ADVERTISEMENT

ಜಗಳೂರು ಪ.ಪಂ: ₹ 19.76 ಕೋಟಿ ಆದಾಯ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2025, 16:00 IST
Last Updated 29 ಮಾರ್ಚ್ 2025, 16:00 IST
ಜಗಳೂರಿನ ಪಟ್ಟಣ ಪಂಚಾಯಿತಿಯಲ್ಲಿ ಶನಿವಾರ ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಸದಸ್ಯರು ಪ್ರತಿಗಳನ್ನು ಪ್ರದರ್ಶಿಸಿದರು 
ಜಗಳೂರಿನ ಪಟ್ಟಣ ಪಂಚಾಯಿತಿಯಲ್ಲಿ ಶನಿವಾರ ಅಧ್ಯಕ್ಷ ನವೀನ್ ಕುಮಾರ್ ನೇತೃತ್ವದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಸದಸ್ಯರು ಪ್ರತಿಗಳನ್ನು ಪ್ರದರ್ಶಿಸಿದರು    

ಜಗಳೂರು: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಶನಿವಾರ 2025– 26ನೇ ಸಾಲಿಗೆ ಅಧ್ಯಕ್ಷ ಕೆ.ಎಸ್.ನವೀನ್ ಕುಮಾರ್ ಅವರು ₹ 3.35 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ವಿವಿಧ ಮೂಲಗಳಿಂದ ₹ 19.76 ಕೋಟಿ ಆದಾಯ ನಿರೀಕ್ಷೆ ಮತ್ತು ವಿವಿಧ ಯೋಜನೆಗಳಿಗೆ ₹ 19.73 ಕೋಟಿ ವೆಚ್ಚ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಜಗಳೂರು ಕೆರೆ ಸುತ್ತ ಬೀದಿದೀಪಗಳ ಅಳವಡಿಕೆ, ಪಟ್ಟಣದ ಮಧ್ಯ ಭಾಗದಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಶೌಚಾಲಯ ನಿರ್ಮಾಣ, ಉದ್ಯಾನಗಳಲ್ಲಿ ಅಮೃತಮಿತ್ರ ಯೋಜನೆಯಡಿ ಸ್ವಚ್ಛತಾ ಕಾರ್ಯ, ಸ್ಮಶಾನ ಅಭಿವೃದ್ಧಿ, ಬೀದಿ ದೀಪ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಕೌಶಲ ಆಧಾರಿತ ತರಬೇತಿ ಸೇರಿ 20 ಅಂಶಗಳ ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ನವೀನ್ ಕುಮಾರ್ ತಿಳಿಸಿದರು.

ADVERTISEMENT

ಪಟ್ಟಣ ಪಂಚಾಯಿತಿಯ ಸಾಮಾನ್ಯ ನಿಧಿಯಡಿ ₹65.27 ಲಕ್ಷ, ಎಸ್.ಸಿ, ಎಸ್.ಟಿ ಸಮುದಾಯಗಳ‌ ಕಲ್ಯಾಣಕ್ಕೆ ಶೇ 24.10ರ ಯೋಜನೆಯಡಿ ₹1.57 ಕೋಟಿ, ಇತರೆ ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಕ್ಕಾಗಿ ಶೇ 7.25ರ ಯೋಜನೆಯಡಿ ₹4.73 ಲಕ್ಷ ಹಾಗೂ ಅಂಗವಿಕಲರ ಕಲ್ಯಾಣಕ್ಕಾಗಿ ಶೇ 5ರ ಯೋಜನೆಯಡಿ ₹3.26 ಲಕ್ಷ, ಕ್ರೀಡಾ ಯೋಜನೆಗಾಗಿ ಶೇ 1ರ ಯೋಜನೆಯಡಿ ₹65 ಸಾವಿರ, ಬೀದಿ ನಾಯಿಗಳ ಸಂತಾನ‌ ಶಕ್ತಿಹರಣ ಕಾರ್ಯಕ್ರಮಕ್ಕೆ ₹65 ಸಾವಿರ ಅನುದಾನ ಕಾಯ್ದಿರಿಸಲಾಗಿದೆ ಎಂದು ಅಧ್ಯಕ್ಷ ನವೀನ್ ಮಾಹಿತಿ ನೀಡಿದರು.

