ADVERTISEMENT

ಸಂತೇಬೆನ್ನೂರು: ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದ ವೀರರು

ಕೆ.ಎಸ್.ವೀರೇಶ್ ಪ್ರಸಾದ್
Published 15 ಆಗಸ್ಟ್ 2022, 2:43 IST
Last Updated 15 ಆಗಸ್ಟ್ 2022, 2:43 IST
ಎಸ್.ವಿ. ಕೃಷ್ಣಮೂರ್ತಿ ರಾವ್
ಎಸ್.ವಿ. ಕೃಷ್ಣಮೂರ್ತಿ ರಾವ್   

ಸಂತೇಬೆನ್ನೂರು: ಇಲ್ಲಿನ ಎಸ್.ವಿ. ಕೃಷ್ಣಮೂರ್ತಿರಾವ್ ಅವರು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯದ ನಂತರ ದೇಶಕ್ಕಾಗಿ ಸಲ್ಲಿಸಿದ ಸೇವೆ ಅವಿಸ್ಮರಣೀಯ.

ಸಂತೇಬೆನ್ನೂರಿನ ವಾದಿರಾಜಾಚಾರ್ ಹಾಗೂ ನಾಗೂಬಾಯಿ ದಂಪತಿ ಮಗನಾಗಿ 1902ರ ನವೆಂಬರ್‌ 15ರಂದು ಜನಿಸಿದಕೃಷ್ಣಮೂರ್ತಿರಾವ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಸ್ವಾತಂತ್ರ್ಯದ ನಂತರದಲ್ಲಿ ಲೋಕಸಭಾ ಉಪಾಧ್ಯಕ್ಷ, ರಾಜ್ಯಸಭಾ ಸದಸ್ಯ, ಸಂವಿಧಾನ ರಚನಾ ಸಮಿತಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದರು.

ಗ್ರಾಮದಲ್ಲಿ ಪ್ರಾಥಮಿಕ, ಚಿಕ್ಕಮಗಳೂರಿನಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನಲ್ಲಿ ಬಿಎಸ್‌ಸಿ ಪದವಿ, ಪುಣೆಯಲ್ಲಿ ಕಾನೂನೂ ಪದವಿ ಪಡೆದು 1927ರಲ್ಲಿ ಶಿವಮೊಗ್ಗದಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ಬಾಲಗಂಗಾಧರನಾಥ ತಿಲಕ್, ಗೋಪಾಲಕೃಷ್ಣ ಗೋಖಲೆ, ಮಹಾತ್ಮ ಗಾಂಧಿ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಭಾರತೀಯ ಕಾಂಗ್ರೆಸ್‌ ಪಕ್ಷ ಸೇರಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿದ್ದರು. ಜೈಲಿನಲ್ಲಿ ಕಾಲಹರಣ ಮಾಡದೆ ಗಾಂಧೀಜಿಯವರ ‘ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ’, ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ, ಸರ್.ಎಂ. ವಿಶ್ವೇಶ್ವರಯ್ಯ ಅವರ ‘ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯಾ’ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಜೈಲಿನಿಂದ ಹೊರಬಂದ ಮೇಲೆ ಅವುಗಳನ್ನು ಪ್ರಕಟಿಸಿದ್ದರು ಎಂದು ಅವರ ಸಂಬಂಧಿ, ಪತ್ರಕರ್ತ ಸತ್ಯನಾರಾಯಣ ನಾಡಿಗ್ ಅವರು ಸ್ಮರಿಸಿದರು.

ADVERTISEMENT

‘1962 ರಿಂದ 67ರವರೆಗೆ ಲೋಕಸಭಾ ಸದಸ್ಯರಾಗಿ, ನಂತರ ಲೋಕಸಭೆಯ ಉಪಾಧ್ಯಕ್ಷರಾಗಿ ದೇಶದ ಪ್ರಗತಿಗೆ ದುಡಿದರು. ರಷ್ಯಾ, ಚೀನಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮುಂತಾದ ದೇಶಗಳಿಗೆ ಭೇಟಿ ನೀಡಿ ನಮ್ಮ ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾರಿದ್ದರು. 1968ರಲ್ಲಿ ನಿಧನರಾದರು’ ಎಂದು ಸುಮತೀಂದ್ರ ನಾಡಿಗ್ ಮಾಹಿತಿ ನೀಡಿದರು.

ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದ ವೀರರು: ‘ಗ್ರಾಮದ ಮಠದ ಜಯದೇವಯ್ಯ, ನರಸಿಂಹಮೂರ್ತಿ ಅವರೂ ಗಾಂಧೀಜಿ ಅವರ ಕರೆ ಮೇರೆಗೆ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದರು. ಹೆಂಡ ಮಾರಾಟದ ವಿರುದ್ಧ ಪಿಕೆಟಿಂಗ್ ನಡೆಸುತ್ತಿದ್ದರು. ಪ್ರಭಾತ್ ಫೇರಿ ಮೂಲಕ ಜಾಗೃತಿ ಮೂಡಿಸಿದ್ದರು. ಅದಕ್ಕಾಗಿ ಶಿವಮೊಗ್ಗದಲ್ಲಿ ಮೂರು ತಿಂಗಳು ಸೆರೆವಾಸ ಅನುಭವಿಸಿದ್ದರು. ಬಿಡುಗಡೆ ನಂತರ ಸಾರ್ವಜನಿಕರು ಇವರನ್ನು ಪುಷ್ಕರಣಿಯಿಂದ 101 ಜೋಡಿ ಎತ್ತುಗಳೊಂದಿಗೆ ಮೆರವಣಿಗೆ ನಡೆಸಿದ್ದರು’ ಎಂದು ಜಯದೇವಯ್ಯನವರ ಪುತ್ರ ಮುರುಗೇಂದ್ರಯ್ಯ ನೆನಪಿನ ಬುತ್ತಿ ಬಿಚ್ಚಿಟ್ಟರು.

‘ಬಂಧನದಿಂದ ವಿಚಲಿತರಾಗದೆ ನಂತರವೂ ಚಿಕ್ಕಜಾಜೂರು ರೈಲು ನಿಲ್ದಾಣಕ್ಕೆ ತೆರಳಿ ಉತ್ತರ ಕರ್ನಾಟಕದಿಂದ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುವ ಸ್ವಾತಂತ್ರ್ಯ ಹೋರಾಟಗಾರರಿಗೆ ರೊಟ್ಟಿ, ಬುತ್ತಿ, ಟೋಪಿಗಳನ್ನು ಪೂರೈಸುತ್ತಿದ್ದರು. ಗ್ರಾಮದ ಮೂಲಕ ಹಾದು ಹೋಗುವ ಸ್ವಾತಂತ್ರ್ಯ ಹೋರಾಟಗಾರರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದರು’ ಎಂದು ಅವರು ವಿವರಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.