ಜಗಳೂರು: ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿರುವ 29 ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, 7 ದಿನಗಳ ಒಳಗಾಗಿ ಮಳಿಗೆಗಳಲ್ಲಿರುವ ಸಾಮಗ್ರಿಗಳನ್ನು ತೆರವುಗೊಳಿಸುವಂತೆ ಶುಕ್ರವಾರ ಅಧಿಕಾರಿಗಳು ಬಾಡಿಗೆದಾರರಿಗೆ ಗಡುವು ನೀಡಿದ್ದಾರೆ.
ತಾಲ್ಲೂಕು ಪಂಚಾಯಿತಿಗೆ ಸೇರಿದ ಮಳಿಗೆಗಳನ್ನು ತೆರವುಗೊಳಿಸುವಂತೆ ಇಒ ಕಚೇರಿಯಿಂದ ಈಗಾಗಲೇ 3 ನೋಟಿಸ್‌ಗಳನ್ನು ನೀಡಲಾಗಿದೆ. ಶುಕ್ರವಾರ ಬಾಡಿಗೆದಾರರು ತಮ್ಮ ಮಳಿಗೆಗಳಿಗೆ ಬೀಗ ಹಾಕಿಕೊಂಡು ಹೊರ ಹೋಗಿದ್ದರು. ಮಳಿಗೆಗಳ ಆವರಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಕೆಂಚಪ್ಪ ಅವರು, ಸೆ. 25ರ ಒಳಗಾಗಿ ಮಳಿಗೆಯಲ್ಲಿರುವ ಎಲ್ಲ ಸಾಮಗ್ರಿ ಹಾಗೂ ಪರಿಕರಗಳನ್ನು ತೆರವುಗೊಳಿಸುವಂತೆ ಮಳಿಗೆಗಳಿಗೆ ತೆರೆದ ನೋಟಿಸ್ ಹಚ್ಚಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ‘ಪಂಚಾಯತ್ ರಾಜ್ ನಿಮಾವಳಿಯನ್ವಯ ಮಳಿಗೆಗಳನ್ನು ಬಹಿರಂಗ ಹರಾಜಿಗೊಳಪಡಿಸಲಾಗುವುದು. 2020ರಲ್ಲಿ 4 ವರ್ಷ 11 ತಿಂಗಳು ಬಾಡಿಗೆ ಕರಾರು ಮಾಡಿಕೊಂಡಿದ್ದು, ಈ ಕರಾರು ಪ್ರಸಕ್ತ ವರ್ಷದ ಜೂನ್ 30ಕ್ಕೆ ಅಂತ್ಯಗೊಂಡಿದೆ. ಸೆ. 15ರೊಳಗೆ ಮಳಿಗೆಗಳನ್ನು ಖಾಲಿ ಮಾಡಲು ಸೂಚನಾಪತ್ರ ನೀಡಲಾಗಿತ್ತು. ಆದರೆ, ಇಂದು ನಾವು ಭೇಟಿ ನೀಡಿದಾಗ ಮಳಿಗೆಗಳಿಗೆ ಬೀಗಹಾಕಲಾಗಿದೆ’ ಎಂದು ತಿಳಿಸಿದರು.
‘ಹರಾಜು ಪ್ರಕ್ರಿಯೆಗೂ ಮುನ್ನ ಮಳಿಗೆಗಳ ಸಣ್ಣಪುಟ್ಟ ರಿಪೇರಿ ಮಾಡಿಸಲಾಗುವುದು. ಈಗ ಬೀಗ ಹಾಕಿದ ಕಾರಣ ಸಾಮಗ್ರಿ ತೆರವುಗೊಳಿಸಲು ಸೆ. 25ರವರೆಗೆ ಗಡುವು ನೀಡಲಾಗಿದೆ. ಒಂದುವೇಳೆ ಖಾಲಿ ಮಾಡದಿದ್ದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಸಾಮಗ್ರಿಗಳಿಗೆ ಜವಾಬ್ದಾರಿಯಾಗುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘29 ಮಳಿಗೆಗಳಲ್ಲಿ ಬಹುತೇಕ ಬಾಡಿಗೆದಾರರು ವರ್ಷಗಟ್ಟಲೆ ಬಾಡಿಗೆ ಬಾಕಿಯನ್ನು ಪಾವತಿಸಿಲ್ಲ. ₹ 15 ಲಕ್ಷಕ್ಕೂ ಹೆಚ್ಚು ಬಾಕಿ ಇದ್ದು, ಹಲವು ಬಾರಿ ತಿಳಿಸಿದರೂ ಬಾಡಿಗೆ ಪಾವತಿಸಿಲ್ಲ. ಕೆಲವು ಮಳಿಗೆಗಳ ಮೂಲ ಮಂಜೂರುದಾರರು ದುಪ್ಪಟ್ಟು ಮೊತ್ತದ ಬಾಡಿಗೆಗೆ ಬೇರೆಯವರಿಗೆ ಕೊಟ್ಟು ಪ್ರತಿ ತಿಂಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ. ಪಂಚಾಯಿತಿಗೆ ಬಾಡಿಗೆ ಹಣ ಪಾವತಿಸದೇ ನಷ್ಟ ಉಂಟು ಮಾಡುತ್ತಿದ್ದಾರೆ ಎಂಬ ಬಗ್ಗೆ ದೂರುಗಳು ಕೇಳಿ ಬಂದಿವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.