
ಜಗಳೂರು: ಪಟ್ಟಣದಲ್ಲಿ ಒಂದೇ ಸೂರಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳ ಕಟ್ಟಡಗಳ ಸಂಕೀರ್ಣದ ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.
ಇಲ್ಲಿನ ಹಳೇ ಊರು ಹೊರಕೆರೆಯಲ್ಲಿ ಸ್ವಾತಂತ್ರ್ಯ ಪೂರ್ವದ ಕಟ್ಟಡದಲ್ಲಿ ದಶಕಗಳ ಕಾಲ ತಾಲ್ಲೂಕು ಕಚೇರಿ ಮತ್ತು ಇತರೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. 2 ದಶಕದ ಹಿಂದೆ ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣವಾದ ನಂತರ ತಹಶೀಲ್ದಾರ್ ಕಚೇರಿ ಸೇರಿದಂತೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಭೂ ಮಾಪನ ಇಲಾಖೆ, ಖಜಾನೆ, ಉಪ ನೋಂದಣಾಧಿಕಾರಿ ಕಚೇರಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.
ತೆರವಾಗಿದ್ದ ಹಳೆಯ ಕಟ್ಟಡದಲ್ಲಿ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ದಾವಣಗೆರೆ ರಸ್ತೆಯಲ್ಲಿ ಸುಸಜ್ಜಿತ ನ್ಯಾಯಾಲಯ ಕಟ್ಟಡ ಹಾಗೂ ಪೊಲೀಸ್ ಠಾಣೆ ತಲೆ ಎತ್ತಿದ ನಂತರ ಬ್ರಿಟಿಷ್ ಆಡಳಿತಾವಧಿಯ ಹಳೇ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೇ ಪಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿತ್ತು.
ಜೀರ್ಣಾವಸ್ಥೆ ತಲುಪಿದ್ದ ಕಟ್ಟಡವನ್ನು ನೆಲಸಮಗೊಳಿಸಿ, ಮುಖ್ಯಮಂತ್ರಿಯವರ ಮೂಲ ಸೌಕರ್ಯ ನಿಧಿಯಡಿ ₹ 10 ಕೋಟಿ ವೆಚ್ಚದಲ್ಲಿ ಹಲವು ಕಚೇರಿಗಳ ಸಂಕೀರ್ಣವನ್ನು ನಿರ್ಮಿಸಲಾಗುತ್ತಿದೆ. ಭೂ ಮಟ್ಟದಿಂದ ಕೆಳಭಾಗದ ನೆಲಮಹಡಿ ಸೇರಿದಂತೆ ಒಟ್ಟು 3 ಮಹಡಿಗಳ ವಿಶಾಲವಾದ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.
‘ಮಿನಿ ವಿಧಾನಸೌಧದಲ್ಲಿ ಎಲ್ಲಾ ಕಚೇರಿಗಳಿಗೆ ಸ್ಥಳಾವಕಾಶ ಇಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಕಾರ್ಮಿಕ ಇಲಾಖೆ ಕಚೇರಿ ಸೇರಿದಂತೆ ಹಲವು ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಪಂಚಾಯತ್ ರಾಜ್ ಎಂಜಿನಿಯರಿಂಗ್, ಲೋಕೋಪಯೋಗಿ ಇಲಾಖೆ ಅಡಿಯ ಗ್ರಾಮೀಣ ನೀರು ಸರಬರಾಜು ಕಚೇರಿಗಳು ಅರ್ಧ ಶತಮಾನದಷ್ಟು ಹಳೆಯದಾಗಿದ್ದು, ಶಿಥಿಲವಾಗಿವೆ. ಈ ಎಲ್ಲಾ ಕಚೇರಿಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿ ತರುವ ಉದ್ದೇಶದಿಂದ ಕಚೇರಿ ಸಂಕೀರ್ಣ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.
ಸಿಎಂಐಡಿ ಯೋಜನೆಯಡಿ ₹ 5 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿ ಭರದಿಂದ ನಡೆಯುತ್ತಿದೆ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. 2ನೇ ಹಂತದಲ್ಲಿ ₹ 5 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಗತ್ಯ ಬಿದ್ದಲ್ಲಿ ಇನ್ನೂ ಅಧಿಕ ಅನುದಾನ ನೀಡಲು ಲೋಕೋಪಯೋಗಿ ಸಚಿವರು ಒಪ್ಪಿದ್ದು, ಸುಸಜ್ಜಿತ ಕಟ್ಟಡ ಶಿಘ್ರವೇ ತಲೆ ಎತ್ತಲಿದೆ ಎಂದು ವಿವರಿಸಿದರು.
ಸಾರ್ವಜನಿಕರ ಅಲೆದಾಟ ತಪ್ಪಲಿದೆ
ನೆಲ ಮಹಡಿಯಲ್ಲಿ ವಾಹನಗಳ ನಿಲುಗಡೆ ಕ್ಯಾಂಟೀನ್ ನೆಲಮಟ್ಟದಿಂದ ಮೇಲಿನ ಎರಡು ಮಹಡಿಗಳಲ್ಲಿ ವಿವಿಧ ಕಚೇರಿಗಳಿಗೆ ಸುಸಜ್ಜಿತ ಕಟ್ಟಡಗಳು ಹಾಗೂ 3ನೇ ಮಹಡಿಯಲ್ಲಿ ಸಭೆ– ಸಮಾರಂಭಗಳಿಗೆ ಅನುಕೂಲವಾಗುವಂತೆ ವಿಶಾಲವಾದ ಆಡಿಟೋರಿಯಂ ನಿರ್ಮಿಸಲಾಗುವುದು. 1 ವರ್ಷದ ಅವಧಿಯಲ್ಲಿ ಕಟ್ಟಡ ಲೋಕಾರ್ಪಣೆಯಾಗಲಿದೆ. ಇದರಿಂದ ಎಲ್ಲಾ ಕಚೇರಿಗಳಿಗೆ ಸ್ವಂತ ಕಟ್ಟಡ ಲಭ್ಯವಾದಂತಾಗುತ್ತದೆ. ಸಾರ್ವಜನಿಕರು ಎಲ್ಲಾ ಕಡೆ ಅಲೆದಾಡುವುದು ತಪ್ಪಲಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.