ಮಾದನಬಾವಿ (ನ್ಯಾಮತಿ): ದಾಸ ಶ್ರೇಷ್ಠ ಕನಕದಾಸರು ರಚಿಸಿರುವ ಕೀರ್ತನೆಗಳನ್ನು ಒಳಗೊಂಡ ನೃತ್ಯರೂಪಕ ಇಂದಿನ ಪೀಳಿಗೆಯವರಿಗೆ ಉತ್ತಮ ಮಾರ್ಗದರ್ಶಿಯಾಗಿದೆ ಎಂದು ಸಮಾಜ ಸೇವಕ ಬೆಳ್ಳುಳ್ಳಿ ಸಿಂಗಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾದನಬಾವಿ ಗ್ರಾಮದಲ್ಲಿ ಬೀರಲಿಂಗೇಶ್ವರ ಸೇವಾ ಸಮಿತಿ, ಗವಿಸಿದ್ದೇಶ್ವರ ಸೇವಾ ಸಮಿತಿ, ವೀರಭದ್ರೇಶ್ವರ ಜಾನಪದ ಕಲಾ ಸ್ವ–ಸಹಾಯ ಸಂಘ, ರಂಗನಾಥ ಜಾನಪದ ಸಾಂಸ್ಕೃತಿಕ ಕಲಾ ಸ್ವ–ಸಹಾಯ ಸಂಘ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಕನಕದಾಸರ ಅಧ್ಯಯನ ಕೇಂದ್ರ, ಪತಂಜಲಿ ಕರ್ನಾಟಕ ಜಾನಪದ ಕಲಾ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಯುಗಾದಿ ಸಂಭ್ರಮ ಜಾನಪದ ಯುವಜನ ಮೇಳ, ಹಾಲುಮತ ಸಂಸ್ಕೃತಿಯ ಕನಕ ಕಲಾ ವೈಭವ, ಕನಕನ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲಾವಿದ ಪತಂಜಲಿ ಜೆ.ನಾಗರಾಜ್ ಮಾತನಾಡಿ, ‘ಪತಂಜಲಿ ಸಂಸ್ಥೆಯ ಮೂಲಕ 27 ವರ್ಷಗಳಿಂದ ಹಾಲುಮತ ಸಂಸ್ಕೃತಿಯ ಕನಕ ಕಲಾ ವೈಭವ ಗೀತಗಾಯನ ನೃತ್ಯರೂಪಕವನ್ನು ರಾಜ್ಯದಾದ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ’ ಎಂದು ಹೇಳಿದರು.
ಕನಕದಾಸರ ಪಾತ್ರದಲ್ಲಿ ಜಾನಪದ ಕಲಾವಿದ ಎಂ.ಪೂವಯ್ಯ, ಬೀರಪ್ಪನ ಪಾತ್ರದಲ್ಲಿ ಪತಂಜಲಿ ಜೆ.ನಾಗರಾಜ್ ಅಭಿನಯಿಸಿದರು. ಹಿನ್ನೆಲೆ ಗಾಯಕರಾಗಿ ಜಿ.ಎಂ.ಚನ್ನರಾಜ್, ನಾಗರತ್ನ, ತಬಲ ಕಲಾವಿದ ಶ್ಯಾಮ್ ಮಿರಜ್‌ಕರ್, ಕೀಬೋರ್ಡ್ ಕಲಾವಿದ ನವನೀತ್, ರಿದಂ ಪ್ಯಾಡ್ ಕಲಾವಿದ ವಿಟ್ಟು ಮಿರಜ್‌ಕರ್, ಆರ್ಕೆಸ್ಟ್ರಾ ಸೌಂಡ್ಸ್ ಸಿಸ್ಟಂನ ವಿಜಯ್‌ಕುಮಾರ್, ನಮ್ಮ ಟಿವಿಯ ಶ್ರೀ ಕಾಂತ್, ವೀರಭದ್ರೇಶ್ವರ ಜಾನಪದ ಕಲಾ ಸ್ವ–ಸಹಾಯ ಸಂಘ ಮತ್ತು ರಂಗನಾಥ ಜಾನಪದ ಸಾಂಸ್ಕೃತಿಕ ಕಲಾ ಸ್ವ–ಸಹಾಯ ಸಂಘದ ಕಲಾವಿದರು ಗೀತಗಾಯನಕ್ಕೆ ಸಾಥ್ ನೀಡಿದರು.
ಪತಂಜಲಿ ಸಂಸ್ಥೆ ಅಧ್ಯಕ್ಷೆ ಎ.ಎಚ್.ಶ್ಯಾಮಲಾ, ಬಾಲ ಕಲಾವಿದೆ ಎನ್.ಯೋಗೀತಾ ಅವರ ಗೀತಗಾಯನ ನೃತ್ಯರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಇದೇ ಸಂದರ್ಭದಲ್ಲಿ ಎನ್.ಯೋಗೀತಾಗೆ ಸಹ್ಯಾದ್ರಿ ಮಲೆನಾಡು ಜಾನಪದ ಕಲಾ ಸೇವಾ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.