ADVERTISEMENT

ದಾವಣಗೆರೆ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು: ಸಿದ್ದೇಶ್ವರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 14:30 IST
Last Updated 14 ಡಿಸೆಂಬರ್ 2019, 14:30 IST
ಜಿ.ಎಂ. ಸಿದ್ದೇಶ್ವರ
ಜಿ.ಎಂ. ಸಿದ್ದೇಶ್ವರ   

ದಾವಣಗೆರೆ: ‘ಜಿಲ್ಲೆಯಲ್ಲಿ ಐವರು, ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿ ನೋಡಿದರೆ 6 ಮಂದಿ ಬಿಜೆಪಿ ಶಾಸಕರಿದ್ದಾರೆ. ಅವರಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇನೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರಿಗೂ ಕಷ್ಟ ಇದೆ. ಯಾಕೆಂದರೆ ಬಿಜೆಪಿ 105 ಸ್ಥಾನಗಳನ್ನು ಹೊಂದಿತ್ತು. ಬಹುಮತಕ್ಕೆ 8 ಸ್ಥಾನ ಕಡಿಮೆ ಇತ್ತು. ಮೈತ್ರಿ ಸರ್ಕಾರದ ಮೇಲಿನ ಅಸಮಾಧಾನದಿಂದ 17 ಮಂದಿ ರಾಜೀನಾಮೆ ನೀಡಿದ್ದರಿಂದ ಆ ಸರ್ಕಾರ ಬಿತ್ತು. 17ರಲ್ಲಿ 15 ಸ್ಥಾನಗಳಿಗೆ ಚುನಾವಣೆ ನಡೆಯಿತು. ಅದರಲ್ಲಿ 12 ಮಂದಿ ಗೆದ್ದಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡಬೇಕಾಗುತ್ತದೆ. ಉಳಿಯುವ 2–3 ಸ್ಥಾನಗಳನ್ನು ಯಾವ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ನೋಡಿ ಸರಿಯಾದ ನಿರ್ಧಾರವನ್ನು ಮುಖ್ಯಮಂತ್ರಿ ಮಾಡಲಿದ್ದಾರೆ ಎಂಬ ವಿಶ್ವಾಸ ಇದೆ’ ಎಂದು ತಿಳಿಸಿದರು.

ವಲಸೆ–ಮೂಲ ಭೇದವಿಲ್ಲ: ‘ಮೂಲ ಬಿಜೆಪಿಗರು, ವಲಸೆ ಬಂದವರು ಎಂಬ ಭೇದ ಪಕ್ಷದಲ್ಲಿ ಇಲ್ಲ. ಹಾಗೆ ನೋಡಿದರೆ ಬಹುತೇಕರು ವಲಸೆ ಬಂದವರೇ. ನಾನು ಕೂಡ ಕಾಂಗ್ರೆಸ್‌ನಲ್ಲಿದ್ದವ. ಒಮ್ಮೆ ಬಿಜೆಪಿ ಸೇರಿದ ಮೇಲೆ ಎಲ್ಲರೂ ಒಂದೇ. ವಲಸಿಗ, ಮೂಲ ಎಂದೆಲ್ಲ ಹೇಳಿಕೊಂಡಿದ್ದರೆ ಪಕ್ಷ ಬೆಳೆಯುವುದಿಲ್ಲ. ಎಲ್ಲಾ ಶಾಸಕರಿಗೆ ಸಚಿವ ಸ್ಥಾನ ಕೇಳುವ ಹಕ್ಕಿದೆ. ಸಂಪುಟ ವಿಸ್ತರಣೆ ಆದ ಮೇಲೆ ಎಲ್ಲರೂ ಸುಮ್ಮನಾಗುವರು’ ಎಂದು ಹೇಳಿದರು.

ADVERTISEMENT

‘ಕೈಗಾರಿಕಾ ಕಾರಿಡಾರ್‌ ಮಾಡಲು ಮನವಿ ಮಾಡಿದ್ದೇನೆ. ಈಗ ಸ್ಥಿರ ಸರ್ಕಾರ ಬಂದಿದೆ. ಇನ್ನು ಮೂರೂವರೆ ವರ್ಷಗಳ ಒಳಗೆ ಜಗದೀಶ ಶೆಟ್ಟರ್ ಮೂಲಕ ಮಾಡಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.