ಜಗಳೂರು: ಸರ್ಕಾರದ ಮಹತ್ವದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ರಾಜ್ಯದಾದ್ಯಂತ ಸೋಮವಾರ ಪ್ರಾರಂಭಗೊಂಡಿದ್ದು, ಸಮೀಕ್ಷಾ ಆ್ಯಪ್ ತಾಂತ್ರಿಕ ಸಮಸ್ಯೆಯಿಂದ ತಾಲ್ಲೂಕಿನಲ್ಲಿ ಮೊದಲ ದಿನ ಯಾವುದೇ ಕುಟುಂಬದ ಸಮೀಕ್ಷೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
‘ಸೋಮವಾರ ಮಧ್ಯಾಹ್ನದವರೆಗೂ ಆ್ಯಪ್ ತೆರೆದುಕೊಳ್ಳದ ಕಾರಣ ತಾಲ್ಲೂಕಿನಲ್ಲಿ ಸಮೀಕ್ಷಾ ಕಾರ್ಯ ಪ್ರಾರಂಭಿಸಲು ಸಾಧ್ಯವಾಗಿಲ್ಲ. ಪಟ್ಟಣದ ಇಂದಿರಾ ಬಡಾವಣೆಯಲ್ಲಿ ಕೇವಲ ಒಂದು ಕುಟುಂಬದ ಸಮೀಕ್ಷೆ ಪೂರ್ಣವಾಗಿದೆ. ಮಂಗಳವಾರದಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುಗಮವಾಗಿ ಸಮೀಕ್ಷೆ ನಡೆಯಲಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅಸ್ಮಾಬಾನು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ತಾಲ್ಲೂಕಿನಲ್ಲಿ ಒಟ್ಟು 412 ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. 150 ಮನೆಗಳಿಗೆ ಒಂದು ಬ್ಲಾಕ್ ರಚಿಸಲಾಗಿದೆ. ಬೆಸ್ಕಾಂ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ ಒಟ್ಟು 46,000 ಮನೆಗಳಿವೆ. ಒಟ್ಟು 412 ಗಣತಿದಾರರು ಭಾಗವಹಿಸಲಿದ್ದಾರೆ. ಪ್ರತಿ 20 ಗಣತಿದಾರರಿಗೆ ಒಬ್ಬ ಮೇಲ್ವಿಚಾರಕರಂತೆ ಒಟ್ಟು 21 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಸೋಮವಾರದಿಂದ ಪ್ರಾರಂಭವಾಗಿ ಅ. 10ರವರೆಗೆ ಸಮೀಕ್ಷಾ ಕಾರ್ಯ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಜಗಳೂರು ಪಟ್ಟಣದ ಇಂದಿರಾ ಬಡಾವಣೆಯಲ್ಲಿ ಸೋಮವಾರ ಮಧ್ಯಾಹ್ನ ಆ್ಯಪ್ ಮೂಲಕ ಒಂದು ಮನೆಯ ಸಮೀಕ್ಷೆಯನ್ನು ಪೂರ್ಣಗೊಳಿಸಲಾಯಿತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಬಿಇಒ ಹಾಲಮೂರ್ತಿ ಅವರು ಹಾಜರಿದ್ದರು.
‘ಆ್ಯಪ್ ತೆರೆಯುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ. ಮೇಲ್ವಿಚಾರಕರ ಆ್ಯಪ್ ಡೌನ್‌ಲೋಡ್ ಆಗಿಲ್ಲ. ಆದ್ದರಿಂದ ಮೊದಲ ದಿನ ಎಷ್ಟು ಮನೆಗಳ ಸಮೀಕ್ಷೆ ಆಗಿದೆ ಎಂದು ಮಾಹಿತಿ ಲಭ್ಯವಾಗಿಲ್ಲ’ ಎಂದು ತಿಳಿಸಿದರು.
ಸಮೀಕ್ಷಾ ಕಾರ್ಯದ ಉಸ್ತುವಾರಿಯನ್ನು ತಹಶೀಲ್ದಾರ್, ಬಿಸಿಎಂ ಅಧಿಕಾರಿ, ಬಿಇಒ, ತಾಲ್ಲೂಕು ಪಂಚಾಯಿತಿ ಇಒ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ನಿರ್ವಹಿಸಲಿದ್ದಾರೆ ಎಂದು ತಹಶೀಲ್ದಾರ್ ಕಲೀಂ ಉಲ್ಲಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.