ADVERTISEMENT

ದಾವಣಗೆರೆ: ಬೆಳೆಗಳಿಗೆ ಬೇಕಿದೆ ಭದ್ರಾ ನೀರು

ಕಾಲುವೆಗಳಿಗೆ ನೀರು ಹರಿಸಲು ರೈತರ ಒತ್ತಾಯ, ಇಂದು ಐಸಿಸಿ ಸಭೆ

ಚಂದ್ರಶೇಖರ ಆರ್‌.
Published 4 ಜನವರಿ 2025, 7:19 IST
Last Updated 4 ಜನವರಿ 2025, 7:19 IST
ಮಲೇಬೆನ್ನೂರು ಭಾಗದಲ್ಲಿ ಭತ್ತದ ಸಸಿ ಮುಡಿ ಕೆಲಸದಲ್ಲಿ ನಿರತರಾಗಿರುವ ರೈತರು
ಮಲೇಬೆನ್ನೂರು ಭಾಗದಲ್ಲಿ ಭತ್ತದ ಸಸಿ ಮುಡಿ ಕೆಲಸದಲ್ಲಿ ನಿರತರಾಗಿರುವ ರೈತರು   

ದಾವಣಗೆರೆ: ಜಿಲ್ಲೆಯ ವಿವಿಧೆಡೆ ರೈತರು ಭತ್ತದ ಸಸಿ ಮಡಿ ತಯಾರಿಗೆ ಸಿದ್ಧತೆ ನಡೆಸಿದ್ದಾರೆ. ಬೇಸಿಗೆಯ ಹೊಸ್ತಿಲಲ್ಲಿ ಅಡಿಕೆ ತೋಟಗಳಿಗೆ ಅಗತ್ಯವಾಗಿ ನೀರು ಬೇಕಿದೆ. ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಶೀಘ್ರ ನೀರು ಹರಿಸದಿದ್ದರೆ ಭತ್ತ ಬೆಳೆಯುವುದು ಕಷ್ಟ. ಅಡಿಕೆ ತೋಟಗಳಿಗೆ ಹಾನಿಯಾಗುವ ಸಂಭವವೂ ಇದೆ.

ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಕಳೆದ ನವೆಂಬರ್‌ 29ರಿಂದ ನೀರು ಹರಿಸುವುದನ್ನು ನಿಲ್ಲಿಸಲಾಗಿದ್ದು, ಮತ್ತೆ ಕಾಲುವೆ ಮೂಲಕ ಶೀಘ್ರ ನೀರು ಹರಿಸಬೇಕು ಎಂಬುದು ರೈತರ ಒತ್ತಾಯ.

ಬೇಸಿಗೆ ಹಂಗಾಮಿನ ಕೃಷಿ ಚಟುವಟಿಕೆ ಗರಿಗೆದರಿದ್ದು, ಈಗಾಗಲೇ ಹೊಳೆಸಾಲು, ಅಚ್ಚುಕಟ್ಟು, ತೋಟ, ತಗ್ಗು ಪ್ರದೇಶದ ಜಮೀನು ಮತ್ತು ಕೊಳವೆಬಾವಿ ವ್ಯವಸ್ಥೆ ಇರುವ ರೈತರು ಭತ್ತದ ಸಸಿ ಮುಡಿ ತಯಾರಿ ನಡೆಸಿದ್ದಾರೆ. ಕೆಲವರು ಈಗಾಗಲೇ ಭತ್ತದ ಬೀಜ ‌ಚೆಲ್ಲಿದ್ದಾರೆ.

ADVERTISEMENT

ಇನ್ನುಳಿದ ರೈತರು ಸಸಿಮಡಿಗೆ ಬೀಜ ಚೆಲ್ಲಲು ಕಾಲುವೆಗಳಲ್ಲಿ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಇನ್ನೂ ಕೆಲವರು ಬೀಜ ಉಗ್ಗುವ ಮೂಲಕ ಚೆಲ್ಲುವ ಪದ್ಧತಿ ಅನುಸರಿಸಲು ನೀರು ಹರಿಸುವುದನ್ನೇ ಕಾಯುತ್ತಿದ್ದಾರೆ.

ಪ್ರಸ್ತುತ ಜಲಾಶಯದಲ್ಲಿ ನೀರಿನ ಮಟ್ಟ 183 ಅಡಿ ಇದೆ. ನೀರು ಬಿಡುವುದು ತಡವಾದರೆ ಬೇಸಿಗೆ ಹಂಗಾಮಿನಲ್ಲಿ ಭತ್ತದ ಬೆಳೆಗೆ ಅನಾನುಕೂಲವಾಗುತ್ತದೆ. ನೀರು ಬಿಡುವುದು ವಿಳಂಬವಾದರೆ ಈಗಾಗಲೇ ಸಸಿ ಮುಡಿ ಸಿದ್ಧಪಡಿಸಿದವರಿಗೂ, ನೀರು ಬಿಟ್ಟ ತಕ್ಷಣ ಬೀಜ ಚೆಲ್ಲುವವರಿಗೂ 1 ತಿಂಗಳು ವ್ಯತ್ಯಾಸ ಆಗುತ್ತದೆ.

