ದಾವಣಗೆರೆಯ ಲೋಕಿಕೆರೆ ಕೈಗಾರಿಕಾ ಪ್ರದೇಶದ ಕೈಗಾರಿಕೆ
ಪ್ರಜಾವಾಣಿ ಚಿತ್ರ
ದಾವಣಗೆರೆ: ‘ಇನ್ವೆಸ್ಟ್ ಕರ್ನಾಟಕ’ದಲ್ಲಿ ಮಧ್ಯ ಕರ್ನಾಟಕದತ್ತ ಹೂಡಿಕೆದಾರರು ಒಲವು ತೋರಿದ್ದಾರೆ. ದಾವಣಗೆರೆಯಲ್ಲಿ ಉದ್ಯಮ ಆರಂಭಕ್ಕೆ 39 ಕಂಪನಿಗಳು ಮುಂದೆ ಬಂದಿದ್ದು, ₹ 289 ಕೋಟಿ ಹೂಡಿಕೆಯಾಗುವ ನಿರೀಕ್ಷೆ ಹುಟ್ಟಿದೆ. ಕೈಗಾರಿಕೆ ಸ್ಥಾಪನೆಗೆ 22 ಕಂಪನಿಗಳಿಗೆ ಭೂಮಿ ಒದಗಿಸುವ ಪ್ರಕ್ರಿಯೆ ಆರಂಭವಾಗಿದೆ.
ಬೆಂಗಳೂರಿನಲ್ಲಿ ಫೆಬ್ರುವರಿಯಲ್ಲಿ ಹೂಡಿಕೆದಾರರ ಸಮಾವೇಶದಲ್ಲಿ ಕೆಲ ಕಂಪೆನಿಗಳು ದಾವಣಗೆರೆಯಲ್ಲಿ ಬಂಡವಾಳ ಹೂಡಿಕೆಗೆ ಉತ್ಸುಕತೆ ತೋರಿದ್ದವು. ಇದರಲ್ಲಿ ರಾಜ್ಯ ಹಾಗೂ ಹೊರರಾಜ್ಯದ ಕಂಪನಿಗಳೂ ಇದ್ದು, ಆಹಾರ ಹಾಗೂ ಎಂಜಿನಿಯರಿಂಗ್ ಸೇರಿದಂತೆ ಹಲವು ರೀತಿಯ ಉದ್ಯಮ, ಕೈಗಾರಿಕೆಗಳು ಪ್ರಸ್ತಾವ ಸಲ್ಲಿಸಿವೆ. ನಿರೀಕ್ಷೆಯಂತೆ ಬಂಡವಾಳ ಹೂಡಿಕೆಯಾದರೆ ಕೈಗಾರಿಕೋದ್ಯಮ ಮತ್ತೆ ಗರಿಗೆದರುವ ಸಾಧ್ಯತೆ ಇದೆ.
‘ಇನ್ವೆಸ್ಟ್ ಕರ್ನಾಟಕ’ದಲ್ಲಿ ಪಾಲ್ಗೊಂಡಿದ್ದ ಕೆಲ ಕಂಪನಿಗಳು ದಾವಣಗೆರೆಯಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿವೆ. ಎಲ್ಲ ಕಂಪನಿಗಳು ಉದ್ಯಮ ಆರಂಭಿಸಿದರೆ 1,527 ಜನರಿಗೆ ಉದ್ಯೋಗ ಸಿಗಲಿದೆ. ಮೂರು ವರ್ಷಗಳ ಕಾಲಾವಧಿಯಲ್ಲಿ ಉದ್ಯಮ, ಕೈಗಾರಿಕೆ ಪ್ರಾರಂಭಿಸದೇ ಇದ್ದರೆ ಭೂಮಿ ಹಿಂಪಡೆಯಲಾಗುತ್ತದೆ’ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ ಮಾಹಿತಿ ನೀಡಿದರು.
ಹೂಡಿಕೆದಾರ ಸಮಾವೇಶ ಮಧ್ಯ ಕರ್ನಾಟಕದ ಕುರಿತು ಹೀಗೆ ನಿರೀಕ್ಷೆ ಹುಟ್ಟಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಬಹುರಾಷ್ಟ್ರೀಯ ಕಂಪನಿಗಳು ಕೂಡ ಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದ್ದವು. ಆದರೆ, ಇದು ಕಾರ್ಯರೂಪಕ್ಕೆ ಬರಲಿಲ್ಲ. ಸಾರಿಗೆ ಸಂಪರ್ಕ ಸೇರಿ ಹಲವು ಕಾರಣಕ್ಕೆ ಉತ್ಸಾಹಿ ಉದ್ಯಮಿಗಳು ಹಿಂದೆ ಸರಿದ ನಿದರ್ಶನಗಳೂ ಇವೆ.
