
ಜಗಳೂರು: ಪಟ್ಟಣದಲ್ಲಿ ಕನಕ ಭವನ ಹಾಗೂ ಕುರುಬ ಸಮುದಾಯಕ್ಕೆ ಹಾಸ್ಟೆಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು.
ಪಟ್ಟಣದಲ್ಲಿ ಕುರುಬ ಸಮಾಜಕ್ಕೆ ಸೇರಿದ ನಿವೇಶನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮುದಾಯದ ಮುಖಂಡರ ಸಭೆಯನ್ನು ಹಾಲು ಉಕ್ಕಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕನಕ ಭವನಕ್ಕೆ ನಿರ್ಮಾಣಕ್ಕೆ ₹10 ಕೋಟಿ ಮೊತ್ತದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿಸಿದ್ದಾರೆ. ನಿವೇಶನದ ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ವೈಯಕ್ತಿಕವಾಗಿ ಧನಸಹಾಯ ಮಾಡುತ್ತೇನೆ. ಸರ್ಕಾರದ ಹಂತದಲ್ಲಿ ಅನುದಾನ ಬಿಡುಗಡೆಗೆ ಕೈಜೋಡಿಸುತ್ತೇನೆ’ ಎಂದರು.
ಸಮುದಾಯದ ಒಗ್ಗಟ್ಟು ಶ್ಲಾಘನೀಯ. ವೈಮನಸ್ಸಿನಿಂದ ಸಮುದಾಯದ ಒಗ್ಗಟ್ಟು ಒಡೆದು ಹೋಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
‘ಸಮುದಾಯದ ಮುಖಂಡರಾದ ಸಿದ್ದಯ್ಯ ಒಡೆಯರ್ ಅವರ ಸಹಕಾರದಿಂದ ಸಮುದಾಯಕ್ಕೆ 2 ಎಕರೆ ಜಮೀನು ಸಿಕ್ಕಿದೆ. ಈ ಜಮೀನಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಬಿ.ದೇವೇಂದ್ರಪ್ಪ ಅವರು ಮುಂದಾಗಿದ್ದಾರೆ. ಇದರಿಂದ ತಾಲ್ಲೂಕಿನ ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯ ನಿರ್ಮಾಣ ಹಾಗೂ ಇತರೆ ಕಲ್ಯಾಣ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್. ನಾಗರಾಜ್ ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ ಕೀರ್ತಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಕುರುಬ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎನ್. ಓಮಣ್ಣ, ಮುಖಂಡರಾದ ಬಿಸ್ತುವಳ್ಳಿ ಬಾಬು, ಎಲ್.ಬಿ.ಬೈರೇಶ್, ನಿಜಲಿಂಗಪ್ಪ, ಡಾ.ಉದಯಶಂಕರ ಒಡೆಯರ್, ಸಿದ್ದಯ್ಯ ಒಡೆಯರ್, ಸುಧಾ, ಭೈರೇಶ್, ಗೌರಿಪುರ ನಾಗರಾಜ್, ಬಸಪ್ಪ, ಸಾಹುಕಾರ್, ಸಿದ್ದಲಿಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.