ಅಚ್ಚುಕಟ್ಟು ಭಾಗದ ರೈತರು ಭದ್ರಾ ನೀರನ್ನೇ ಆಶ್ರಯಿಸಿದ್ದಾರೆ. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ದಾವಣಗೆರೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 65,847 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತವನ್ನೇ ಬೆಳೆಯಲಾಗುತ್ತದೆ. ಇದರ ಜತೆಗೆ ಅಡಿಕೆ ಹಾಗೂ ಅಲ್ಪ ಪ್ರಮಾಣದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಭದ್ರಾ ಜಲಾಶಯದ ನೀರಿನ ಲಭ್ಯತೆಯಿಂದ ಜಿಲ್ಲೆಯಲ್ಲಿ ಅಂದಾಜು 1.60 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ.

ಭದ್ರಾ ಕಾಡಾ ನೀರಾವರಿ ಸಲಹಾ ಸಮಿತಿ (ಐಸಿಸಿ) ಅಧ್ಯಕ್ಷ, ಸಚಿವ ಮಧು ಬಂಗಾರಪ್ಪ ಶುಕ್ರವಾರ ಕಾಡಾ ಅಧ್ಯಕ್ಷ ಹಾಗೂ ಅಧಿಕಾರಿಗಳೊಂದಿಗೆ ವರ್ಚ್ಯುಯಲ್‌ ಮೂಲಕ ಸಮಾಲೋಚನಾ ಸಭೆ ನಡೆಸಿದರು. ಐಸಿಸಿ ಸಭೆ ಹಾಗೂ ನೀರು ಅಗತ್ಯದ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

‘ಕೊಳವೆಬಾವಿ ನೀರು ಅವಲಂಬಿಸಿ ಕೆಲವರು ಅಡಿಕೆ ತೋಟ ಮಾಡಿಕೊಂಡಿದ್ದಾರೆ. ಬಿಸಿಲು ಇರುವ ಕಾರಣ ಅಡಿಕೆ ತೋಟಗಳಿಗೆ ತಕ್ಷಣ ನೀರು ಬೇಕು. ಭತ್ತದ ಸಸಿ ಮಡಿ ತಯಾರಿಗೂ ನೀರು ಬೇಕಿದೆ. ಶೀಘ್ರ ಕಾಡಾ ಸಭೆ ಕರೆದು ನೀರಿನ ವೇಳಾಪಟ್ಟಿ ಬಿಡುಗಡೆ ಮಾಡಬೇಕು’ ಎಂದು ಮಲ್ಲನಾಯಕನಹಳ್ಳಿಯ ರೈತ ರೇವಣಸಿದ್ದಪ್ಪ ಒತ್ತಾಯಿಸಿದರು.

‘120 ದಿನ ನೀರು ಬಿಟ್ಟು ಮತ್ತೆ ಬಿಡುವು ನೀಡಿ ಮತ್ತೆ 120 ದಿನ ನೀರು ಬಿಡುಗಡೆ ಮಾಡಲು ಯೋಜಿಸಲಾಗಿದೆ. ರೈತ ಮುಖಂಡರ ಸಲಹೆ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕಾಡಾ ಅಧ್ಯಕ್ಷ ಡಾ. ಅಂಶುಮಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ಭಾಗದವರು ಈಗ ಇನ್ನೊಂದು ಭಾಗದವರು ಸ್ವಲ್ಪ ತಡವಾಗಿ ನೀರು ಬಿಡುವಂತೆ ಮನವಿ ಮಾಡುತ್ತಿದ್ದಾರೆ. ಐಸಿಸಿ ಸಭೆಯಲ್ಲಿ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಗುವುದು
ಡಾ. ಅಂಶುಮಂತ್‌ ಕಾಡಾ ಅಧ್ಯಕ್ಷ
‘ಬೆಳೆ ಪದ್ಧತಿ ಬದಲಾದರೂ ವೇಳಾಪಟ್ಟಿ ಹಳೆಯದು’
‘ಕೂಡಲೇ ಕಾಲುವೆಗಳಿಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗಲಿದೆ. ಹಂತಹಂತವಾಗಿ ನೀರು ಬಿಡುವ ಕಾರಣ ನೀರು ಜಮೀನುಗಳಿಗೆ ಬರಲು ಕನಿಷ್ಠ 4 ದಿನ ಬೇಕು. ಈಗ ನೀರು ಉಳಿಸಿಕೊಂಡು ಮುಂದೆ ಬಿಡುತ್ತೇವೆ ಎಂದರೆ ಸರಿಯಲ್ಲ. ಅಗತ್ಯಕ್ಕೆ ಅನುಗುಣವಾಗಿ ನೀರು ಬಿಡಬೇಕು’ ಎಂದು ಭದ್ರಾ ಕಾಡಾ ನೀರಾವರಿ ಸಲಹಾ ಸಮಿತಿ ಸದಸ್ಯ ತೇಜಸ್ವಿ ಪಟೇಲ್‌ ಒತ್ತಾಯಿಸಿದರು. ‘ಭದ್ರಾ ಜಲಾಶಯ ನಿರ್ಮಾಣವಾದ ಸಂದರ್ಭದಲ್ಲಿನ ಬೆಳೆ ಪದ್ಧತಿ ಅನುಸಾರವೇ ಈಗಲೂ ನೀರು ಬಿಡಲಾಗುತ್ತಿದೆ. ಕೆಲ ದಶಕದಿಂದ ಈಚೆಗೆ ಬೆಳೆ ಪದ್ಧತಿ ಬದಲಾಗಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆ ವ್ಯಾಪ್ತಿ ಕಡಿಮೆಯಾಗಿದೆ. ಅಡಿಕೆ ಹಾಗೂ ಅರೆ ನೀರಾವರಿ ಬೆಳೆ ಹೆಚ್ಚು ಆಗಿದೆ. ಇದನ್ನು ಆಧರಿಸಿ ನೀರು ಬಿಡುಗಡೆ ವೇಳಾಪಟ್ಟಿ ಬದಲಾಯಿಸಬೇಕು’ ಎಂದು ಅವರು ಒತ್ತಾಯಿಸಿದರು.  ‘ಕಾಲುವೆಗಳ ನಿರ್ವಹಣೆಯೂ ಮುಖ್ಯ. ಬೆಳೆ ಪದ್ಧತಿ ಕುರಿತು ಐಸಿಸಿ ಸಭೆಯಲ್ಲಿ ಚರ್ಚೆ ನಡೆಸುತ್ತೇನೆ’ ಎಂದು ಅವರು ಹೇಳಿದರು. ‘ತಕ್ಷಣದಿಂದ ಕಾಲುವೆಗಳಿಗೆ ನೀರು ಹರಿಸಿ’ ‘ತಕ್ಷಣದಿಂದ ಕಾಲುವೆಗಳಿಗೆ ನೀರು ಹರಿಸಬೇಕಿದೆ. ಚೆಲ್ಲು ಭತ್ತದ ಪದ್ಧತಿಗೂ ನೀರು ಅಗತ್ಯ ಹೆಚ್ಚಿದೆ. ನೀರಿನ ಲಭ್ಯತೆ ಇದ್ದ ಶೇ 50ರಷ್ಟು ರೈತರು ಭತ್ತದ ಬೀಜ ಹಾಕಿ 10–12 ದಿನ ಆಗಿದೆ. ಇನ್ನು ಕೆಲ ರೈತರು ಬೀಜ ಹಾಕಲು ನೀರು ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ತಡವಾಗಿ ಬಿತ್ತನೆ ಬೀಜ ಹಾಕಿದವರು ನೀರನ್ನು ಒಂದು ತಿಂಗಳು ಹೆಚ್ಚು ಕೊಡಬೇಕು ಎಂದು ಬೇಡಿಕೆ ಇಡಬಹುದು’ ಎಂದು ರೈತ ಮುಖಂಡ ಕೋಳೆನಹಳ್ಳಿ ಬಿ.ಎಂ. ಸತೀಶ್‌ ವಿವರಿಸಿದರು. ‘ಕಾಲುವೆ ನೀರು ಅಧರಿಸಿ ತೋಟ ಮಾಡದ ರೈತರು ಕಳೆದ ಬೇಸಿಗೆಯಲ್ಲಿ ನಷ್ಟ ಅನುಭವಿಸಿದ್ದರು. ಕೆಲ ತೋಟಗಳು ಹಾಳಾಗಿದ್ದವು. ಟ್ಯಾಂಕರ್‌ ನೀರು ಹಾಯಿಸಿ ಕೆಲವರು ಉಳಿಸಿಕೊಂಡಿದ್ದಾರೆ. ಅಂತಹ ರೈತರಿಗೆ ನೀರಿನ ಅಗತ್ಯ ಹೆಚ್ಚಿದೆ. ಜ. 5ರಿಂದಲೇ ನೀರು ಹರಿಸಬೇಕು’ ಎಂದು ಅವರು ಒತ್ತಾಯಿಸಿದರು.
ಇಂದು ಐಸಿಸಿ ಸಭೆ
ಜ. 4ರಂದು ಐಸಿಸಿ ಸಭೆ ಕರೆಯಲಾಗಿದೆ. ಎಲ್ಲ ರೈತ ಮುಖಂಡರು ಅಧಿಕಾರಿಗಳು ಭಾಗವಹಿಸಲಿದ್ದಾರೆ. ನೀರು ಬಿಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಸಚಿವ ಮಧು ಬಂಗಾರಪ್ಪ ವರ್ಚ್ಯುಯಲ್‌ ಮೂಲಕ ಭಾಗವಹಿಸುವರು ಎಂದು ಕಾಡಾ ಅಧ್ಯಕ್ಷ ಡಾ. ಅಂಶುಮಂತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.