ADVERTISEMENT

ದಾವಣಗೆರೆ ಜಿಲ್ಲಾ ಕನ್ನಡ ಸಮ್ಮೇಳನ: ನುಡಿಜಾತ್ರೆಗೆ ಮೆರುಗು ನೀಡಿದ ‘ಕನ್ನಡ ರಥ’

ಜಿಲ್ಲಾ ಕನ್ನಡ ಸಮ್ಮೇಳನದಲ್ಲಿ ಇದೇ ಮೊದಲ ಸಲ ಬಳಕೆ

ಡಿ.ಶ್ರೀನಿವಾಸ
Published 8 ಜನವರಿ 2025, 5:36 IST
Last Updated 8 ಜನವರಿ 2025, 5:36 IST
ಜಗಳೂರು ತಾಲ್ಲೂಕಿನ ದೇವಿಕೆರೆ ಗ್ರಾಮಕ್ಕೆ ‘ಕನ್ನಡ ರಥ’ ಮಂಗಳವಾರ ಆಗಮಿಸಿದಾಗ ತಹಶೀಲ್ದಾರ್ ಕಲೀಂ ಉಲ್ಲಾ, ತಾಲ್ಲೂಕು ಪಂಚಾಯಿತಿ ಇಒ ಕೆಂಚಪ್ಪ, ರಥ ನಿರ್ವಹಣಾ ಸಮಿತಿ ಅಧ್ಯಕ್ಷ ಬಿ. ಮಹೇಶ್ವರಪ್ಪ ಹಾಗೂ ಗ್ರಾಮಸ್ಥರು ಸ್ವಾಗತಿಸಿದರು
ಜಗಳೂರು ತಾಲ್ಲೂಕಿನ ದೇವಿಕೆರೆ ಗ್ರಾಮಕ್ಕೆ ‘ಕನ್ನಡ ರಥ’ ಮಂಗಳವಾರ ಆಗಮಿಸಿದಾಗ ತಹಶೀಲ್ದಾರ್ ಕಲೀಂ ಉಲ್ಲಾ, ತಾಲ್ಲೂಕು ಪಂಚಾಯಿತಿ ಇಒ ಕೆಂಚಪ್ಪ, ರಥ ನಿರ್ವಹಣಾ ಸಮಿತಿ ಅಧ್ಯಕ್ಷ ಬಿ. ಮಹೇಶ್ವರಪ್ಪ ಹಾಗೂ ಗ್ರಾಮಸ್ಥರು ಸ್ವಾಗತಿಸಿದರು   

ಜಗಳೂರು: ಪಟ್ಟಣದಲ್ಲಿ ಇದೇ 11 ಮತ್ತು 11ರಂದು ನಡೆಯಲಿರುವ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ‘ಕನ್ನಡ ರಥ’ ಸಂಚರಿಸುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ನಡೆಯುವ ನುಡಿಜಾತ್ರೆ ವೇಳೆ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಸಂಚರಿಸುತ್ತಿರುವುದು ವಿಶೇಷವಾಗಿದೆ.

ಇದುವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಮಾತ್ರ ‘ಕನ್ನಡ ರಥ’ ಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿತ್ತು. ಆದರೆ, ಕನ್ನಡ ಸಾಹಿತ್ಯ ಪರಿಷತ್‌ ದಾವಣಗೆರೆ ಜಿಲ್ಲಾ ಘಟಕ ಮತ್ತು ಜಗಳೂರಿನ ಶಾಸಕ ಬಿ. ದೇವೇಂದ್ರಪ್ಪ ಅವರ ಒತ್ತಾಸೆಯ ಮೇರೆಗೆ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ‘ಕನ್ನಡ ರಥ’ ಜ.2ರಿಂದ ಸಂಚರಿಸುತ್ತಿದ್ದು, ಸಾಹಿತ್ಯದ ಕಿಚ್ಚು ಹಚ್ಚುತ್ತಿದೆ.