2025–26ನೇ ಸಾಲಿನ ಆಯವ್ಯಯವು ಪಟ್ಟಣ ಪಂಚಾಯಿತಿ ಹಾಗೂ ರಸ್ತೆಗಳ ಅಭಿವೃದ್ಧಿ ಮತ್ತು ಪೌರಕಾರ್ಮಿಕರಿಗೆ ಮೂಲ ಅವಶ್ಯಕತೆ ಪೂರೈಕೆಗಾಗಿ 20 ಅಂಶಗಳ ಅಭಿವೃದ್ಧಿ ಕಾರ್ಯಕ್ರಮಗಳ ಗುರಿ ಹೊಂದಲಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಪ್ರಶಾಂತ್, ಎಂಜಿನಿಯರ್ ಶ್ರುತಿ, ಯೋಜನಾಧಿಕಾರಿ ಕೃಷ್ಣನಾಯ್ಕ ಸೇರಿ ಹಲವು ಅಧಿಕಾರಿಗಳು ಬಜೆಟ್ ಸಭೆಗೆ ಗೈರಾಗಿದ್ದನ್ನು ಸದಸ್ಯರು ಖಂಡಿಸಿದರು.

ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಸಿದ್ದಪ್ಪ, ರಮೇಶ್ ರೆಡ್ಡಿ, ಷಕೀಲ್ ಅಹ್ಮದ್, ಮಂಜುನಾಥ್, ಕುರಿ ಜಯಣ್ಣ ಆಗ್ರಹಿಸಿದರು.

ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ, ‘ಪಟ್ಟಣದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ನೀರು, ಕಟ್ಟಡಗಳಿಂದ ಆಸ್ತಿ ಕಂದಾಯ ವಸೂಲಿ, ಸ್ಥಳೀಯ ಸಂಪನ್ಮೂಲಗಳ ಕ್ರೋಢೀಕರಣಗೊಳಿಸಲಾಗಿದೆ. ಶಾಸಕರ ಕಾಳಜಿಯಂತೆ ರಸ್ತೆ ವಿಸ್ತರಣೆ ಅಭಿವೃದ್ಧಿ ಕಾರ್ಯ ಆರಂಭವಾಗಿದೆ’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಲೋಕಮ್ಮ ಓಬಳೇಶ್, ಸದಸ್ಯರಾದ ಶಕೀಲ್ ಅಹಮ್ಮದ್, ಮಹಮ್ಮದ್ ಅಲಿ, ಮಂಜುನಾಥ್, ಆದರ್ಶ ರೆಡ್ಡಿ, ನಾಮನಿರ್ದೇಶಿತ ಸದಸ್ಯರಾದ ತಾನಾಜಿ ಗೋಸಾಯಿ, ಶಾಂತಕುಮಾರ ಸೇರಿ ಸಿಬ್ಬಂದಿ  ಇದ್ದರು.

ಆಡಳಿತಾರೂಢ ಸದಸ್ಯರು ಗೈರು

ಆಡಳಿತಾರೂಢ ಬಿಜೆಪಿ ಪಕ್ಷದ ದೇವರಾಜ್ ಪಾಪಲಿಂಗಪ್ಪ ನಿರ್ಮಲಾ ಹನುಮಂತಪ್ಪ ವಿಶಾಲಾಕ್ಷಿ ಲೋಲಾಕ್ಷಮ್ಮ ಮತ್ತು ಲಲಿತಮ್ಮ ಅವರು ಸಭೆಗೆ ಗೈರಾಗಿದ್ದದ್ದು ಎದ್ದು ಕಾಣಿಸುತ್ತಿತ್ತು. ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್ ಅವರ ವಿರುದ್ಧ ಅವಿಶ್ವಾಸ ಮಂಡಿಸಲಾಗಿದ್ದು ಏ. 5ರಂದು ವಿಶ್ವಾಸ ಗೊತ್ತುವಳಿ ಸಭೆ ಕರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.