ADVERTISEMENT

ದಾವಣಗೆರೆ | ಪ್ಲಾಸ್ಟಿಕ್ ಬಳಕೆ ಗಂಡಾಂತರಕಾರಿ: ನ್ಯಾ.ಆರ್.ಚೇತನ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 6:50 IST
Last Updated 31 ಜನವರಿ 2026, 6:50 IST
ಜಗಳೂರಿನಲ್ಲಿ ಹುತಾತ್ಮ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು
ಜಗಳೂರಿನಲ್ಲಿ ಹುತಾತ್ಮ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು   

ಜಗಳೂರು: ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿದ್ದು, ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಆರ್.ಚೇತನ್ ಅಭಿಪ್ರಾಯಪಟ್ಟರು. 

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾಸಮಿತಿ, ತಾಲ್ಲೂಕು ವಕೀಲರ ಸಂಘ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಹುತಾತ್ಮ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ಸಾರ್ವಜನಿಕರು ಪ್ರತಿನಿತ್ಯ ಕಿರಾಣಿ ಅಂಗಡಿ, ತರಕಾರಿ ವ್ಯಾಪಾರ, ವಹಿವಾಟುಗಳಿಗೆ ಮನೆಗಳಿಂದ ಬಟ್ಟೆಯ ಕೈಚೀಲ ತೆಗೆದುಕೊಂಡು ಹೋಗುವುದನ್ನು ರೂಢಿಸಿಕೊಳ್ಳಬೇಕು. ಅತಿಯಾದ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬೇಕು. ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎಲ್ಲಾ ಅಂಗಡಿಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆ ನೀಷೇಧಕ್ಕೆ ಕ್ರಮಕೈಗೊಳ್ಳಬೇಕು’ ಎಂದರು. 

ADVERTISEMENT

ಕೋರ್ಟ್ ಆವರಣ, ಕಚೇರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಡಿಕೆ ಚೀಟಿ, ಗುಟ್ಕಾಗಳ ಖಾಲಿ ಕವರ್‌ಗಳನ್ನು ಬೇಕಾಬಿಟ್ಟಿ ಎಸೆಯಲಾಗುತ್ತಿದೆ‌. ಕುರಿ, ಮೇಕೆ, ಜಾನುವಾರುಗಳು ಮೇವಿನೊಂದಿಗೆ ಪ್ಲಾಸ್ಟಿಕ್ ಸೇವಿಸಿದರೆ ಆರೋಗ್ಯಕ್ಕೆ ಸಂಚಕಾರ ಉಂಟಾಗುತ್ತದೆ. ಮನುಷ್ಯರು ಮತ್ತು ಪ್ರಾಣಿಗಳು ಹಾಗೂ ಪರಿಸರದ ಆರೋಗ್ಯಕ್ಕಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದು ಹೇಳಿದರು. 

‘ಪೌರಕಾರ್ಮಿಕರೂ ನಮ್ಮಂತೆ ಮನುಷ್ಯರೇ. ನಿವಾಸಿಗಳು ಹಸಿಕಸವನ್ನು ವಿಂಗಡಿಸಿ ನೀಡಬೇಕು’ ಎಂದು ಪಟ್ಟಣ ಪಂ‌ಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಸಲಹೆ ನೀಡಿದರು. 

ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೇನಹಳ್ಳಿ ಟಿ.ಬಸವರಾಜ್, ಕಾರ್ಯದರ್ಶಿ ಪರುಶರಾಮ್, ವಕೀಲರು ಮತ್ತು ಪಟ್ಟಣ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.