ADVERTISEMENT

ತಾತಯ್ಯರ ತತ್ವಗಳು ಸಮಾಜಕ್ಕೆ ದಾರಿದೀಪ: ಶಿಕ್ಷಕ ತಿಪ್ಪೇಸ್ವಾಮಿ

ಯೋಗಿನಾರಾಯಣ ಯತೀಂದ್ರರ ಜಯಂತಿಯಲ್ಲಿ ನಿವೃತ್ತ ಶಿಕ್ಷಕ ತಿಪ್ಪೇಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 3:21 IST
Last Updated 4 ಮಾರ್ಚ್ 2026, 3:21 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌ ಅವರು ಪುಷ್ಪಾರ್ಚನೆ ಮಾಡಿದರು
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್‌ ಅವರು ಪುಷ್ಪಾರ್ಚನೆ ಮಾಡಿದರು   

ದಾವಣಗೆರೆ: ಕೈವಾರ ತಾತಯ್ಯ ಎಂದೇ ಖ್ಯಾತರಾದ ಯೋಗಿನಾರಾಯಣ ಯತೀಂದ್ರ ಅವರ ಪವಾಡ, ತತ್ವಗಳು ಹಾಗೂ ಮಾನವೀಯ ಮೌಲ್ಯಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ನಿವೃತ್ತ ಶಿಕ್ಷಕ ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಬಲಿಜ ಸಮಾಜದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಯೋಗಿನಾರಾಯಣ ಯತೀಂದ್ರ ಜಯಂತಿಯಲ್ಲಿ ಅವರು ಮಾತನಾಡಿದರು.

‘ಕೈವಾರ ಕ್ಷೇತ್ರವು ಐತಿಹಾಸಿಕ, ಪೌರಾಣಿಕ ಹಾಗೂ ಅಧ್ಯಾತ್ಮಿಕ ಮಹತ್ವ ಹೊಂದಿದೆ. ಈ ಪ್ರದೇಶವು ಪುರಾತನ ಕಾಲದಿಂದ ಬಲಿಜ ಜನಾಂಗದ ನೆಲೆವಾಗಿದ್ದು, ‘ಬಳೆಗಾರ ಬಲಿಜ’ ಪಂಗಡದವರು ಬಳೆ ವ್ಯಾಪಾರವನ್ನು ನಡೆಸುತ್ತಿದ್ದರು. ಧರ್ಮ ಹಾಗೂ ಭಕ್ತಿಭಾವದಿಂದ ಬದುಕಿದ ಈ ಜನಾಂಗದಲ್ಲಿ ಯೋಗಿನಾರಾಯಣ ಯತೀಂದ್ರರ ಜನನವಾಯಿತು’ ಎಂದು ಹೇಳಿದರು.

ADVERTISEMENT

‘1726ರಲ್ಲಿ ಜನಿಸಿದ ಯೋಗಿನಾರಾಯಣ ಯತೀಂದ್ರರು ಬಾಲ್ಯದಲ್ಲೇ ತಾಯಿ-ತಂದೆಯನ್ನು ಕಳೆದುಕೊಂಡರು. ಬಳಿಕ ಸಂಸಾರಿಕ ಜೀವನಕ್ಕೆ ಕಾಲಿಟ್ಟು, ಕುಲವೃತ್ತಿಯಾದ ಬಳೆ ಮಾರಾಟವನ್ನು ಮುಂದುವರಿಸಿದರು. ಪ್ರಾಮಾಣಿಕತೆ ಹಾಗೂ ಸ್ತ್ರೀಯರ ಮೇಲಿನ ಗೌರವದಿಂದ ಜನಮಾನಸದಲ್ಲಿ ಸ್ಥಾನ ಪಡೆದರು’ ಎಂದರು.

‘ಚಿತ್ತೂರಿನ ದುರ್ಗಮ್ಮ ದೇವಸ್ಥಾನದಲ್ಲಿ ತಂಗಿದ್ದ ವೇಳೆ ಮಹಾಲಕ್ಷ್ಮಿ ದೇವಿಯ ದರ್ಶನ ಸಿಕ್ಕಿತು. ಇದು ಅವರ ಜೀವನವನ್ನು ಬದಲಿಸಿತು. ಸಂಸಾರದ ಮೌಲ್ಯಗಳಿಗಿಂತ ಅಧ್ಯಾತ್ಮದ ಕಡೆಗೆ ಹೆಚ್ಚು ಒಲವು ತೋರಿದ ಅವರು, ವೈರಾಗ್ಯ ಸ್ವೀಕರಿಸಿ ಗುಹೆಯಲ್ಲಿ ಕಠಿಣ ತಪಸ್ಸು ಕೈಗೊಂಡರು. ಅಂದಿನಿಂದ ಕೈವಾರದ ಯೋಗಿನಾರಾಯಣ ಮಠವು ಭಕ್ತರಿಗೆ ಸನ್ಮಾರ್ಗ ತೋರಿಸುವ ಪವಿತ್ರ ಕ್ಷೇತ್ರವಾಗಿ ಬೆಳಗುತ್ತಿದೆ’ ಎಂದು ನುಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಸಮುದಾಯದ ಮುಖಂಡರಾದ ನರಸಿಂಹಮೂರ್ತಿ, ಜಯಮ್ಮ, ಚಂದ್ರಶೇಖರ್, ಎಂ.ಬಿ. ಶಿವಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.