ADVERTISEMENT

ದಾವಣಗೆರೆ| ಸಂಕ್ರಾಂತಿಗೆ ‘ಇಂದಿರಾ ಆಹಾರ ಕಿಟ್‌’: ಕೆ.ಪಿ. ಮಧುಸೂದನ್‌

ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ, ಸಿದ್ಧತೆಗೆ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 5:18 IST
Last Updated 9 ಡಿಸೆಂಬರ್ 2025, 5:18 IST
   

ದಾವಣಗೆರೆ: ‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿದ್ದ 5 ಕೆ.ಜಿ ಅಕ್ಕಿಯ ಬದಲು ರಾಜ್ಯ ಸರ್ಕಾರ ರೂಪಿಸಿದ ‘ಇಂದಿರಾ ಆಹಾರ ಕಿಟ್‌’ ಸಂಕ್ರಾಂತಿ ಹೊತ್ತಿಗೆ ಜನರ ಕೈತಲುಪುವ ಸಾಧ್ಯತೆ ಇದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕೆ.ಪಿ. ಮಧುಸೂದನ್‌ ಮಾಹಿತಿ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಇಂದಿರಾ ಆಹಾರ ಕಿಟ್‌’ಗಳನ್ನು ಜನವರಿಯಿಂದ ವಿತರಿಸಲು ಸರ್ಕಾರ ಸೂಚಿಸಿದೆ. ಇದಕ್ಕೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು.

ADVERTISEMENT

‘ಇಂದಿರಾ ಕಿಟ್‌’ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸರಿಯಾದ ಸಿದ್ಧತೆ ಮಾಡಿಕೊಂಡು ಲೋಪ ಆಗದಂತೆ ಜನರಿಗೆ ತಲುಪಿಸಬೇಕು. ಅನ್ನಭಾಗ್ಯ ಯೋಜನೆ ಹಾಗೂ ಇಂದಿರಾ ಕಿಟ್‌ ಬಗ್ಗೆ ಗೊಂದಲ ಉಂಟಾಗದಂತೆ ಎಚ್ಚರವಹಿಸಬೇಕು’ ಎಂದು ಶಾಮನೂರು ಬಸವರಾಜ್‌ ಸೂಚನೆ ನೀಡಿದರು.

3,000 ಅರ್ಜಿ ಬಾಕಿ:

‘ಪಡಿತರ ಚೀಟಿ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ. ಹೀಗೆ ಸಲ್ಲಿಸಿದ 3,000 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಇವನ್ನು ಹೊರತುಪಡಿಸಿ ಹೊಸ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ’ ಎಂದು ಕೆ.ಪಿ. ಮಧುಸೂದನ್‌ ಸಭೆಗೆ ಸ್ಪಷ್ಟಪಡಿಸಿದರು.

‘ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರು ಹಾಗೂ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರು ಅರ್ಜಿ ಸಲ್ಲಿಸಿದ 3 ದಿನಗಳ ಒಳಗೆ ಪಡಿತರ ಚೀಟಿ ವಿತರಿಸಲಾಗುತ್ತದೆ. ಅರ್ಜಿಯ ಜೊತೆಗೆ ಸಲ್ಲಿಕೆಯಾಗುವ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ ಕುಟುಂಬದ ಆದಾಯವನ್ನು ಆಧರಿಸಿ ಚೀಟಿ ವಿತರಿಸಲಾಗುತ್ತದೆ’ ಎಂದರು.

ಮರಣ ನೋಂದಣಿ ವಿಳಂಬ:

ಮರಣ ನೋಂದಣಿಯಲ್ಲಿ ಆಗುತ್ತಿರುವ ಲೋಪದಿಂದಾಗಿ ‘ಗೃಹಲಕ್ಷ್ಮಿ’ ಯೋಜನೆಯ ಹಣ ಮೃತರ ಖಾತೆಗೆ ಜಮೆ ಆಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ‘ಸಂಶಯಾಸ್ಪದ ಫಲಾನುಭವಿಗಳಿಗೆ ಜೀವಿತ ಪ್ರಮಾಣ ಪತ್ರ ಕಡ್ಡಾಯಗೊಳಿಸಬೇಕು ಹಾಗೂ ಬ್ಯಾಂಕ್‌ ಖಾತೆಗಳಲ್ಲಿ ವಹಿವಾಟು ನಡೆಯದಂತೆ ತಡೆಯಬೇಕು’ ಎಂದು ಸಮಿತಿಯ ಸದಸ್ಯರು ಕೋರಿದರು.

‘ಜನನ ಮತ್ತು ಮರಣ ನೋಂದಣಿಯ ನಡುವೆ ದೊಡ್ಡ ವ್ಯತ್ಯಾಸ ಇರುವುದು ಗಮನಕ್ಕೆ ಬಂದಿದೆ. ಜನನದಂತೆ ಮರಣ ನೋಂದಣಿ ಆಗುತ್ತಿಲ್ಲ ಎಂಬುದು ಖಚಿತವಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್‌ ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾದ ರಾಜೇಶ್ವರಿ, ಅನೀಶ್‌ ಪಾಷ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.