂಡಿಲ್ಲ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇದರ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರಾದ ಗಿಂಡೇರ ಅಂಜಿನಪ್ಪ, ವಿಜಯ್ ಗಂಟೇರ, ಜಿ.ಟಿ.ಕಟ್ಟಿ ರಮೇಶ್ ಆಕ್ರೋಶ ಹೊರಹಾಕಿದ್ದಾರೆ.
ಕೊಕ್ಕನೂರು–ಹೊನ್ನಾಳಿ ರಸ್ತೆಯಲ್ಲಿ ಮೂಗಿನಗೊಂದಿವರೆಗೆ ಮತ್ತು ನಂದಿಗುಡಿ ರಸ್ತೆಯಿಂದ ಮಲೇಬೆನ್ನೂರು ಮಾರ್ಗದಲ್ಲೂ ಅರೆಬರೆ ಕಾಮಗಾರಿ ನಡೆದಿದೆ. ಇದರಿಂದ ಶಾಲಾ ಕಾಲೇಜುಗಳಲ್ಲಿ ದೂಳು ಆವರಿಸುತ್ತಿದೆ ಎಂದು ಆರೋಪಿಸಿ ಇತ್ತೀಚೆಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳು ಧರಣಿ ನಡೆಸಿದ್ದರು.
ಅಪೂರ್ಣ ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಇಂತಹ ಗುತ್ತಿಗೆದಾರರಿಂದ ಹಾಳಾಗುತ್ತಿವೆ. ಜನರ ತೆರಿಗೆ ಹಣ ನೀರು ಪಾಲಾಗುತ್ತಿದೆ ಎಂದು ಸ್ಥಳೀಯರಾದ ಎಂ.ಎನ್. ವೆಂಕಟೇಶ್ ಆರೋಪಿಸಿದ್ದಾರೆ.
ಅಧಿಕ ಅನುದಾನಕ್ಕೆ ಮನವಿ
ಕಡರನಾಯ್ಕನಹಳ್ಳಿ- ಕೊಕ್ಕನೂರು ರಸ್ತೆಯ ಡಾಂಬರೀಕರಣ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಲಾಗಿದೆ ಎಂದು ಹರಿಹರ ಲೋಕೋಪಯೋಗಿ ಇಲಾಖೆಯ ಎಇಇ ಕಂದಗಲ್ ನಾಗರಾಜ್ ತಿಳಿಸಿದ್ದಾರೆ. ‘ಇಂಗಳಗೊಂದಿ ಧೂಳೆಹೊಳೆ ಹೊಳೆ ಸಿರಿಗೆರೆ ಮಾರ್ಗದಲ್ಲಿ ಸಮರ್ಪಕವಾಗಿ ರಸ್ತೆ ಕಾಮಗಾರಿ ನಡೆದಿದೆ. ಹೊಳೆ ಸಿರಿಗೆರೆ ಕೆರೆ ಏರಿಯಿಂದ ಹಳ್ಳಿಹಾಳ್ ರಸ್ತೆ ತುಂಬಾ ಹದಗೆಟ್ಟಿದೆ. ಇಲ್ಲಿ ಇಡೀ ರಸ್ತೆಯಲ್ಲಿ ಗುಂಡಿಗಳೇ ತುಂಬಿದ್ದು ಹೊಸದಾಗಿಯೇ ರಸ್ತೆ ನಿರ್ಮಿಸುವ ಸವಾಲು ಎದುರಾಗಿದೆ. ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಈ ಕಾಮಗಾರಿಯಲ್ಲಿ ರಸ್ತೆ ಬದಿಯಲ್ಲಿರುವ ಗಿಡಗಂಟಿಗಳ (ಜಂಗಲ್) ತೆರವು ಕಾಮಗಾರಿಯೂ ಸೇರಿರುತ್ತದೆ. ಹಳ್ಳಿಹಾಳ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಅಧಿಕ ಅನುದಾನದ ಅಗತ್ಯವಿದೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.