‘ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡ ಉದ್ಯಮಿಗಳು ಪ್ರಸ್ತಾವ ಸಲ್ಲಿಸಬೇಕು. ಉದ್ಯಮ, ಬಂಡವಾಳ, ಕೈಗಾರಿಕೆಯ ಸ್ವರೂಪ, ಉದ್ಯೋಗ ಸೇರಿ ವಿವರವಾದ ವರದಿಯನ್ನು ‘ಉದ್ಯೋಗ ಮಿತ್ರ’ಕ್ಕೆ ನೀಡಬೇಕು. ಹಲವು ಸಮಿತಿಗಳು ಪರಿಶೀಲಿಸಿ ಅನುಮೋದನೆ ನೀಡುತ್ತವೆ. ಸಾಮಾನ್ಯವಾಗಿ ಬೆಂಗಳೂರು ಸಮೀಪದ ತುಮಕೂರು ಹಾಗೂ ಮೈಸೂರು ಜಿಲ್ಲೆಯಲ್ಲಿ ಹೂಡಿಕೆಗೆ ಒಲವು ಹೆಚ್ಚು’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಎಂಜಿನಿಯರಿಂಗ್ ಪದವೀಧರರು ಉದ್ಯೋಗ ಅರಸಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ದಾವಣಗೆರೆಯಲ್ಲಿ ಸಾಫ್ಟವೇರ್ ಉದ್ಯಮ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿವೆ.– ಅಜ್ಜಂಪುರ ಶೆಟ್ರ ಶಂಭುಲಿಂಗಪ್ಪ, ಕಾರ್ಯದರ್ಶಿ ಜಿಲ್ಲಾ ವಾಣಿಜೋದ್ಯಮಗಳ ಸಂಸ್ಥೆ
ಎರಡೇ ತಾಲ್ಲೂಕಿಗೆ ಸೀಮಿತ
‘ಕೈಗಾರಿಕೆಗಳು ಜಿಲ್ಲೆಯ ದಾವಣಗೆರೆ ಹಾಗೂ ಹರಿಹರ ತಾಲ್ಲೂಕಿಗೆ ಮಾತ್ರ ಸೀಮಿತವಾಗಿವೆ. ಚನ್ನಗಿರಿ ಹೊನ್ನಾಳಿ ನ್ಯಾಮತಿ ಹಾಗೂ ಜಗಳೂರಿನಲ್ಲಿ ಕೈಗಾರಿಕೆಗಳಿಗೆ ನಿರೀಕ್ಷಿತ ಉತ್ತೇಜನ ಸಿಗುತ್ತಿಲ್ಲ. ಸಮತೋಲಿತ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲ ತಾಲ್ಲೂಕಿನಲ್ಲಿ ಕೈಗಾರಿಕೆ ಸ್ಥಾಪನೆಯಾದರೆ ಅನುಕೂಲ’ ಎನ್ನುತ್ತಾರೆ ದಾವಣಗೆರೆ ಸ್ಟೀಲ್ ಫ್ಯಾಬ್ರಿಕೇಷನ್ ಅಸೋಯೇಷನ್ ಅಧ್ಯಕ್ಷ ಎಚ್.ಉಮೇಶ್.
ಜಗಳೂರು ತಾಲ್ಲೂಕಿನ ಅತಿ ಹೆಚ್ಚು ಜನರು ಉದ್ಯೋಗ ಅರಸಿ ಬೆಂಗಳೂರಿಗೆ ತೆರಳುತ್ತಿದ್ದಾರೆ. ಬೆಂಗಳೂರಿನ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಗಾರ್ಮೆಂಟ್ಸ್ ಕಾರ್ಖಾನೆ ಸ್ಥಾಪನೆಗೆ ಬಹುದಿನಗಳಿಂದ ಕೂಗು ಕೇಳಿಬರುತ್ತಿದೆ. ಚನ್ನಗಿರಿ ಹೊನ್ನಾಳಿ ತಾಲ್ಲೂಕಿನಲ್ಲಿ ಅಡಿಕೆ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಅಕ್ಕಿ ಮಿಲ್ ಹೊರತುಪಡಿಸಿ ಬೇರೆ ಕೈಗಾರಿಕೆಗಳು ಇಲ್ಲಿಲ್ಲ. ಕರಕುಶಲ ಕೇಂದ್ರ ಸ್ಥಾಪನೆಗೂ ಒತ್ತಾಯವಿದೆ.
ವಿಮಾನ ನಿಲ್ದಾಣದ ಕೊರತೆ
ಹೂಡಿಕೆದಾರರನ್ನು ಆಕರ್ಷಿಸಲು ಅತ್ಯಗತ್ಯವಾಗಿ ಬೇಕಾಗುವ ವಿಮಾನ ನಿಲ್ದಾಣ ಜಿಲ್ಲೆಯಲ್ಲಿ ಇನ್ನೂ ನಿರ್ಮಾಣವಾಗಿಲ್ಲ. ವಿಮಾನಯಾನಕ್ಕೆ ನಡೆದ ಪ್ರಯತ್ನಗಳು ಫಲ ನೀಡಿಲ್ಲ. ‘ಕೈಗಾರಿಕೆಗಳ ಉತ್ತೇಜನಕ್ಕೆ ವಿಮಾನ ನಿಲ್ದಾಣದ ಅಗತ್ಯವಿದೆ’ ಎಂಬ ಕೂಗು ಬಹುದಿನಗಳ ಹಿಂದೆಯೇ ಎದ್ದಿದೆ.
ವಿಮಾನಯಾನಕ್ಕೆ ಕೈಗಾರಿಕೋದ್ಯಮಿಗಳು ದಶಕದಿಂದ ಬೇಡಿಕೆ ಮುಂದಿಡುತ್ತಿದ್ದಾರೆ. ಆದರೆ ಇದು ಈವರೆಗೂ ಕೈಗೂಡಿಲ್ಲ. ವಿಮಾನ ಸೇವೆಗೆ 100 ಕಿ.ಮೀ ದೂರದ ಶಿವಮೊಗ್ಗ 150 ಕಿ.ಮೀ ದೂರದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.