
ದಾವಣಗೆರೆ: ಅಲ್ಲಲ್ಲಿ ಕಿತ್ತು ಹೋಗಿರುವ ಡಾಂಬರು ರಸ್ತೆ. ಅಪಾಯಕ್ಕೆ ಆಹ್ವಾನ ನೀಡುವಂತಿರುವ ಗುಂಡಿಗಳು. ವಾಹನಗಳು ಸಾಗಿದೊಡನೆ ಮುಖ, ಮೈಗೆ ರಾಚುವ ದೂಳು. ರಸ್ತೆಯ ನಡುವೆ ಬಿಸಿಲಿಗೆ ಮೈಯೊಡ್ಡಿ ಮಲಗಿರುವ ನಾಯಿಗಳು. ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸದ ರಾಶಿ....
ದಾವಣಗೆರೆ ಹಾಗೂ ಹರಿಹರ ತಾಲ್ಲೂಕಿನಲ್ಲಿರುವ ಕೈಗಾರಿಕಾ ಪ್ರದೇಶಗಳು ಅವ್ಯವಸ್ಥೆಯ ಆಗರವಾಗಿರುವುದಕ್ಕೆ ನಿದರ್ಶನಗಳಿವು.
ಈ ಪ್ರದೇಶಗಳಲ್ಲಿ ಗುಣಮಟ್ಟದ ರಸ್ತೆಗಳಿಲ್ಲ. ಸಮರ್ಪಕ ನೀರಿನ ವ್ಯವಸ್ಥೆ ದೂರದ ಮಾತಾಗಿದೆ. ಬೀದಿ ದೀಪಗಳು ಸರಿಯಾಗಿ ಉರಿಯದ ಕಾರಣ ಕಾರ್ಮಿಕರು ಹಾಗೂ ಇತರರು ರಾತ್ರಿ ಹೊತ್ತಿನಲ್ಲಿ ಜೀವ ಭಯದಲ್ಲೇ ಓಡಾಡಬೇಕಾಗಿದೆ. ಮಳೆಗಾಲದಲ್ಲಿ ರಸ್ತೆಗಳು ಕೆಸರುಮಯವಾಗಲಿದ್ದು, ವಾಹನ ಸವಾರರಿಗೆ ಸಂಕಟ ಶುರುವಾಗುತ್ತದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಕೈಗಾರಿಕೆಗಳ ಸ್ಥಾಪನೆಯನ್ನು ಉತ್ತೇಜಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ 7 ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದೆ. ಈ ಪೈಕಿ ನಾಲ್ಕು ಕಡೆಗಳಲ್ಲಿ ಈಗಾಗಲೇ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ.
ಕೆಐಎಡಿಬಿ ರೈತರಿಂದ ಭೂಸ್ವಾಧೀನ ಮಾಡಿಕೊಂಡಿರುವ 988 ಎಕರೆ ಜಮೀನಿನ ಪೈಕಿ ಅರ್ಧದಷ್ಟು ಭೂಮಿಯನ್ನು ಕೈಗಾರಿಕೋದ್ಯಮಿಗಳಿಗೆ ಹಂಚಿಕೆ ಮಾಡುವುದು ಇನ್ನೂ ಬಾಕಿ ಇದೆ. ಹಂಚಿಕೆ ಮಾಡಿ, ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳು ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ.
ಹತ್ತಾರು ಸಮಸ್ಯೆಯಿಂದಾಗಿ ಉದ್ಯೋಗಿಗಳು ಹಾಗೂ ಸಿಬ್ಬಂದಿ ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವುದೇ ಸವಾಲು ಎಂಬಂತಾಗಿದೆ. ಜಿಲ್ಲೆಯ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಹರಿಹರ ತಾಲ್ಲೂಕಿನ ಸಾರಥಿ– ಕುರುಬರಹಳ್ಳಿಯಲ್ಲಿ ಭೂಹಂಚಿಕೆ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ.
ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಐಡಿಸಿ) 4 ಸ್ಥಳಗಳಲ್ಲಿ ಕೈಗಾರಿಕಾ ವಸಾಹತು ನಿರ್ಮಿಸಿದೆ. ಇಲ್ಲಿ ಸಣ್ಣ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಕೆಐಎಡಿಬಿ ದಾವಣಗೆರೆ ಹೊರವಲಯದ ಲೋಕಿಕೆರೆಯಲ್ಲಿ 100 ಎಕರೆಗೂ ಹೆಚ್ಚು ಭೂಮಿಯನ್ನು ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಂಡಿತ್ತು.
ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು 1980ರಲ್ಲಿ 19 ಎಕರೆಯಲ್ಲಿ ಕೈಗಾರಿಕಾ ವಸಾಹತು ನಿರ್ಮಿಸಿದೆ. ಕೆಎಸ್‍ಎಸ್‍ಐಡಿಸಿ ಅಭಿವೃದ್ಧಿಪಡಿಸಿರುವ ಈ ವಸಾಹತು 2003ರಲ್ಲಿ ನಗರಸಭೆಗೆ ಹಸ್ತಾಂತರವಾಗಿತ್ತು.
ಪೈಪ್, ಪೀಠೋಪಕರಣ, ಎಲೆಕ್ಟ್ರಾನಿಕ್ ಉಪಕರಣ ಸೇರಿ ಇತರೆ ವಸ್ತುಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಒಟ್ಟು 48 ಕೈಗಾರಿಕೆಗಳು ಇಲ್ಲಿವೆ. ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ, ಕಂದಾಯ ಪಾವತಿಯಾಗುತ್ತಿದೆ. ಇದಕ್ಕೆ ಅನುಗುಣವಾಗಿ ಮಹಾನಗರ ಪಾಲಿಕೆ ಮೂಲಸೌಲಭ್ಯ ಒದಗಿಸಿಲ್ಲ ಎಂಬ ಬೇಸರ ಕೈಗಾರಿಕೋದ್ಯಮಿಗಳಲ್ಲಿದೆ.
ವಸಾಹತು ನಿರ್ಮಾಣವಾದ ಸಂದರ್ಭದಲ್ಲಿ ಅಭಿವೃದ್ಧಿಪಡಿಸಿದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. 24X7 ನೀರು ಪೂರೈಕೆಗೆ ಪೈಪ್‌ಲೈನ್ ಅಳವಡಿಕೆ ಮಾಡಲಾಗಿದೆ. ಆದರೆ, ನೀರು ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ.
ಕೆಐಎಡಿಬಿ ಅಭಿವೃದ್ಧಿಪಡಿಸಿದ ಲೋಕಿಕೆರೆ ಕೈಗಾರಿಕಾ ಪ್ರದೇಶದಲ್ಲಿಯೂ ಸಮಸ್ಯೆಗಳ ಸರಮಾಲೆ ಸೃಷ್ಟಿಯಾಗಿದೆ. ಇಲ್ಲಿನ ಒಳ ರಸ್ತೆಗಳು ಬಹುತೇಕ ಹಾಳಾಗಿವೆ. ರಸ್ತೆ ಬದಿ ಎಲ್ಲೆಂದರಲ್ಲಿ ಬಿಸಾಡಿರುವ ಕಟ್ಟಡ ತ್ಯಾಜ್ಯ ಕಣ್ಣಿಗೆ ರಾಚುತ್ತಿದೆ. ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಚಾವಸ್ತು ಸಾಗಣೆ ಹಾಗೂ ಮಾರುಕಟ್ಟೆಗೆ ಉತ್ಪನ್ನಗಳನ್ನು ಕೊಂಡೊಯ್ಯುವುದು ಕಷ್ಟವಾಗಿದೆ.
