ADVERTISEMENT

ಅಂತರ ರಾಷ್ಟ್ರೀಯ ದ್ವಿದಳ ಧಾನ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 12:48 IST
Last Updated 10 ಫೆಬ್ರುವರಿ 2020, 12:48 IST
ಕೃಷಿ ಇಲಾಖೆಯಿಂದ ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಗ್ರಾಮದಲ್ಲಿ ಸೋಮವಾರ ಅಂತರರಾಷ್ಟ್ರೀಯ ದ್ವಿದಳ ಧಾನ್ಯ ದಿನ ಆಚರಿಸಲಾಯಿತು
ಕೃಷಿ ಇಲಾಖೆಯಿಂದ ದಾವಣಗೆರೆ ತಾಲ್ಲೂಕಿನ ಕಾಡಜ್ಜಿ ಗ್ರಾಮದಲ್ಲಿ ಸೋಮವಾರ ಅಂತರರಾಷ್ಟ್ರೀಯ ದ್ವಿದಳ ಧಾನ್ಯ ದಿನ ಆಚರಿಸಲಾಯಿತು   

ದಾವಣಗೆರೆ: ಕೃಷಿ ಇಲಾಖೆಯಿಂದ ತಾಲ್ಲೂಕಿನ ಕಾಡಜ್ಜಿ ಗ್ರಾಮದಲ್ಲಿ ಸೋಮವಾರ ಅಂತರರಾಷ್ಟ್ರೀಯ ದ್ವಿದಳ ಧಾನ್ಯ ದಿನ ಆಚರಿಸಲಾಯಿತು.

ಕೃಷಿ ಉಪ ನಿರ್ದೇಶಕ ಶಿವಕುಮಾರ್ ಉದ್ಘಾಟಿಸಿ ಮಾತನಾಡಿ, ‘ದ್ವಿದಳಧಾನ್ಯಗಳ ಪ್ರಾಮುಖ್ಯವನ್ನು ತಿಳಿದುಕೊಳ್ಳಬೇಕು. ಎಲ್ಲ ರೈತರು ತಮ್ಮ ಜಮೀನುಗಳಲ್ಲಿ ಮುಖ್ಯ ಬೆಳೆಗಳ ಜೊತೆಗೆ ಅಂತರ ಬೆಳೆಯಾಗಿ ಅಂದರೆ ಅಕ್ಕಡಿ ಬೆಳೆಯಾಗಿ ತೊಗರಿ, ಅವರೆ, ಅಲಸಂದೆ, ಹುರುಳಿ, ಹೆಸರು ಬೆಳೆಯಬೇಕು. ಇದರಿಂದ ಹೆಚ್ಚುವರಿ ಆದಾಯ ಗಳಿಸುವುದಲ್ಲದೆ, ಭೂಮಿಯ ಫಲವತ್ತತೆಯನ್ನು ಕಾಪಾಡಬಹುದು’ ಎಂದು ತಿಳಿಸಿದರು.

ರೈತರೇ ದ್ವಿದಳ ಧಾನ್ಯ ಬೆಳೆದಾಗ ಹೊರಗಿನಿಂದ ಬೇಳೆಕಾಳುಗಳನ್ನು ಕೊಂಡು ಕೊಳ್ಳುವುದು ತಪ್ಪುತ್ತದೆ. ಈ ಬೆಳೆಗಳನ್ನು ಬೆಳೆಯುವ ರೈತರನ್ನು ಪ್ರೋತ್ಸಾಹಿಸಲು ಸರ್ಕಾರವು ಎನ್‌ಎಫ್‌ಎಸ್‌ಎಂ ಯೋಜನೆಯಡಿ ಹೆಕ್ಟೆರ್‌ಗೆ ₹ 6,000 ಪ್ರೋತ್ಸಾಹಧನ ನೀಡುತ್ತಿದೆ. ರೈತರು ಇಲಾಖೆ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.

ADVERTISEMENT

ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ಧನಗೌಡ ಎಚ್.ಕೆ. ಮಾತನಾಡಿ. ‘ ದ್ವಿದಳ ಧಾನ್ಯ ಬೆಳೆಯಲ್ಲಿ ರಾಜ್ಯವು ದೇಶದಲ್ಲಿಯೇ ಪ್ರಥಮ ಸ್ಥಾನ ಹೊಂದಿದೆ. ಅದಕ್ಕಾಗಿ ಕೇಂದ್ರ ಸರ್ಕಾರದಿಂದ ಕೃಷಿ ಕರ್ಮಣ ಪ್ರಶಸ್ತಿ ಪಡೆದಿದೆ’ ಎಂದು ಹೇಳಿದರು.

ಕಡಿಮೆ ನೀರು, ಕಡಿಮೆ ಗೊಬ್ಬರದಲ್ಲಿ ಈ ಧಾನ್ಯ ಗಳನ್ನು ಬೆಳೆಯಬಹುದು. ಇದನ್ನು ಸೇವಿಸುವುದರಿಂದ ನಮಗೆ ಪ್ರೊಟೀನ್‌ ಮತ್ತು ವಿಟಮಿನ್‌ ಸಿಗುತ್ತದೆ. ದ್ವಿದಳ ಧಾನ್ಯ ಕಡಿಮೆ ಬಳಸುತ್ತಿರುವುದರಿಂದಲೇ ಆಸ್ಪತ್ರೆಗಳ ಸಂಖ್ಯೆ ಜಾಸ್ತಿಯಾಗಿದೆ ಎಂದರು.

ಪ್ರಗತಿಪರ ರೈತ ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಅಧಿಕಾರಿ ಲಾವಣ್ಯ, ಸಹಾಯಕ ಕೃಷಿ ಅಧಿಕಾರಿಗಳಾದ ಬಿ.ದುರುಗಪ್ಪ, ವಸಂತಕಮಾರ್, ಯೋಗೇಶಪ್ಪ , ಆತ್ಮ ಸಿಬ್ಬಂದಿ ವೆಂಕಟೇಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರಿಬಸಪ್ಪ, ಮಾಜಿ ಸದಸ್ಯರಾದ ದ್ಯಾಮಪ್ಪ ಎಚ್, ಹನುಮಂತಪ್ಪ, ರೈತ ಅನುವುಗಾರ ರಾಜಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.