ADVERTISEMENT

ದಾವಣಗೆರೆ: ನಗರಕ್ಕೆ ಕಳಶಪ್ರಾಯ ಕಲ್ಯಾಣಿ

ಹೊಂಡದವೃತ್ತದ ಕಲ್ಯಾಣಿಯನ್ನು ಲೋಕಾರ್ಪಣೆ ಮಾಡಿದ ಸಂಸದ ಜಿ.ಎಂ. ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 6:42 IST
Last Updated 27 ಮಾರ್ಚ್ 2023, 6:42 IST
ದಾವಣಗೆರೆಯ ಹೊಂಡದ ವೃತ್ತದ ಬಳಿ ನವೀಕರಣಗೊಂಡ ಕಲ್ಯಾಣಿಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು        –ಪ್ರಜಾವಾಣಿ ಚಿತ್ರ
ದಾವಣಗೆರೆಯ ಹೊಂಡದ ವೃತ್ತದ ಬಳಿ ನವೀಕರಣಗೊಂಡ ಕಲ್ಯಾಣಿಯನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು        –ಪ್ರಜಾವಾಣಿ ಚಿತ್ರ   

ದಾವಣಗೆರೆ: ಆನೆಕೊಂಡ ಮತ್ತು ಹೊಂಡದ ವೃತ್ತದಲ್ಲಿ ಪುರಾತನ ಕಾಲದ ಕಲ್ಯಾಣಿಗಳಿದ್ದು, ಈ ಪೈಕಿ ಹೊಂಡದ ವೃತ್ತದ ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸಲಾಗಿದೆ. ಈ ಕಲ್ಯಾಣಿ ಈ ಭಾಗಕ್ಕೆ ಕಳಶಪ್ರಾಯ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ನಗರದ ಹೊಂಡದ ವೃತ್ತದಲ್ಲಿ
₹ 4.30 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕಲ್ಯಾಣಿಯನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇದೇ ಭಾಗದಲ್ಲಿ ಸಮುದಾಯ ಭವನ ಕೂಡ ನಿರ್ಮಿಸಲಾಗಿದ್ದು, ಉದ್ಘಾಟನೆಗೊಂಡು ಬಹಳ ದಿನಗಳಾಗಿವೆ. ಆದರೂ ಜನರ ಬಳಕೆಗೆ ಇನ್ನೂ ಲಭ್ಯವಾಗಿಲ್ಲ. ಕೂಡಲೇ ಪಾಲಿಕೆಗೆ ಹಸ್ತಾಂತರ ಮಾಡಿ ಭವನ ಜನರ ಉಪಯೋಗಕ್ಕೆ ಬರುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ನಗರದ ಕೆಲವು ವೃತ್ತಗಳಲ್ಲಿ ಈಗಾಗಲೇ ಮಹಾನ್ ವ್ಯಕ್ತಿಗಳ ಪುತ್ಥಳಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಉಳಿದ ವೃತ್ತಗಳಲ್ಲೂ ಇನ್ನೂ ಹಲವು ಐತಿಹಾಸಿಕ ಪುರುಷರ ಪುತ್ಥಳಿ ಸ್ಥಾಪಿಸಬೇಕಿದೆ. ಈ ಮೂಲಕ ನಗರವನ್ನು ಐತಿಹಾಸಿಕ ನಗರವನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದೇ ಮಾದರಿಯಲ್ಲಿ ಜಿಲ್ಲೆಯ ಪ್ರಮುಖ ಐತಿಹಾಸಿಕ ಸ್ಥಳಗಳಾದ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದ ಷಹಾಜಿ ಮಹಾರಾಜರ ಸಮಾಧಿ, ಮಾಯಕೊಂಡದಲ್ಲಿರುವ ಹಿರೇ ಮದಕರಿ ನಾಯಕರ ಸಮಾಧಿ, ಆನೆಕೊಂಡದಲ್ಲಿರುವ ಐತಿಹಾಸಿಕ ಕಲ್ಯಾಣಿಗಳನ್ನು ಅಭಿವೃದ್ಧಿಗೊಳಿಸಿದರೆ ಇತಿಹಾಸದ ನೆನಪು ಸದಾ ಉಳಿಯುತ್ತದೆ. ಈ ಅಭಿವೃದ್ಧಿ ಕೆಲಸಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನುವುದು ಕೂಡ ಸ್ಮರಣೀಯವಾಗಿರುತ್ತದೆ ಎಂದು ತಿಳಿಸಿದರು.

ಕಲ್ಯಾಣಿಯ ಜೀರ್ಣೋದ್ಧಾರ ಬಹುದಿನಗಳಿಂದ ನನೆಗುದಿಗೆ ಬಿದ್ದಿತ್ತು. ಸ್ಮಾರ್ಟ್‌ಸಿಟಿ ಇದೀಗ ಪೂರ್ಣಗೊಂಡು ಎಲ್ಲರನ್ನು ಸೆಳೆಯುತ್ತಿದೆ ಎಂದರು.

ಇದಕ್ಕೂ ಮುನ್ನ ಸಂಸದರು ನಗರದ ದೇವರಾಜ್‌ ಅರಸು ಬಡಾವಣೆಯಲ್ಲಿ ಪುನರ್ ನಿರ್ಮಾಣ
ಗೊಂಡಿರುವ ಈಜುಕೊಳ, ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಾಣ ಮಾಡಿರುವ ಕಬಡ್ಡಿ ಕೋರ್ಟ್ ಉದ್ಘಾಟಿಸಿದರು.

ಮೇಯರ್ ವಿನಾಯಕ‌ ಪೈಲ್ವಾನ್, ಸದಸ್ಯರಾದ ರಾಕೇಶ್ ಜಾಧವ್, ಪ್ರಸನ್ನ ಕುಮಾರ್, ಎಲ್.ಡಿ. ಗೋಣೆಪ್ಪ, ಬಿ.ಜಿ.
ಅಜಯ್ ಕುಮಾರ್, ಶಿವಪ್ರಕಾಶ್, ಆಯುಕ್ತೆ ರೇಣುಕಾ, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ
ಅಧ್ಯಕ್ಷ ಎ.ವೈ.ಪ್ರಕಾಶ್, ಮಾಜಿ ಉಪಮೇಯರ್ ಗಾಯತ್ರಿ ಬಾಯಿ ಖಂಡೋಜಿರಾವ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ಧೂಡಾ ಅಧ್ಯಕ್ಷ ಎ.ವೈ ಪ್ರಕಾಶ್, ಮುಖಂಡರಾದ ಯಶವಂತ್ ರಾವ್ ಜಾದವ್, ರಾಜನಹಳ್ಳಿ ಶಿವಕುಮಾರ್, ಪ್ರಸನ್ನಕುಮಾರ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.