ADVERTISEMENT

ವಿಧಾನ ಪರಿಷತ್ತಿಗೆ ಮೂಲ ಕಾರ್ಯಕರ್ತರ ನೇಮಕಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 8:47 IST
Last Updated 1 ಜುಲೈ 2020, 8:47 IST

ದಾವಣಗೆರೆ: ರಾಜ್ಯ ವಿಧಾನ ಪರಿಷತ್ತಿಗೆ ಖಾಲಿಯಾಗಿರುವ ಐದು ಸ್ಥಾನಗಳಿಗೆ ಪಕ್ಷವನ್ನು ಬೆಳೆಸಲು ಶ್ರಮಿಸಿದ ಮೂಲ ಕಾರ್ಯಕರ್ತರನ್ನು ನೇಮಕ ಮಾಡಬೇಕು ಎಂದು ಸದಸ್ಯ ಆಕಾಂಕ್ಷಿಗಳಾಗಿರುವ ಬಿಜೆಪಿಯ ಹಿರಿಯ ಕಾರ್ಯಕರ್ತರಾದ ಕೆ.ಎನ್‌. ಓಂಕಾರಪ್ಪ ಹಾಗೂ ಎಂ.ಪಿ. ಕೃಷ್ಣಮೂರ್ತಿ ಪವಾರ್‌ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಕೃಷ್ಣಮೂರ್ತಿ ಪವಾರ್‌, ‘40 ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇವೆ. ಆರ್‌.ಎಸ್‌.ಎಸ್‌, ಬಜರಂಗ ದಳ, ವಿಶ್ವ ಹಿಂದೂ ಪರಿಷತ್‌ನಲ್ಲೂ ನಾವು ಕೆಲಸ ಮಾಡಿದ್ದೇವೆ. ರಾಜ್ಯ ಸಭೆಗೆ ಪಕ್ಷದ ಸಾಮಾನ್ಯ ಕಾರ್ಯಕರ್ತರನ್ನು ನೇಮಕ ಮಾಡಿದ ರೀತಿಯಲ್ಲೇ ನನ್ನನ್ನು ಅಥವಾ ಓಂಕಾರಪ್ಪ ಅವರನ್ನು ನೇಮಕ ಮಾಡಬೇಕು. ಮಧ್ಯ ಕರ್ನಾಟಕ ಭಾಗದವರಿಗೆ ಅವಕಾಶ ಮಾಡಿಕೊಟ್ಟರೆ ಪರಿಷತ್ತಿನಲ್ಲಿ ದಾವಣಗೆರೆ ಜಿಲ್ಲೆಯ ಸಮಸ್ಯೆಗಳಿಗೆ ಧ್ವನಿ ಎತ್ತಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ಓಂಕಾರಪ್ಪ ಮಾತನಾಡಿ, ‘ವೈದ್ಯಕೀಯ, ಶಿಕ್ಷಣ, ಸಾಮಾಜಿಕ, ಹಿಂದುಳಿದ ವರ್ಗಗಳ ವಿಭಾಗದ ಸದಸ್ಯತ್ವ ಸ್ಥಾನ ಖಾಲಿಯಾಗಿದೆ. ಶಿಕ್ಷಣ ಹಾಗೂ ಪರಿಶಿಷ್ಟ ಜಾತಿಯ ವಿಭಾಗದಿಂದ ನನ್ನನ್ನು ನೇಮಕ ಮಾಡಲು ಅವಕಾಶವಿದೆ. ಪವಾರ್‌ ಅವರನ್ನು ಹಿಂದುಳಿದ ವಿಭಾಗದಿಂದ ನೇಮಿಸಬಹುದಾಗಿದೆ. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ. ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ ಅವರು ನಮ್ಮನ್ನು ನೇಮಕ ಮಾಡುವಂತೆ ಮುಖ್ಯಮಂತ್ರಿಗೆ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಒಂದೊಮ್ಮೆ ನಮ್ಮನ್ನು ಆಯ್ಕೆ ಮಾಡದಿದ್ದರೂ ಖಾಲಿ ಇರುವ ಐದು ಸ್ಥಾನಗಳನ್ನೂ ಪಕ್ಷದ ಮೂಲ ಕಾರ್ಯಕರ್ತರಿಗೇ ನೀಡಬೇಕು’ ಎಂದು ಮನವಿ ಮಾಡಿದರು.

ಪಕ್ಷದ ಹಿರಿಯ ಕಾರ್ಯಕರ್ತರಾದ ಆರ್‌. ಪ್ರತಾಪ್‌, ಡಿ. ಬಸವರಾಜ ಗುಬ್ಬಿ, ರವೀಂದ್ರ, ರಣಜೀತ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.