ADVERTISEMENT

ರೈಲಲ್ಲೇ ಉಳಿದ ಹಣ, ಆಭರಣವಿದ್ದ ಬ್ಯಾಗ್‌: ಮರಳಿ ತಲುಪಿಸಿದ ರೈಲ್ವೆ ರಕ್ಷಣಾ ಪಡೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 3:02 IST
Last Updated 11 ಅಕ್ಟೋಬರ್ 2021, 3:02 IST
ಹಣ, ಚಿನ್ನ, ಬೆಳ್ಳಿ ಆಭರಣಗಳಿದ್ದ ಬ್ಯಾಗನ್ನು ರೈಲಿನಲ್ಲಿ ಬಿಟ್ಟು ಹೋಗಿದ್ದ ವಾರಸುದಾರರಿಗೆ ದಾವಣಗೆರೆ ರೈಲ್ವೆ ರಕ್ಷಣಾ ಪಡೆ ತಲುಪಿಸಿದರು.
ಹಣ, ಚಿನ್ನ, ಬೆಳ್ಳಿ ಆಭರಣಗಳಿದ್ದ ಬ್ಯಾಗನ್ನು ರೈಲಿನಲ್ಲಿ ಬಿಟ್ಟು ಹೋಗಿದ್ದ ವಾರಸುದಾರರಿಗೆ ದಾವಣಗೆರೆ ರೈಲ್ವೆ ರಕ್ಷಣಾ ಪಡೆ ತಲುಪಿಸಿದರು.   

ದಾವಣಗೆರೆ: ರೈಲಿನಿಂದ ಇಳಿಯುವ ಗಡಿಬಿಡಿಯಲ್ಲಿ ಹಣ, ಚಿನ್ನ, ಬೆಳ್ಳಿ ಆಭರಣಗಳಿದ್ದ ಬ್ಯಾಗನ್ನು ಬಿಟ್ಟು ಹೋಗಿದ್ದ ವಾರಸುದಾರರಿಗೆ ರೈಲ್ವೆ ರಕ್ಷಣಾ ಪಡೆ ತಲುಪಿಸಿದ್ದಾರೆ.

ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದ ಶ್ರೀನಿವಾಸ ರಾಜ್‌ ಕೆ.ಎಂ. ಮತ್ತವರ ಕುಟುಂಬವು ಬೆಂಗಳೂರಿನ ಕೆಂಗೇರಿಯಿಂದ ಹರಿಹರಕ್ಕೆ ಬಂದು ಭಾನುವಾರ ಬೆಳಿಗ್ಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಆಭರಣಗಳಿದ್ದ ಬ್ಯಾಗನ್ನು ಅವರ ಪತ್ನಿ ಅಲ್ಲೇ ಬಿಟ್ಟು ಹೋಗಿದ್ದರು. ಬ್ಯಾಗಲ್ಲಿ 164 ಗ್ರಾಂ ಚಿನ್ನಾಭರಣ, 100 ಗ್ರಾಂ ಬೆಳ್ಳಿ, ಮೊಬೈಲ್‌, ಔಷಧ, ₹ 12 ಸಾವಿರ ನಗದು ಸೇರಿ ₹ 7.31 ಲಕ್ಷ ಮೌಲ್ಯದ ಸೊತ್ತುಗಳು ಇದ್ದವು.

ಕೂಡಲೇ ಗಮನಕ್ಕೆ ಬಂದಿದ್ದರಿಂದ ಶ್ರೀನಿವಾಸ್‌ ರಾಜ್‌ ಕೆ.ಎಂ. ಅವರು ಈ ಬಗ್ಗೆ ರೈಲ್ವೆಗೆ ದೂರು ಸಲ್ಲಿಸಿದ್ದರು. ದೂರು ಸ್ವೀಕರಿಸಿದ ಮೈಸೂರಿನ ವಿಭಾಗೀಯ ಭದ್ರತಾ ನಿಯಂತ್ರಕರು ಅಗತ್ಯ ಸಹಾಯಕ್ಕಾಗಿ ದಾವಣಗೆರೆಯ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ಗೆ ನಿರ್ದೇಶಿಸಿದರು. ಆರ್‌ಪಿಎಫ್‌ ಎಎಸ್‌ಐ ವೆಂಕಟೇಶಮೂರ್ತಿ ಮತ್ತು ಶಿವಾನಂದ, ಎಂ.ಡಿ. ಶಫಿವುಲ್ಲಾ ತಂಡದವರು ತಪಾಸಣೆ ನಡೆಸಿ ದಾವಣಗೆರೆಯಲ್ಲಿ ಎಲ್ಲ ಮೌಲ್ಯಯುತ ಸೊತ್ತುಗಳೊಂದಿಗೆ ಬ್ಯಾಗ್‌ ಪತ್ತೆ ಹಚ್ಚಿದ್ದಾರೆ. ಬಳಿಕ ಮಾಲೀಕರನ್ನು ದಾವಣಗೆರೆ ಆರ್‌ಪಿಎಫ್‌ಗೆ ಕರೆಸಿ ಖಚಿತ ಪಡಿಸಿಕೊಂಡು ಹಸ್ತಾಂತರಿಸಲಾಯಿತು.

ADVERTISEMENT

ಮೈಸೂರು ವಿಭಾಗೀಯ ರೈಲ್ವೆ ಮ್ಯಾನೇಜರ್ ರಾಹುಲ್ ಅಗರ್ವಾಲ್ ಅವರು ಆರ್‌ಪಿಎಫ್‌ ಸಿಬ್ಬಂದಿಯ ಕರ್ತವ್ಯವನ್ನು ಶ್ಲಾಘಿಸಿದರು. ರೈಲಿನಲ್ಲಿ ಪ್ರಯಾಣಿಸುವವರು ತಮ್ಮ ವಸ್ತುಗಳ ಕಡೆ ನಿಗಾ ಇಡಬೇಕು. ಇಳಿಯುವ ಸಮಯದಲ್ಲಿ ಮರೆಯದೆ ಮುತುವರ್ಜಿಯಿಂದ ಒಯ್ಯಬೇಕು ಎಂದು ಅವರು ಸಲಹೆ ನೀಡಿದ್ದಾರೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ. ಮಂಜುನಾಥ ಕಣಮಡಿ
ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.