
ದಾವಣಗೆರೆಯ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಐಟಿ ಕಂಪನಿ ಮುಖ್ಯಸ್ಥರೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಕುಮಾರ್ ಗುಪ್ತ ಮಾತನಾಡಿದರು.
ದಾವಣಗೆರೆ: ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆಗೆ ಹತ್ತಕ್ಕೂ ಹೆಚ್ಚು ಐಟಿ–ಬಿಟಿ ಕಂಪನಿಗಳು ಉತ್ಸುಕತೆ ತೋರಿದ್ದು, ಮೂರು ಕಂಪನಿಗಳು ಉದ್ಯಮ ಸ್ಥಾಪನೆಗೆ ಮುಂದೆಬಂದಿವೆ. ದಾವಣಗೆರೆಯನ್ನು ಉದ್ಯಮ ಸ್ನೇಹಿಯಾಗಿ ರೂಪಿಸುವ ಪ್ರಯತ್ನಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಇಲ್ಲಿನ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಜಿಲ್ಲಾಡಳಿತ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಆಸಕ್ತ ಐಟಿ ಮುಖ್ಯಸ್ಥರ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಯ ಆಸಕ್ತ ಉದ್ಯಮಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಅಮೆರಿಕದ ಕೆಲ ಕಂಪನಿಗಳ ಪ್ರತಿನಿಧಿಗಳು ಕೂಡ ಆನ್‌ಲೈನ್ ಮೂಲಕ ಭಾಗಿಯಾಗಿದ್ದರು. ಹಸಿರು ಇಂಧನ, ಔಷಧ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿದಂತೆ ಹಲವು ನವೋದ್ಯಮ (ಸ್ಟಾರ್ಟಪ್) ಮುಖ್ಯಸ್ಥರು ಇದ್ದರು. ಬಂಡವಾಳ ಹೂಡಿಕೆ, ಸಂಶೋಧನೆಗೆ ಅಗತ್ಯ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಚರ್ಚಿಸಲಾಗಿದೆ’ ಎಂದು ವಿವರಿಸಿದರು.
‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ರಾಜ್ಯದ 2 ಮತ್ತು 3ನೇ ದರ್ಜೆಯ ನಗರಗಳಲ್ಲಿ ಕೂಡ ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸಲು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಕೈಜೋಡಿಸಿದೆ. ಜಿಲ್ಲೆಯ ಕಾಲೇಜುಗಳಿಂದ ಪ್ರತಿ ವರ್ಷ 10 ಸಾವಿರಕ್ಕೂ ಹೆಚ್ಚು ಪದವೀಧರರು ಹೊರಬರುತ್ತಿದ್ದಾರೆ. ಇವರಿಗೆ ಉದ್ಯೋಗ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ವೀರೇಶ್ ಪಾಟೀಲ್ ಹಾಜರಿದ್ದರು.
ಚೆನ್ನೈ ನಾಸಿಕ್ ಸೇರಿ ಹಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಅಗತ್ಯಬಿದ್ದರೆ ವಿದೇಶಕ್ಕೂ ಭೇಟಿ ನೀಡಲಿದ್ದೇವೆಜಿ.ಎಂ. ಗಂಗಾಧರಸ್ವಾಮಿ ಜಿಲ್ಲಾಧಿಕಾರಿ
‘ಎ’ ದರ್ಜೆಯ ಮೂಲಸೌಲಭ್ಯ: ದಾವಣಗೆರೆ ಮೈಸೂರು ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ನಗರಗಳಲ್ಲಿ ಆರ್ಥಿಕತೆಯ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಲು ₹ 1 ಸಾವಿರ ಕೋಟಿ ನಿಗದಿಪಡಿಸಲಾಗಿದೆ. ಜಾಗತಿಕ ತಂತ್ರಜ್ಞಾನ ಕೇಂದ್ರ ಸ್ಥಾಪನೆಯಾದರೆ ‘ಎ’ ದರ್ಜೆಯ ಮೂಲಸೌಲಭ್ಯಗಳು ಸಿಗುತ್ತವೆ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಕುಮಾರ್ ಗುಪ್ತ ತಿಳಿಸಿದರು. ‘ದಾವಣಗೆರೆಯಲ್ಲಿ ಮಂಗಳೂರು ಹಾಗೂ ಮೈಸೂರು ಮಾದರಿಯ ತಂತ್ರಜ್ಞಾನ ಕೇಂದ್ರ ಸ್ಥಾಪಿಸುವ ಆಲೋಚನೆ ಇದೆ. ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಇದು ಕಾರ್ಯಗತವಾಗುವ ಸಾಧ್ಯತೆ ಇದೆ. ಶಿಕ್ಷಣ ಸಂಸ್ಥೆ ಆಸ್ಪತ್ರೆ ಹಾಗೂ ಅಧಿಕಾರಿಗಳಿಂದ ಉತ್ತಮ ಪ್ರೋತ್ಸಾಹ ಸಿಗುತ್ತಿದೆ’ ಎಂದರು.
ಭದ್ರತಾ ವೈಫಲ್ಯ: ಆರೋಪ ಸದಾ ಜನದಟ್ಟಣೆಯಿಂದ ಕೂಡಿರುವ ದೆಹಲಿಯ ಕೆಂಪುಕೋಟೆಯ ಬಳಿ ಸಂಭವಿಸಿದ ಸ್ಫೋಟಕ್ಕೆ ಭದ್ರತಾ ವೈಫಲ್ಯವೇ ಕಾರಣ. ದೇಶದ ರಾಜಧಾನಿಯಲ್ಲಿ ಇನ್ನೂ ಹೆಚ್ಚಿನ ಕಟ್ಟೆಚ್ಚರ ವಹಿಸುವ ಅಗತ್ಯವಿತ್ತು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು. ‘ಕೆಂಪುಕೋಟೆಯ ಸಮೀಪ ಹಲವು ದೇಗುಲ ಪ್ರಾರ್ಥನಾ ಮಂದಿರಗಳಿವೆ. ಇಂತಹ ಕೃತ್ಯ ತಡೆಯುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ. ಭಯೋತ್ಪಾದನೆಯನ್ನು ನಿಗ್ರಹಿಸಿ ಜನರಿಗೆ ಸುರಕ್ಷಿತ ವಾತಾವರಣ ನಿರ್ಮಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.