ಕೈಗಾರಿಕೆಗಳ ಬೆಳವಣಿಗೆಗೆ ಸಿಗಲಿ ಉತ್ತೇಜನ ಸೌಲಭ್ಯ ಕಲ್ಪಿಸದ್ದಕ್ಕೆ ಉದ್ಯಮಿಗಳ ಬೇಸರ ಅನಾರೋಗ್ಯದ ಭೀತಿಯಲ್ಲಿ ಕಾರ್ಮಿಕರು
ಜಿಲ್ಲೆಯಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯಬೇಕಿದೆ. ಕೈಗಾರಿಕೆಗಳಿಗೆ ಅವಶ್ಯವಾದ ಭೂಮಿ ವಿದ್ಯುತ್ ಸಂಪರ್ಕ ನೀರು ಸರಬರಾಜು ರಸ್ತೆ ವ್ಯವಸ್ಥೆ ಕಲ್ಪಿಸಲಿಶಂಭುಲಿಂಗಪ್ಪ ಎ.ಬಿ. ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ
ಹನಗವಾಡಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ನಿರ್ವಹಿಸುವವರು ವಾರಕ್ಕೊಮ್ಮೆ ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಸಂಬಂಧಿಸಿದವರು ಕನಿಷ್ಠ ಮೂಲ ಸೌಲಭ್ಯಗಳನ್ನಾದರೂ ಕಲ್ಪಿಸಬೇಕುಆನಂದ್ ಎಂ. ಎಂಜಿನಿಯರ್
ಹೆಸರಿಗಷ್ಟೇ ಡಾಂಬರು ರಸ್ತೆಗಳು
- ಇನಾಯತ್ ಉಲ್ಲಾ ಟಿ.
ಹರಿಹರ: 2014-15ನೇ ಸಾಲಿನಲ್ಲಿ ತಾಲ್ಲೂಕಿನ ಹನಗವಾಡಿ ಗ್ರಾಮ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡ 50 ಎಕರೆಗೂ ಹೆಚ್ಚು ಜಾಗದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿಪಡಿಸಿತ್ತು. ಈ ಪ್ರದೇಶದಲ್ಲಿ ಸದ್ಯ ಆಹಾರ ಉತ್ಪನ್ನ ತಯಾರಿಸುವ ಹಾಗೂ ಇತರೆ ಕೈಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ಪಕ್ಕದಲ್ಲೇ ಬೆಂಗಳೂರು- ಪುಣೆ ರಾಷ್ಟ್ರೀಯ ಹೆದ್ದಾರಿ ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ ಹಾಗೂ ರೈಲ್ವೆ ಮಾರ್ಗವನ್ನು ಹೊಂದಿರುವ ಈ ಕೈಗಾರಿಕಾ ಪ್ರದೇಶವು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಈ ಕೈಗಾರಿಕಾ ಪ್ರದೇಶದಲ್ಲಿ ದಾಸ್ತಾನು ತುಂಬಿಕೊಂಡು ಲಾರಿಗಳು ಸಾಗಿದರೆ ಆಕಾಶದೆತ್ತರಕ್ಕೆ ದೂಳು ಹರಡುತ್ತದೆ. ಇಲ್ಲಿ ಹೆಸರಿಗೆ ಮಾತ್ರ ಡಾಂಬರು ರಸ್ತೆಗಳಿವೆ! ರಸ್ತೆಗಳ ಡಾಂಬರು ಕಿತ್ತು ಹೋಗಿ ಜಲ್ಲಿಗಳು ಎದ್ದಿವೆ. ಅಲ್ಲಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಈ ಗುಂಡಿಮಯ ರಸ್ತೆಗಳನ್ನು ದಾಟಿ ಮುಂದೆ ಸಾಗಲು ಲಾರಿಯಂತಹ ದೊಡ್ಡ ವಾಹನಗಳ ಸವಾರರು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಕಾರು ಬೈಕ್ ಆಟೊದಂತಹ ಲಘು ವಾಹನಗಳ ಸವಾರರ ಪರದಾಟವಂತೂ ಹೇಳತೀರದು. ಮಳೆಗಾಲದಲ್ಲಿ ಈ ರಸ್ತೆಗಳು ‘ಯಮರೂಪಿ’ಯಾಗಿ ಬದಲಾಗುತ್ತವೆ. ಇಲ್ಲಿನ ರಸ್ತೆಗಳ ಗುಂಡಿಗಳಿಗೆ ಆಗಾಗ ತೇಪೆ ಹಾಕುವ ಕೆಲಸ ನಡೆದರೂ ಶಾಶ್ವತವಾಗಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಆಗುತ್ತಿಲ್ಲ. ಪಾದಚಾರಿ ಮಾರ್ಗ ಮಾಯ: ಇಲ್ಲಿನ ಕೈಗಾರಿಕಾ ಪ್ರದೇಶದ ರಸ್ತೆಯ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗಗಳಿವೆ. ಆದರೆ ಅವುಗಳ ಮೇಲೆ ಅಕ್ಕ– ಪಕ್ಕದ ಕೆಲವು ಕೈಗಾರಿಕೆಯವರು ಸಾಮಗ್ರಿಗಳನ್ನು ಇಟ್ಟಿದ್ದಾರೆ. ಅದರೊಂದಿಗೆ ಅಲ್ಲಲ್ಲಿ ತ್ಯಾಜ್ಯವೂ ಬಿದ್ದಿದೆ. ಪಾದಚಾರಿಗಳು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಿದೆ. ಕೈಗಾರಿಕಾ ಪ್ರದೇಶದಲ್ಲಿ ನೀರಿನ ಅವಶ್ಯಕತೆ ಹೆಚ್ಚಾಗಿಯೇ ಇದೆ. ಆದರೆ ಇಲ್ಲಿ ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಯೇ ಇಲ್ಲವಾಗಿದೆ. ನೀರಿನ ಅಗತ್ಯ ಇರುವವರು ತಮ್ಮದೇ ಕೊಳವೆಬಾವಿಯನ್ನು ಕೊರೆಯಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲಿನ ಸಾಕಷ್ಟು ಕೈಗಾರಿಕೆಗಳು ಹಗಲು –ರಾತ್ರಿ ಎನ್ನದೇ 24X7 ಕಾರ್ಯ ನಿರ್ವಹಿಸುತ್ತವೆ. ಆದರೆ ರಾತ್ರಿ ಪಾಳಿ ಕೆಲಸಕ್ಕೆ ಬರುವ ಕಾರ್ಮಿಕರು ಸಿಬ್ಬಂದಿ ಕೈಗಾರಿಕೆಗಳನ್ನು ತಲುಪಲು ಕತ್ತಲೆಯಲ್ಲೇ ಸಾಗಬೇಕಿದೆ. ಹಲವು ದಿನಗಳಿಂದ ಬೀದಿ ದೀಪಗಳ ದುರಸ್ತಿಯೇ ನಡೆದಿಲ್ಲ. ಜಾಲಿ ಗಿಡದ ಹಾವಳಿ: ಖಾಲಿ ಇರುವ ನಿವೇಶನಗಳಲ್ಲಿ ಜಾಲಿ ಗಿಡ ಗಂಟಿ ಹುಲುಸಾಗಿ ಬೆಳೆದು ನಿಂತಿವೆ. ಇದರಿಂದಾಗಿ ವಿಷ ಜಂತುಗಳ ಕಾಟವೂ ಇಲ್ಲಿ ವಿಪರೀತವಾಗಿದೆ. ಕಾರ್ಮಿಕರು ಭಯದಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಖಾಲಿ ನಿವೇಶನಗಳಲ್ಲಿ ಇನ್ನಷ್ಟು ಕೈಗಾರಿಕೆಗಳು ಆರಂಭವಾಗುವ ಬದಲು ಇಲ್ಲಿರುವ ಕೈಗಾರಿಕೆಗಳೇ ಬೇರೆ ಕಡೆಗೆ ಸ್ಥಳಾಂತರಗೊಳ್ಳುವ ಅಪಾಯಕಾರಿ ವಾತಾವರಣ ಇಲ್ಲಿ ಸೃಷ್ಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.