ADVERTISEMENT

ಜಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಪ್ರಮಾಣ

ಹೊರಗೆ ಓಡಾಡುತ್ತಿರುವ ಆರೈಕೆ ಕೇಂದ್ರದಲ್ಲಿನ ಸೋಂಕಿತರು

ಡಿ.ಶ್ರೀನಿವಾಸ
Published 19 ಸೆಪ್ಟೆಂಬರ್ 2020, 4:01 IST
Last Updated 19 ಸೆಪ್ಟೆಂಬರ್ 2020, 4:01 IST
ಶಾಸಕ ಎಸ್.ವಿ. ರಾಮಚಂದ್ರ
ಶಾಸಕ ಎಸ್.ವಿ. ರಾಮಚಂದ್ರ   

ಜಗಳೂರು:ತಾಲ್ಲೂಕಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಗುರುವಾರ ಪ್ರಾಥಮಿಕ ಶಾಲಾ ಶಿಕ್ಷಕ, ಹಾಗೂ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಗೋಣಿಬಸಪ್ಪ ಹಾಗೂ ದೊಣೆಹಳ್ಳಿ ಗ್ರಾಮದ ಜಯಮ್ಮ ಸೇರಿ ಮೂವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಎರಡು ದಿನಗಳ ಹಿಂದೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಅಂಬುಲೆನ್ಸ್ ಚಾಲಕ ಅಜ್ಮತ್ ಹಾಗೂದೇವಿಕೆರೆ ಗ್ರಾಮದ ಪರಮೇಶ್ ಕೊರೊನಾದಿಂದ ಸಾವನ್ನಪ್ಪಿದ್ದರು.

ಪಟ್ಟಣದ ವರ್ತಕರು, ರಾಜಕೀಯ ಮುಖಂಡರು ಹಾಗೂ ವೈದ್ಯರು ಸೇರಿ 10 ದಿನಗಳಲ್ಲಿ ತಾಲ್ಲೂಕಿನಲ್ಲಿ 11ಕ್ಕೂ ಹೆಚ್ಚು ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ. ಬಹುತೇಕ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೋಂಕು ತಗುಲಿದೆ. ತಾಲ್ಲೂಕು ಆರೋಗ್ಯಾಧಿಕಾರಿ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, ಶಿಕ್ಷಣ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕೊರೊನಾ ಸೋಂಕಿತರಾಗಿದ್ದು, ಕ್ವಾರಂಟೈನ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲಾ ಕಚೇರಿಗಳು ಬಹುತೇಕ ಸೀಲ್‌ಡೌನ್ ಆಗಿದ್ದು, ಆಡಳಿತ ಸ್ತಬ್ಧವಾಗಿದೆ.

ADVERTISEMENT

ಐದು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಸೊಂಕಿತರ ಸಾವಿನ ಸಂಖ್ಯೆ ಹೆಚ್ಚಾಗಿದೆ. ಸೋಂಕು ಸಮುದಾಯಕ್ಕೆ ಹರಡಿರಬಹುದು ಎಂಬ ಭೀತಿ ಸಾರ್ವಜನಿಕರನ್ನು ಕಾಡುತ್ತಿದೆ. ತಾಲ್ಲೂಕಿನಲ್ಲಿ ಕೊರೊನಾ ಸೊಂಕು ಪರಿಹಾರ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ.

‘ತಾಲ್ಲೂಕು ಆರೋಗ್ಯಾಧಿಕಾರಿ ಅವರ ಎರಡೂ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಸೋಂಕಿತರ ಚಿಕಿತ್ಸೆ ಅಥವಾ ವೆಂಟಿಲೇಟರ್ ಲಭ್ಯತೆ ಬಗ್ಗೆ ಜನರಿಗೆ ಸಮರ್ಪಕ ಮಾಹಿತಿಯನ್ನು ಯಾರೂ ಕೊಡುತ್ತಿಲ್ಲ. ತಾಲ್ಲೂಕಿನಲ್ಲಿ ಸೋಂಕು ಹರಡುವಿಕೆ ಹಾಗೂ ಸಾವಿನ ಪ್ರಮಾಣ ಹೆಚ್ಚಾಗಿದ್ದರೂ ಜಿಲ್ಲಾ ಅಧಿಕಾರಿಗಳು ಸಾವಿನ ಪ್ರಮಾಣ ಇಳಿಮುಖವಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಸಾರ್ವಜನಿಕರು ದೂರಿದ್ದಾರೆ.

‘ಪಟ್ಟಣದ ಕೋವಿಡ್ ಆರೈಕೆ ಕೇಂದ್ರದಲ್ಲಿ ದಾಖಲಾದ ಸೋಂಕಿತರು ಬೇಕಾಬಿಟ್ಟಿ ಹೊರಗೆ ಓಡಾಡುತ್ತಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯರೊಬ್ಬರು ಹೇಳಿದರು.

ಈ ಬಗ್ಗೆ ಮಾಹಿತಿ ಪಡೆಯಲು ‘ಪ್ರಜಾವಾಣಿ’ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅಧಿಕಾರಿಗಳು ಕರೆಯನ್ನು ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.