ADVERTISEMENT

ಅಂಬೇಡ್ಕರ್‌ಗೆ ಅಪಮಾನ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 5:04 IST
Last Updated 14 ಫೆಬ್ರುವರಿ 2022, 5:04 IST
ಅಂಬೇಡ್ಕರ್‌ ಅನುಯಾಯಿಗಳಿಗೆ ತಿಳಿಸದೇ ಅಂಬೇಡ್ಕರ್‌ ಪ್ರತಿಮೆ ಅನಾವರಣ ಮಾಡಲಾಗಿದೆ ಎಂದು ಆರೋಪಿಸಿ ಅಂಬೇಡ್ಕರ್‌ ಅನುಯಾಯಿಗಳು ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್‌ ಅನುಯಾಯಿಗಳಿಗೆ ತಿಳಿಸದೇ ಅಂಬೇಡ್ಕರ್‌ ಪ್ರತಿಮೆ ಅನಾವರಣ ಮಾಡಲಾಗಿದೆ ಎಂದು ಆರೋಪಿಸಿ ಅಂಬೇಡ್ಕರ್‌ ಅನುಯಾಯಿಗಳು ಪ್ರತಿಭಟನೆ ನಡೆಸಿದರು.   

ದಾವಣಗೆರೆ: ಅಂಬೇಡ್ಕರ್‌ ಪುತ್ಥಳಿ ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ಅಂಬೇಡ್ಕರ್‌ ಅನುಯಾಯಿಗಳನ್ನು ಕರೆಯದೇ ಅನುಯಾಯಿಗಳಿಗೆ ಅನ್ಯಾಯ ಮಾಡಲಾಗಿದೆ. ಅಂಬೇಡ್ಕರ್‌ ಪ್ರತಿಮೆಯ ಕೆಳಗೆ ಸಂಸದರು, ಮೇಯರ್‌ ಸಹಿತ ಜನಪ್ರತಿನಿಧಿಗಳ ಹೆಸರು ಹಾಕಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಅಂಬೇಡ್ಕರ್‌ ಅನುಯಾಯಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ಪುತ್ಥಳಿ ಅನಾವರಣ ಮಾಡುವ ಬಗ್ಗೆ ತಿಳಿಸಿದ್ದರೆ ಎಲ್ಲ ಅನುಯಾಯಿಗಳು ಬರುತ್ತಿದ್ದರು. ಭಾನುವಾರ ಬೆಳಿಗ್ಗೆ ಬೇಗ ಅನಾವರಣ ಮಾಡಿ ಸಂಸದರು ತೆರಳಿದ್ದಾರೆ. ದಲಿತ ಸಮುದಾಯವನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಸ್ಥಳಕ್ಕೆ ಮೇಯರ್‌ ಎಸ್‌.ಟಿ. ವೀರೇಶ್‌ ಬಂದು ಪ್ರತಿಭಟನಕಾರರನ್ನು ಸಮಾಧಾನಿಸಲು ಪ್ರಯತ್ನಿಸಿದರು. ಅದಕ್ಕೆ ಬಗ್ಗದ ಪ್ರತಿಭಟನಕಾರರು, ‘ಎಲ್ಲರನ್ನು ಕರೆದು ಉದ್ಘಾಟನೆ ಮಾಡಬೇಕಿತ್ತು. ಕೊರೊನಾ ಇದ್ದರೆ ಇನ್ನೂ ಸ್ವಲ್ಪ ಸಮಯ ಕಾರ್ಯಕ್ರಮ ಮುಂದಕ್ಕೆ ಹಾಕಬೇಕಿತ್ತು. ಅಲ್ಲದೇ ಅಂಬೇಡ್ಕರ್‌ ಪ್ರತಿಮೆ ಕೆಳಗಡೆ ನಿಮ್ಮ ಹೆಸರು ಯಾಕೆ. ನಿಮ್ಮ ಪ್ರತಿಷ್ಠೆಗೆ ಹೆಸರು ಬೇಕಿದ್ದರೆ ಎಲ್ಲಾದರೂ ಸೈಡ್‌ನಲ್ಲಿ ಹೆಸರು ಹಾಕಿಕೊಳ್ಳಿ. ಇಲ್ಲಿ ಅಂಬೇಡ್ಕರ್‌ ಪ್ರತಿಮೆ ಮಾತ್ರ ಇರಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ರಾಯಚೂರಿನಲ್ಲಿ ಅಂಬೇಡ್ಕರ್‌ ಫೋಟೊ ತೆಗೆದು ಅವಮಾನ ಮಾಡಲಾಯಿತು. ಇಲ್ಲಿ ನೀವು ನಿಮ್ಮ ಹೆಸರಿನ ಫೋಟೊವನ್ನು ಅಂಬೇಡ್ಕರ್‌ ಪ್ರತಿಮೆ ಮುಂದೆ ಹಾಕಿ ಅವಮಾನ ಮಾಡಿದ್ದೀರಿ’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಡಿಎಸ್‌ಎಸ್‌ ಪ್ರೊ. ಕೃಷ್ಣಪ್ಪ ಬಣದ ಎಚ್‌.ಮಲ್ಲೇಶ್‌, ಕಬ್ಬಳ್ಳಿ ಮಲ್ಲೇಶ್‌, ಚನ್ನಬಸಪ್ಪ, ನಾಗರಾಜ್, ಚಂದ್ರಪ್ಪ ರುದ್ರೇಶ್‌, ಅಶೋಕ್‌ ಅವರೂ ಭಾಗವಹಿಸಿದ್ದರು.

ಬೆಳಿಗ್ಗೆ 11ಕ್ಕೆ ಉದ್ಘಾಟನೆ ಎಂದು ಪ್ರಚಾರ ಮಾಡಿ, ಒಂದು ಗಂಟೆ ಮೊದಲೇ ಕಾಟಾಚಾರಕ್ಕೆ ಉದ್ಘಾಟನೆ ಮಾಡಿ ಹೋಗಿರುವುದನ್ನು ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಸಂಘಟನಾ ಕಾರ್ಯದರ್ಶಿ ಸೂರ್ಯಪ್ರಕಾಶ್ ಆರ್., ಸಮುದಾಯದ ಮುಖಂಡ ಎಚ್‌. ತಿಮ್ಮಣ್ಣ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.