ADVERTISEMENT

ಜಗಳೂರಿನಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿ: ಸಂತೋಷ್ ಹಿರೇಮಠ್

ಎಐವೈಎಫ್ ತಾಲ್ಲೂಕು ಸಮ್ಮೇಳನದಲ್ಲಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 16:14 IST
Last Updated 6 ಮಾರ್ಚ್ 2025, 16:14 IST
ಜಗಳೂರಿನಲ್ಲಿ ಗುರುವಾರ ಎಐವೈಎಫ್ ತಾಲ್ಲೂಕು ಘಟಕದ ಸಮ್ಮೇಳನದಲ್ಲಿ ರಾಜ್ಯ ಸಮ್ಮೇಳನದ ಭಿತ್ತಪತ್ರ ಬಿಡುಗಡೆ ಮಾಡಲಾಯಿತು
ಜಗಳೂರಿನಲ್ಲಿ ಗುರುವಾರ ಎಐವೈಎಫ್ ತಾಲ್ಲೂಕು ಘಟಕದ ಸಮ್ಮೇಳನದಲ್ಲಿ ರಾಜ್ಯ ಸಮ್ಮೇಳನದ ಭಿತ್ತಪತ್ರ ಬಿಡುಗಡೆ ಮಾಡಲಾಯಿತು    

ಜಗಳೂರು: ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕಿನಲ್ಲಿ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ರಾಜ್ಯ ಘಟಕದ ಕಾರ್ಯದರ್ಶಿ ಸಂತೋಷ್ ಹಿರೇಮಠ್ ಒತ್ತಾಯಿಸಿದರು.

ಪಟ್ಟಣದಲ್ಲಿ ಗುರುವಾರ ನಡೆದ ಎಐವೈಎಫ್ ತಾಲ್ಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಜನ ಸಂವಿಧಾನಾತ್ಮಕ ಮೌಲ್ಯಗಳನ್ನು, ಏಕ್ಯತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಬೇಕು. ದೇಶದಲ್ಲಿ ಸಂವಿಧಾನ ಬದಲಿಸುವ ಹುನ್ನಾರ ನಡೆಸಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಕೋಮುವಾದ ಉದ್ದೀಪನಗೊಳಿಸುವ ಹುನ್ನಾರ ನಡೆಯುತ್ತಿದೆ. ಬಡತನ, ಆರೋಗ್ಯ, ನಿರುದ್ಯೋಗ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಭುತ್ವದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ’ ಎಂದು ಹೇಳಿದರು.

ADVERTISEMENT

ಸರ್ಕಾರಗಳು ಪದವೀಧರ ನಿರುದ್ಯೋಗಿ ಯುವಕರಿಗೆ ಅತಿಥಿ ಶಿಕ್ಷಕರ ಹೆಸರಲ್ಲಿ ವಂಚನೆ ಮಾಡುತ್ತಿವೆ. ಪ್ರತಿ ವರ್ಷ ಉದ್ಯೋಗ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣ ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವಜನರು ನಿರುದ್ಯೋಗಿಗಳಾಗಿ ಬೀದಿಗೆ ಬಿದ್ದಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಪ್ರತಿ ವರ್ಷ ಸಾವಿರಾರು ನಿರುದ್ಯೋಗಿ ಪದವೀಧರರು ಹೊರ ಹೊಮ್ಮುತ್ತಿದ್ದು, ಸ್ಥಳೀಯವಾಗಿ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಪಟ್ಟಣದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರ ಆರಂಭಿಸಬೇಕು. ಡಿಪ್ಲೊಮಾ, ಐಟಿಐ ಕಾಲೇಜು ಉನ್ನತೀಕರಿಸಬೇಕು. ಗುಳೆ ತಪ್ಪಿಸುವ ದಿಸೆಯಲ್ಲಿ ಟೆಕ್ಸ್‌ಟೈಲ್ ಗಾರ್ಮೆಂಟ್ಸ್ ತೆರೆಯಬೇಕು ಎಂದು ಎಐವೈಎಫ್ ತಾಲ್ಲೂಕು ಘಟಕದ ಅಧ್ಯಕ್ಷ ಮಾದಿಹಳ್ಳಿ ಮಂಜಪ್ಪ ಒತ್ತಾಯಿಸಿದರು.

ಇದೇ ವೇಳೆ 11ನೇ ರಾಜ್ಯ ಸಮ್ಮೇಳನದ ಭಿತ್ತಿಚಿತ್ರ ಅನಾವರಣಗೊಳಿಸಲಾಯಿತು.

ಎಐಟಿಯುಸಿ ಗೌರವ ಅಧ್ಯಕ್ಷ ಮಹಮ್ಮದ್ ಭಾಷಾ, ಕಟ್ಟಡ ಕಾರ್ಮಿಕರ ಸಂಘಟನೆ ತಾಲ್ಲೂಕು ಅಧ್ಯಕ್ಷ ವೀರಣ್ಣ, ಕಾರ್ಯದರ್ಶಿ ತಿಪ್ಪೇಸ್ವಾಮಿ, ಎಐವೈಎಫ್ ಕಾರ್ಯದರ್ಶಿ ದೇವಿಕೆರೆ ಮಧು, ಪದಾಧಿಕಾರಿಗಳಾದ ಕಾನನಕಟ್ಟೆ ರಘು, ಗೌತಮ್, ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.