ADVERTISEMENT

ಕಲ್ಲುಗಣಿ, ಕ್ರಷರ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2021, 2:19 IST
Last Updated 26 ಫೆಬ್ರುವರಿ 2021, 2:19 IST
ದಾವಣಗೆರೆಯ ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿದರು
ದಾವಣಗೆರೆಯ ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿದರು   

ದಾವಣಗೆರೆ:ಕಲ್ಲು ಗಣಿ ಮತ್ತು ಕ್ರಷರ್ ಘಟಕಗಳು 15 ದಿನಗಳ ಒಳಗಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರು, ಗುತ್ತಿಗೆದಾರರು ಒಂದೂವರೆ ತಿಂಗಳು ಸ್ಟೋರೇಜ್ ಇರುವ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ವರದಿ ನೀಡಬೇಕು. ಪೊಲೀಸರು ಟಾಸ್ಕ್‌ಪೋರ್ಸ್ ಸಮಿತಿಗೆ ಈ ಕುರಿತು ವರದಿ ಮಾಡಬೇಕು ಎಂದು ಸೂಚಿಸಿದರು.

ADVERTISEMENT

ಗ್ರಾಮಾಂತರ ಡಿವೈಎಸ್‍ಪಿ ನರಸಿಂಹ ವಿ. ತಾಮ್ರಧ್ವಜ, ‘ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ನೆಟ್‍ವರ್ಕ್ ವಿಡಿಯೊ ರೆಕಾರ್ಡಿಂಗ್ (ಎನ್‍ವಿಆರ್) ವ್ಯವಸ್ಥೆ ಮೂಲಕ ಕೂತಿರುವಲ್ಲೇ ಸ್ಥಳದ ಘಟನಾವಳಿ ವೀಕ್ಷಿಸಬಹುದು’ ಎಂದರು.

ಹೊನ್ನಾಳಿ ತಾಲ್ಲೂಕಿನ ಬೀರಗೊಂಡನಹಳ್ಳಿ, ಚಿಕ್ಕಬಿದರಿ, ಅಚ್ಯುತಪುರ, ಹಿರೇಬಾಸೂರು, ರಾಂಪುರ, ಕುರುಡಿಹಳ್ಳಿ ಇತರೆಡೆ ಹಾಗೂ ಹರಿಹರ ತಾಲ್ಲೂಕಿನ ಸಾರತಿ, ರಾಜನಹಳ್ಳಿ, ಬಿಳಸನೂರು ಸೇರಿ ಅಧಿಕೃತ ಮರಳು ಬ್ಲಾಕ್‍ಗಳು ಇರುವೆಡೆ ಟಾಸ್ಕ್‌ಫೋರ್ಸ್ ಸಮಿತಿಯ ಅಧಿಕಾರಿಗಳು ರಾತ್ರಿ ವೇಳೆ ಪರಿಶೀಲನೆ ನಡೆಸಬೇಕು. ಅನಧಿಕೃತ ಚಟುವಟಿಕೆ ಕಂಡುಬಂದಲ್ಲಿ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪರವಾನಗಿ ಇಲ್ಲದೇ ಮರಳು ಸಾಗಿಸುವುದು, ಸಂಗ್ರಹಿಸುವವರ ವಿರುದ್ಧ ದಂಡ ಹಾಕಬೇಕು. ಬಂಡಿಗಳಲ್ಲಿ ಮನೆ ಉದ್ದೇಶಕ್ಕೆ ಮರಳು ಉಪಯೋಗಿಸಬಹುದು. ಆದರೆ ವ್ಯವಹಾರಕ್ಕೆ ಬಳಸಿಕೊಳ್ಳಬಾರದು. ಚಕ್ಕಡಿ ಸೇರಿ ಇತರೆ ದೊಡ್ಡ ವಾಹನಗಳು ಒಂದು ಪರವಾನಗಿ ಪಡೆದು ಅನಧಿಕೃತವಾಗಿ ಬಹಳಷ್ಟು ಮರಳನ್ನು ಲೂಟಿ ಮಾಡಿರುವುದು ಗಮನಕ್ಕೆ ಬಂದಿದ್ದು, ಇಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ತಾಕೀತು ಮಾಡಿದರು.

ಆರ್‌ಟಿಒ ಶ್ರೀಧರ್ ಮಲ್ಲಾಡ್, ‘ರಸ್ತೆಯಲ್ಲಿ ಸ್ಪೀಡ್ ಕಂಟ್ರೋಲರ್ ಮತ್ತು ಜಲ್ಲಿ ಮತ್ತು ಮರಳು ಗಾಡಿಗಳಿಂದ ಹಿಂದಿನ ಗಾಡಿಗಳಿಗೆ ಜಲ್ಲಿ ಮರಳು ಸಿಡಿದು ಹಾನಿಯಾಗುವುದನ್ನು ತಪ್ಪಿಸಲು ಟಾರ್ಪಲಿನ್ ಕವರ್ ಮಾಡಿಕೊಂಡು ಹೋಗುವ ಬಗ್ಗೆ ಕ್ರಮ ಜರುಗಿಸಬೇಕು’ ಎಂದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಲೋಡ್ ಆದ ವಾಹನಗಳು ಸ್ಪೀಡ್ ಕಂಟ್ರೋಲರ್ ಅಳವಡಿಸಲು ಆರ್‌ಟಿಒ ಅಧಿಕಾರಿಗಳು ಕ್ರಮ ವಹಿಸಬೇಕು. ಟಾರ್ಪಲಿನ್ ಕವರ್ ಮಾಡದಿದ್ದರೆ ದಂಡ ಹಾಕುವಂತೆ ಸೂಚಿಸಿದರು.

ಕ್ವಾರಿ ನಿರ್ವಹಣೆ ಸೂಚನೆ: ಷರತ್ತು ಮತ್ತು ನಿಯಮಗಳಿಗೆ ಅನುಗುಣವಾಗಿ ಕಲ್ಲು ಕ್ವಾರಿ ನಡೆಸಬೇಕು. ಸ್ಫೋಟವಾಗುವ ಸ್ಥಳದ 15 ಮೀಟರ್ ಒಳಗೆ ಧೂಮಪಾನ ನಿಷೇಧ. 24 ಗಂಟೆ ಭದ್ರತಾ ಸಿಬ್ಬಂದಿ ನೇಮಿಸಬೇಕು. ಸ್ಫೋಟಕ ಇರುವ ವಾಹನ ಹೆಚ್ಚಿನ ಸಮಯದವರೆಗೆ ರಸ್ತೆಯಲ್ಲಿ ನಿಲ್ಲಿಸಬಾರದು. ರಾತ್ರಿ ವೇಳೆ ಕಾರಣಕ್ಕೆ ಸ್ಫೋಟಕಗಳನ್ನು ಸಾಗಿಸಬಾರದು ಎಂದು ಹೇಳಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಹಿರಿಯ ಭೂವಿಜ್ಞಾನಿ ಕೋದಂಡರಾಮ, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಡಿಎಚ್‍ಒ ಡಾ.ನಾಗರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.