
ಜಗಳೂರು: ‘ಖರೀದಿ ಕೇಂದ್ರದಲ್ಲಿ ಅವ್ಯವಹಾರಕ್ಕೆ ಅವಕಾಶ ಮಾಡಿಕೊಡುವ ಮೂಲಕ ರೈತರಿಗೆ ಅನ್ಯಾಯ ಮಾಡಿದರೆ ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಶಾಸಕ ಬಿ.ದೇವೇಂದ್ರಪ್ಪ ಎಚ್ಚರಿಕೆ ನೀಡಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
‘2023 ರಲ್ಲಿ ಇಲ್ಲಿನ ರಾಗಿ ಖರೀದಿ ಕೇಂದ್ರದಲ್ಲಿ ನಡೆದ ಅವ್ಯವಹಾರದಿಂದ ದೊಡ್ಡ ಸಂಖ್ಯೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದರು. ಆಹಾರ ಮತ್ತು ನಾಗರಿಕ ಪೂರೈಕ ಸಚಿವ ಕೆ.ಎಚ್. ಮುನಿಯಪ್ಪ ಅವರ ಬಳಿ ಸಾಕಷ್ಟು ಬಾರಿ ಚರ್ಚಿಸಿ, ಶಾಸಕ ಸ್ಥಾನದ ರಾಜೀನಾಮೆಯ ಗಡುವು ನೀಡಿದ್ದರ ಫಲವಾಗಿ, ಬಾಕಿ ಹಣ ₹ 8 ಕೋಟಿ ಬಿಡುಗಡೆಯಾಯಿತು. ಮಧ್ಯವರ್ತಿಗಳಿಂದ ರಾಗಿ ಖರೀದಿಯಲ್ಲಿ ಅವ್ಯವಹಾರ ಮರುಕಳಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದರು.
‘ತಾಲ್ಲೂಕಿನ ವಿವಿಧೆಡೆ 66 ಕೆವಿಯ 4 ಉಪಕೇಂದ್ರಗಳು ಮತ್ತು 220 ಕೆವಿಯ ವಿದ್ಯುತ್ ಸರಬರಾಜು ಕೇಂದ್ರ ಸ್ಥಾಪಿಸಲಾಗುವುದು. ರೈತರು ತಾಳ್ಮೆಯಿಂದ ಸಹಕರಿಸಬೇಕು. ಮುಂದಿನ ವರ್ಷಕ್ಕೆ ವಿದ್ಯುತ್ ಸಮಸ್ಯೆ ಇತ್ಯರ್ಥವಾಗುತ್ತದೆ. ಕುಸುಮ್ -ಸಿ. ಯೋಜನೆಯಡಿ ರೈತರ ಜಮೀನಿನಲ್ಲಿ ಸೋಲಾರ್ ಘಟಕ ಅಳವಡಿಸಿಕೊಂಡು ಪರ್ಯಾಯ ವಿದ್ಯುತ್ ಶಕ್ತಿ ಬಳಕೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್, ‘ಪ್ರತಿ ರೈತರಿಂದ ತಲಾ 50 ಕ್ವಿಂಟಲ್ ರಾಗಿ ಖರೀದಿಸಲಾಗುವುದು. 3,150 ಜನ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಗುಣಮಟ್ಟದ ರಾಗಿ ಮಾರಾಟ ಮಾಡಬೇಕು. ವೇಳಾಪಟ್ಟಿ ಅನ್ವಯ ಖರೀದಿಸಿ, ವಾರದಲ್ಲಿ ರೈತರ ಖಾತೆಗೆ ಹಣವನ್ನು ಜಮೆ ಮಾಡಲಾಗುವುದು’ ಎಂದು ತಿಳಿಸಿದರು.
ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಆಹಾರ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ನಾಗರಾಜ್, ಎಪಿಎಂಸಿ ಕಾರ್ಯದರ್ಶಿ ಶಿವಕುಮಾರ್, ಪಿಎಸ್‌ಐ ಗಾದಿಲಿಂಗಪ್ಪ, ಮನು, ಶಿವಪ್ರಕಾಶ್, ವಸಂತಕುಮಾರ್, ಷಂಷೀರ್ ಅಹಮ್ಮದ್, ಎನ್. ಓಬಣ್ಣ, ಬಿ.ಮಹೇಶ್ವರಪ್ಪ, ಪ್ರಕಾಶ್ ರೆಡ್ಡಿ, ರಸೂಲ್ ಸಾಬ್, ನಿಂಗಪ್ಪ, ಗೌಸ್ ಅಹಮ್ಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.