
ಜಗಳೂರು: ಪಟ್ಟಣದ 18 ವಾರ್ಡ್‌ಗಳ ವ್ಯಾಪ್ತಿಯಲ್ಲಿ ₹ 18 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ದೇವೇಗೌಡ ಬಡಾವಣೆಯಲ್ಲಿ ಗುರುವಾರ ಎಸ್‌ಎಫ್‌ಸಿ ಅನುದಾನದಡಿ ₹ 1.50 ಕೋಟಿ ವೆಚ್ಚದ ಸಂರಕ್ಷಣಾ ಘಟಕ, ಚರಂಡಿ, ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಎರಡನೇ ಹಂತದಲ್ಲಿ ₹ 10 ಕೋಟಿ ಅನುದಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು. ಸಾರ್ವಜನಿಕರು ಕಾಮಗಾರಿ ವೇಳೆ ಅಧಿಕಾರಿಗಳಿಗೆ ಸಹಕಾರ ನೀಡಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕಳಪೆಯಾದರೆ ಸಂಬಂಧಪಟ್ಟ ಗುತ್ತಿಗೆದಾರರ ಪರವಾನಿಗೆ ರದ್ದುಪಡಿಸಲು ಶಿಫಾರಸ್ಸು ಮಾಡಲಾಗುವುದು. ಗುಣಮಟ್ಟದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಎಚ್ಚರಿಕೆ ನೀಡಿದರು.
ಪಟ್ಟಣದ ಮುಖ್ಯರಸ್ತೆ ವಿಸ್ತರಣೆಯಲ್ಲಿ ವರ್ತಕರ ಮನವಿಯಂತೆ ರಸ್ತೆ ಮಧ್ಯ ಭಾಗದಿಂದ ಇಕ್ಕೆಲಗಳಲ್ಲಿ 50 ಅಡಿ ಸ್ವಯಂ ಪ್ರೇರಿತ ಕಟ್ಟಡ ತೆರವಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ, ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ, ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನಿಯಮಾವಳಿಯಂತೆ ಅಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ₹ 60ಕೋಟಿ ಅನುದಾನ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಪರಿಹಾರ ಕೊಟ್ಟು ಎರಡೂ ಬದಿ 69 ಮುಖ್ಯ ರಸ್ತೆ ವಿಸ್ತರಣೆಗೊಳಿಸುವುದು ಖಚಿತ ಎಂದು ಭರವಸೆ ನೀಡಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಸದಸ್ಯರಾದ ಲಲಿತಮ್ಮ, ನಿರ್ಮಲಾಕುಮಾರಿ, ಶಕೀಲ್ ಅಹಮ್ಮದ್, ಮಹಮ್ಮದ್ ಅಲಿ, ಮಂಜುನಾಥ್, ರಮೇಶ್ ತಾನಾಜಿ ಗೋಸಾಯಿ, ಕುರಿಜಯ್ಯಣ್ಣ, ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಎಇಇ ಶಿವಮೂರ್ತಿನಾಯ್ಕ, ಎಇ ವಿಜಯಕುಮಾರ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್, ಮುಖಂಡರಾದ ಬಿ. ಮಹೇಶ್ವರಪ್ಪ, ರಮೇಶ್, ಶಿಲ್ಪಾ, ಜಯಲಕ್ಷ್ಮಿ, ಹರೀಶ್ ಕೆಚ್ಚೇನಹಳ್ಳಿ, ಸಣ್ಣಸೂರಯ್ಯ, ಚಿತ್ತಪ್ಪ, ಗೌಸ್ ಅಹಮ್ಮದ್, ಮಧುಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.