ADVERTISEMENT

ಹಲ್ಲೆ ಆರೋಪ: ಜಗಳೂರು ಪ.ಪಂ. ಅಧ್ಯಕ್ಷ ನವೀನ್ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 6:14 IST
Last Updated 4 ಆಗಸ್ಟ್ 2025, 6:14 IST
ಜಗಳೂರಿನಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಹಾಗೂ ಸಹೋದರ ಸುನೀಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು
ಜಗಳೂರಿನಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಹಾಗೂ ಸಹೋದರ ಸುನೀಲ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು   

ಜಗಳೂರು: ‘ಇಲ್ಲಿನ ಬಯಲು ರಂಗಮಂದಿರದ ಕೊಠಡಿ ಹಂಚಿಕೆಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಹಾಗೂ ಅವರ ಸಹೋದರ ಸುನೀಲ್ ಅವರು ರಸ್ತೆ ವಿಸ್ತರಣಾ ಸಮಿತಿಯ ಸದಸ್ಯೆಯ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿ ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

‘ಬಯಲು ರಂಗಮಂದಿರದ ಸಭಾಂಗಣ ನಮಗೆ ಸೇರಿದ್ದು, ನಿಮಗೆ ಕೊಠಡಿ ಕೊಟ್ಟವರು ಯಾರು. ನನ್ನ ಅನುಮತಿ ಇಲ್ಲದೇ ಯಾರೂ ಇಲ್ಲಿ ಪ್ರವೇಶಿಸುವಂತಿಲ್ಲ. ಹೊರಗೆ ಹೋಗಿ’ ಎಂದು ನವೀನ್ ದಬಾಯಿಸಿದರು. ಆ ಸಂದರ್ಭದಲ್ಲಿ ಸುನೀಲ್ ಅವರು ವಿಡಿಯೊ ಮಾಡುತ್ತಾ ಅಲ್ಲಿದ್ದ ನಮ್ಮನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ಈ ಬಗ್ಗೆ ಕೇಳಿದರೆ ನನ್ನ ಕೈ ಹಿಡಿದು ತಿರುಚಿದರು’ ಎಂದು ಸದಸ್ಯೆ ಸುಜಾತಾ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ರಸ್ತೆ ವಿಸ್ತರಣೆ ವಿಚಾರದಲ್ಲಿ ಹೋರಾಟಕ್ಕೆ ಮುಂದಾದರೆ ಒಬ್ಬೊಬ್ಬರನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಸಿ, ಸಂಘಟನೆಯ ಕಾರ್ಯಕರ್ತರ ಮೇಲೆ ಸುನೀಲ್ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಅಧ್ಯಕ್ಷ ನವೀನ್ ಕುಮ್ಮಕ್ಕು ನೀಡಿದ್ದಾರೆ. ರಸ್ತೆ ವಿಸ್ತರಣೆ ಹೋರಾಟವನ್ನು ಹತ್ತಿಕ್ಕಲು ಗೂಂಡಾಗಳನ್ನು ಬಳಸಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದ ಸದಸ್ಯರು, ನವೀನ್ ರಾಜೀನಾಮೆಗೆ ಒತ್ತಾಯಿಸಿದರು. 

ADVERTISEMENT

ಸುಜಾತಾ ಹಾಗೂ ಸುನೀಲ್ ಅವರು ಪರಸ್ಪರ ದೂರು ನೀಡಿದ್ದು, ಭಾನುವಾರ ಸಂಜೆಯವರೆಗೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ.

ರಸ್ತೆ ವಿಸ್ತರಣಾ ಸಮಿತಿ ಅಧ್ಯಕ್ಷ ಟಿ. ಸಣ್ಣೋಬಯ್ಯ, ಪದಾಧಿಕಾರಿಗಳಾದ ಮಹಾಲಿಂಗಪ್ಪ, ಆರ್. ಓಬಳೇಶ್, ಯುವ ಕರ್ನಾಟಕ ಸಂಘಟನೆ ಅಧ್ಯಕ್ಷ ಮಲ್ಲಿಕಾರ್ಜುನ್, ಮರೇನಹಳ್ಳಿ ತಿಪ್ಪೇಸ್ವಾಮಿ, ಸುಜಾತಾ, ಚೌಡಮ್ಮ ಬೊಮ್ಮಕ್ಕ, ಇಂದಿರಮ್ಮ, ಸತ್ಯಮೂರ್ತಿ, ಅಂಜಿನಪ್ಪ, ಈರಣ್ಣ, ಸುಧಾ, ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.