
ದಾವಣಗೆರೆ: ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಬೆಳಿಗ್ಗೆ ‘ಕನ್ನಡ ಹಬ್ಬ’ದ ಸಂಭ್ರಮ ಮನೆ ಮಾಡಿತ್ತು. ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಲಾ ಲೋಕವನ್ನೇ ಸೃಷ್ಟಿಸಿದರು.
ವಿದ್ಯಾರ್ಥಿಗಳು ಆರಂಭದಲ್ಲಿ ಆಕರ್ಷಕ ಪಥ ಸಂಚಲನ ನಡೆಸಿ ಗಮನ ಸೆಳೆದರು. ನಂತರ ಗಣ್ಯರ ಎದುರು ನೃತ್ಯ ವೈಭವವನ್ನೇ ತೆರೆದಿಟ್ಟರು. ಜನರು ಶಿಳ್ಳೆ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
ಏಜು ಏಷ್ಯಾ ಶಾಲೆಯ ವಿದ್ಯಾರ್ಥಿಗಳು ತಾಯಿ ಭುವನೇಶ್ವರಿಯ ಭಾವಚಿತ್ರದೆದುರು ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.
ನಂತರ ಗುರುಕುಲ ವಸತಿಯುತ ಶಾಲೆಯ ವಿದ್ಯಾರ್ಥಿಗಳು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಹಾಗೂ ‘ಕಾಂತಾರ’ ಸಿನಿಮಾಗಳ ಸಂಭಾಷಣೆ ಮತ್ತು ಹಾಡುಗಳಿಗೆ ಭರ್ಜರಿ ನೃತ್ಯ ಪ್ರದರ್ಶಿಸಿದರು. ದೈವ ನರ್ತಕನ ವೇಷಧಾರಿಯೂ ಗಮನ ಸೆಳೆದ.
ಸೇಂಟ್ ಮೇರಿ ಶಾಲೆ ಹಾಗೂ ಸೆಂಟ್ ಪಾಲ್ಸ್ ಶಾಲೆಯ ವಿದ್ಯಾರ್ಥಿಗಳೂ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿ ಕಲರವ ಹೆಚ್ಚಿಸಿದರು. ನೃತ್ಯ ಸ್ಪರ್ಧೆಯಲ್ಲಿ ಗುರುಕುಲ ವಸತಿಯುತ ಶಾಲೆ ಪ್ರಥಮ, ಸೇಂಟ್ ಪಾಲ್ಸ್ ಶಾಲೆ ದ್ವಿತೀಯ, ಸೇಂಟ್ ಮೇರಿ ಶಾಲೆ ತೃತೀಯ ಬಹುಮಾನ ಪಡೆದವು.
ಪಥ ಸಂಚಲನ ಬಹುಮಾನ ವಿಜೇತರು:
25 ವಿವಿಧ ತುಕಡಿಗಳು ಶಿಸ್ತಿನ ಮತ್ತು ಆಕರ್ಷಕ ಪಥ ಸಂಚಲನ ನಡೆಸಿದವು. ನಗರ ಉಪವಿಭಾಗ ಪೊಲೀಸ್ ತಂಡ, ಗೃಹರಕ್ಷಕದಳ, ಅರಣ್ಯ ರಕ್ಷಕ ದಳ, ಅಗ್ನಿಶಾಮಕ ದಳ, ಮಹಾನಗರ ಪಾಲಿಕೆ ತಂಡ ಸೇರಿದಂತೆ ವಿವಿಧ ಶಾಲೆ– ಕಾಲೇಜುಗಳ ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು. ಡಿಎಆರ್ ತಂಡ ಪ್ರಥಮ, ಗೃಹ ರಕ್ಷಕದಳ ತಂಡ ದ್ವಿತೀಯ, ಅರಣ್ಯ ಇಲಾಖೆ ತಂಡ ತೃತೀಯ ಸ್ಥಾನ ಪಡೆದವು.
ಎನ್‌ಸಿಸಿ ವಿಭಾಗ:
ಎ.ಆರ್.ಜಿ ಕಾಲೇಜು ತಂಡ ಪ್ರಥಮ, ಎವಿಕೆ ಕಾಲೇಜು ದ್ವಿತೀಯ, ಜಿಎಫ್‍ಜಿಸಿ ಕಾಲೇಜು ತಂಡ ತೃತೀಯ ಬಹುಮಾನ ಪಡೆದವು.
ಹೈಸ್ಕೂಲ್ ವಿಭಾಗ:
ತರಳಬಾಳು ಶಾಲೆ ಪ್ರಥಮ, ಎಸ್‍ಎಸ್‍ಎನ್‍ಪಿಎಸ್ ಶಾಲೆ ದ್ವಿತೀಯ, ಭಾರತ ಸೇವಾದಳ ತಂಡ ತೃತೀಯ.
ಬೆಸ್ಟ್ ಡ್ರೆಸ್ ವಿಭಾಗ:
ರಾಷ್ಟ್ರೋತ್ಥಾನ ಶಾಲೆ ಪ್ರಥಮ, ಸಿದ್ಧಗಂಗಾ ಶಾಲೆ ದ್ವಿತೀಯ, ಜೈನ್ ಶಾಲೆ ತೃತೀಯ ಬಹುಮಾನ ಹಾಗೂ ಡಿಎಆರ್‌ನ ಬ್ಯಾಂಡ್ ಮಾಸ್ಟರ್ ಹೊನ್ನೂರಪ್ಪ ವಾದ್ಯ ತಂಡ ವಿಶೇಷವಾಗಿ ಕನ್ನಡ ನಾದಾಮೃತ ಪ್ರಶಸ್ತಿ ನೀಡಲಾಯಿತು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಧೂಡಾ ಅಧ್ಯಕ್ಷ ದಿನೇಶ್ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ್ ವಿಠ್ಠಲರಾವ್, ಎಸ್.ಪಿ. ಉಮಾ ಪ್ರಶಾಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಹಾಗೂ ಗಣ್ಯರು ಭಾಗವಹಿಸಿದ್ದರು.
ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ಕನ್ನಡತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕಲಾ ತಂಡಗಳೊಂದಿಗೆ ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆಯು ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.