
ಜಗಳೂರು: ಬರಪೀಡಿತ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಅನುದಾನ ಬಿಡುಗಡೆ ಮಾಡುವ ಮೂಲಕ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ನೀರಾವರಿ ಹೋರಾಟ ಸಮಿತಿ ಹಾಗೂ ರೈತ ಸಂಘದ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಹೋರಾಟ ಸಮಿತಿಯ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ ಮಾತನಾಡಿ, ನಿರಂತರ ಹೋರಾಟದ ಪರ್ತಿರೂಪವಾಗಿರುವ ಭದ್ರಾಮೇಲ್ದಂಡೆ ಯೋಜನೆ ಯೋಜನೆ ನೆನೆಗುದಿಗೆ ಬಿದ್ದಿರುವುದು ವಿಷಾಧನೀಯ. ತಾಲ್ಲೂಕಿಗೆ 2.4 ಟಿಎಂಸಿ ನೀರನ್ನು ಹಂಚಿಕೆಮಾಡಿ ಸರ್ಕಾರ ಆದೇಶಿಸಿದೆ.ಇದರಿಂದ ತಾಲ್ಲೂಕಿನ 9 ಕೆರೆಗಳು ಹಾಗೂ 48 ಸಾವಿರ ಎಕರೆ ಪ್ರದೇಶ ಹನಿನೀರಾವರಿ ಆಗಬೇಕಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ವಿಳಂಬವಾಗುತ್ತಿರುವುದು ಖಂಡನೀಯ ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತೋರಣಗಟ್ಟೆ ತಿಪ್ಪೇಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್, ಭದ್ರಾಮೇಲ್ದಂಡೆ ಯೋಜನೆಯಡಿ ತಾಲ್ಲೂಕಿನ ಮರೇನಹಳ್ಳಿ, ಲಿಂಗಣ್ಣನಹಳ್ಳಿ, ಕಸ್ತೂರಿಪುರ ಸೇರಿದಂತೆ ವಿವಿಧ ಗ್ರಾಮಗಳನ್ನು ಸೇರ್ಪಡೆಗೊಳಿಸಬೇಕು. ರೈತರ ಸಹಕಾರದಿಂದ ಭದ್ರಾಮೇಲ್ದಂಡೆ ಯೋಜನೆ ಪೈಪ್ ಲೈನ್ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸಬೇಕು. ಬರದನಾಡಿನ ರೈತರ ಬದುಕು ನೀರಾವರಿಯೋಜನೆ ಸಾಕಾರದಿಂದ ಮಾತ್ರ ಹಸನಾಗಲು ಸಾಧ್ಯ ಎಂದರು.
ಪ್ರಧಾನಿ ಮೋದಿ ಅವರು 2019 ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಭದ್ರಾಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರದಿಂದ 5300 ಕೋಟಿ ರೂಪಾಯಿ ಅನುದಾನ ನೀಡುವ ಬಹಿರಂಗ ಸಭೆಯಲ್ಲಿ ಘೋಷಿಸಿದ್ದರು. ಆದರೆ ಇದುವರೆಗೂ ನಯಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಂತರಿಕ ಸಮಸ್ಯೆಯಿಂದ ತಾಲ್ಲೂಕಿಗೆ ತೀವ್ರತರ ಅನ್ಯಾಯವಾಗಿದೆ. ಕೂಡಲೇ ಅಗತ್ಯ ಅನುದಾನ ಒದಗಿಸಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬಕು ಎಂದು ಸಮಿತಿ ಸದಸ್ಯ ಆರ್. ಓಬಳೇಶ್ ಒತ್ತಾಯಿಸಿದರು..
ತಹಶೀಲ್ದಾರ್ ಕಲೀಂ ಉಲ್ಲಾ ಅವರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಸತ್ಯಮೂರ್ತಿ,ಪ್ರಕಾಶರೆಡ್ಡಿ,ಧನಂಜಯ್, ಮಂಜಣ್ಣ, ತಿಪ್ಪೇಸ್ವಾಮಿ,ಭರಮಸಮುದ್ರ ಕುಮಾರ,ಸತೀಶ್ ಮಲೆಮಾಚಿಕೆರೆ, ಧನ್ಯಕುಮಾರ್ , ಮಾದಿಹಳ್ಳಿ ಮಂಜುನಾಥ್, ಮಹಾಲಿಂಗಪ್ಪ ಎಚ್.ಎಂಹೊಳೆ ,ಇಂದಿರಾ, ಸುಜಾತಮ್ಮ, ಮಮತಾ,ಸೂರಲಿಂಗಪ್ಪ,ಮಹಾಂತೇಶ್,ಪೂಜಾರ ಸಿದ್ದಪ್ಪ,ಚಂಪಾವತಿ,ಜಗಳೂರಯ್ಯ, ಕೃಷ್ಣಪ್ಪ, ಏಕಾಂತಪ್ಪ, ಭೀಮೇಶ್, ವೀರಣ್ಣ, ಭಾಷಾ, ಕಲ್ಲೇಶ್, ಚನ್ನಪ್ಪ ಇದ್ದರು.
ಜಗಳೂರಿನಲ್ಲಿ ಶನಿವಾರ ಭದ್ರಾ ಮೇಲ್ದಂಡೆ ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.