ಗಂಗಾಧರಸ್ವಾಮಿ
ದಾವಣಗೆರೆ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಗರದ ಹೈಸ್ಕೂಲ್ ಮೈದಾನದಲ್ಲಿ ಜೂನ್ 21ರಂದು ನಸುಕಿನ 5.30ಕ್ಕೆ ಹಮ್ಮಿಕೊಳ್ಳಲಾಗಿದೆ. 3 ಸಾವಿರಕ್ಕೂ ಅಧಿಕ ಯೋಗಾಪಟುಗಳು ಏಕಕಾಲಕ್ಕೆ ಯೋಗ ಪ್ರದರ್ಶನ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
‘ಯೋಗ ಸಂಸ್ಥೆಗಳ ಸದಸ್ಯರು, ಹಾಸ್ಟೆಲ್ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಆಸಕ್ತರು ಪಾಲ್ಗೊಳ್ಳಲಿದ್ದಾರೆ. ಮಳೆ ಸುರಿದರೆ ಮಾತ್ರ ಬೇರೆಡೆಗೆ ಸ್ಥಳಾಂತರಿಸಲು ಆಲೋಚಿಸಲಾಗಿದೆ. ಮಾನಸಿಕ ಮತ್ತು ದೈಹಿಕ ಆಯೋಗ್ಯಕ್ಕೆ ಪ್ರತಿಯೊಬ್ಬರಿಗೂ ಯೋಗದ ಅಗತ್ಯವಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಒಂದು ಭೂಮಿ ಮತ್ತು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷಾವಾಕ್ಯದೊಂದಿಗೆ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮಾಡಲಾಗುತ್ತಿದೆ. ನಸುಕಿನ 5.30ರಿಂದ 6 ಗಂಟೆಯವರೆಗೆ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಧ್ಯಾನ, 6.20ರವರೆಗೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ‘ಅಷ್ಟ ನಮಸ್ಕಾರ’ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಪಾಲ್ಗೊಳ್ಳಲಿದ್ದಾರೆ’ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಯು. ಯೋಗೇಂದ್ರ ಕುಮಾರ್ ವಿವರಿಸಿದರು.
‘ಕಾರಿಗನೂರು ಶಾಲೆ ದುರಸ್ತಿ’
‘ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಸರ್ಕಾರಿ ಶಾಲೆಯ ದುರಸ್ತಿ ಹಾಗೂ ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
‘1965ರಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಶಾಲೆ ಕಾರ್ಯನಿರ್ವಹಿಸುತ್ತಿದೆ. ಅಂದಾಜು 300 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಚಾವಣಿ ಸೋರುತ್ತಿರುವುದು ಹಾಗೂ ಗೋಡೆಗಳಲ್ಲಿ ತೇವಾಂಶ ಹೆಚ್ಚಿ ಸಮಸ್ಯೆ ಆಗಿರುವುದನ್ನು ಸ್ಥಳಕ್ಕೆ ಭೇಟಿ ನೀಡಿದಾಗ ಗಮನಿಸಿದ್ದೇನೆ. ಹೆಂಚುಗಳನ್ನು ತೆಗೆದು ಶೀಟ್ ಅಳವಡಿಕೆಗೆ ₹ 20 ಲಕ್ಷದ ಅನುದಾನ ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ. ಹೊಸ ಕಟ್ಟಡ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಬಸವಾಪಟ್ಟಣ ಸಮೀಪದ ಯಲೋದಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಳೆಯಿಂದ ಉಂಟಾಗಿರುವ ಸಮಸ್ಯೆಯ ವರದಿಯನ್ನು ‘ಪ್ರಜಾವಾಣಿ’ಯಲ್ಲಿ ಗಮನಿಸಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯಲ್ಲಿ ಉಂಟಾಗಿರುವ ಸಮಸ್ಯೆಯಿಂದ ಶಾಲೆಗೆ ನೀರು ನುಗ್ಗಿದೆ. ಚರಂಡಿ ಸುಸ್ಥಿತಿಯಲ್ಲಿ ಇಡಲು ‘ನರೇಗಾ’ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಟ್ಟಿ ಮಾಧವ ವಿಠ್ಠಲ ರಾವ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಹಾಜರಿದ್ದರು.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿಯ ಬಳಿಕ ಸೂಳೆಕೆರೆಯ 166 ಎಕರೆ ಒತ್ತುವರಿ ತೆರವುಗೊಳಿಸಲಾಗಿದೆ. ತೆರವು ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ.ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಕೋಟ್...1
ಬಾಕ್ಸ್...1
‘ಜಲಸಿರಿ: ಶೇ 80ರಷ್ಟು ಪೂರ್ಣ’
‘ದಾವಣಗೆರೆ ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಪೂರೈಸುವ ಜಲಸಿರಿ ಯೋಜನೆಯ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ. ಬಾಕಿ ಇರುವ ಶೇ 20ರಷ್ಟು ಕಾಮಗಾರಿಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.
‘10 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್‌ವೊಂದನ್ನು ಯೋಜನೆಯಡಿ ನಿರ್ಮಿಸಲಾಗಿದೆ. ಟಿ.ವಿ. ಸ್ಟೇಷನ್ ಕೆರೆಯ ಬಳಿ 18 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ಇದೆ. ಇನ್ನೂ 50 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣಕ್ಕೆ ಪ್ರಯತ್ನ ನಡೆಯುತ್ತಿದೆ. ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಂಡರೆ ಮುಂದಿನ ಹಲವು ದಶಕಗಳವರೆಗೆ ಕುಡಿಯುವ ನೀರಿಗೆ ತೊಂದರೆ ಆಗದು’ ಎಂದು ಮಾಹಿತಿ ನೀಡಿದರು.
‘ಎಚ್. ಕಲ್ಪನಹಳ್ಳಿಗೆ ಶೀಘ್ರ ಭೇಟಿ’
‘ರಾಷ್ಟ್ರೀಯ ಹೆದ್ದಾರಿ ದಾಟುವಾಗ ಸಂಭವಿಸಿದ ಅಪಘಾತದಲ್ಲಿ ರೈತರೊಬ್ಬರು ಮೃತಪಟ್ಟಿರುವ ದಾವಣಗೆರೆ ತಾಲ್ಲೂಕಿನ ಎಚ್. ಕಲ್ಪನಹಳ್ಳಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಶೀಘ್ರ ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
‘ಜಿಲ್ಲೆಯಲ್ಲಿ 2023ರಲ್ಲಿ ಸಂಭವಿಸಿದ ಅಪಘಾತದಲ್ಲಿ 324 ಜನ ಹಾಗೂ 2024ರಲ್ಲಿ 260 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಂಚಾರ ನಿಯಮ ಜಾಗೃತಿ ಹಾಗೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡ ಪರಿಣಾಮ ಅಪಘಾತದ ಪ್ರಮಾಣ ಶೇ 30ರಷ್ಟು ಕಡಿಮೆಯಾಗಿದೆ. ಸಂಚಾರ ದಟ್ಟಣೆ ನಿರ್ವಹಣೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.