ಕನ್ನಡ ತಾಯಿ ಭುವನೇಶ್ವರಿ ಪ್ರತಿಮೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕರು, ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನ್ ಮಿರ್ಜಾ ಇಸ್ಮಾಯಿಲ್, ಸರ್.ಎಂ. ವಿಶ್ವೇಶ್ವರಾಯ, ಸಮ್ಮೇಳನದ ನಿಯೋಜಿತ ಅಧ್ಯಕ್ಷ ಎ.ಬಿ. ರಾಮಚಂದ್ರಪ್ಪ, ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ಜೋಷಿ, ಜಿಲ್ಲಾ ಘಟಕದ ಅಧ್ಯಕ್ಷ ವಾಮದೇವಪ್ಪ, ಜಗಳೂರು ತಾಲ್ಲೂಕಿನ ಸಂಗೇನಹಳ್ಳಿ ಕೆರೆ, ಕೊಣಚಕಲ್ ಗುಡ್ಡದ ದಳವಾಯಿ ಹೊಂಡ, ದಾವಣಗೆರೆಯ ಗಾಜಿನ ಮನೆ, ಹರಿಹರೇಶ್ವರ ದೇವಸ್ಥಾನ ಮತ್ತು ಸಿರಿಗೆರೆ ಶ್ರೀಗಳು ಕೆರೆಗಳಿಗೆ ಬಾಗಿನ ಅರ್ಪಿಸುತ್ತಿರುವ ಚಿತ್ರಗಳನ್ನು ಒಳಗೊಂಡಿರುವ ರಥವು ಹಳ್ಳಿಗಾಡಿನಲ್ಲಿ ಕನ್ನಡದ ಸೊಗಡನ್ನು ಪಸರಿಸುತ್ತಿದೆ.

ADVERTISEMENT

‘ಸಮ್ಮೇಳನದ ವಿಶೇಷ ಆಕರ್ಷಣೆ ‘ಕನ್ನಡ ರಥ’ ಸಂಚಾರ. ಇದರಿಂದಾಗಿ ರೈತರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಜನಸಮೂಹದಲ್ಲಿ ನಾಡಿನ ಭಾಷೆ, ನೆಲ, ಜಲದ ವಿಷಯವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಜನರಲ್ಲಿ ಭಾಷಾ ಅಸ್ಮಿತೆ ಹುಟ್ಟುಹಾಕಲು ನೆರರವಾಗಿದೆ’ ಎಂದು ಸಮ್ಮೇಳನದ ನಿಯೋಜಿತ ಅಧ್ಯಕ್ಷ ಎ.ಬಿ. ರಾಮಚಂದ್ರಪ್ಪ ‘ಪ್ರಜಾವಾಣಿ’ಗೆ ವಿವರಿಸಿದರು.

‘ಸಾಹಿತ್ಯ ಸಮ್ಮೇಳನ ಕೇವಲ ಸಾಹಿತಿಗಳಿಗೆ ಸೀಮಿತವಲ್ಲ. ಸಮ್ಮೇಳನವು ಭಾಷೆ, ನೆಲ, ಜಲ ಹಾಗೂ ಸಾಮಾನ್ಯರ ಜನಜೀವನದ ಕುರಿತ ಅರ್ಥಪೂರ್ಣ ಚರ್ಚೆಗೆ ಇಂಬು ನೀಡುವಂತಿರಬೇಕು. ಸಮಸ್ತರನ್ನು ಒಳಗೊಳ್ಳುವ ನಿಟ್ಟಿನಲ್ಲಿ ಹಾಗೂ ಅರ್ಥಪೂರ್ಣವಾಗಿ ಸಮ್ಮೇಳನ ನಡೆಯಬೇಕು ಎಂಬ ಉದ್ದೇಶದಿಂದ ಮೊದಲ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಂಚರಿಸುವ ‘ಕನ್ನಡ ರಥ’ವನ್ನು ಜಿಲ್ಲಾ ಸಮ್ಮೇಳನದಲ್ಲಿ ಬಳಸಲಾಗುತ್ತಿದೆ. ಜನರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಗುತ್ತಿದೆ’ ಎಂದು ಶಾಸಕ ಬಿ.ದೇವೇಂದ್ರಪ್ಪ ಸಂತಸ ವ್ಯಕ್ತಪಡಿಸಿದರು.

ಭುವನೇಶ್ವರಿ ಭಾವಚಿತ್ರ ಹೊತ್ತ ರಥವನ್ನು ಹಳ್ಳಿಗಳಲ್ಲಿ ಮಹಿಳೆಯರು, ರೈತರು, ವಿಶೇಷವಾಗಿ ಶಾಲಾ ವಿದ್ಯಾರ್ಥಿಗಳು ಕಿಕ್ಕಿರಿದು ಸೇರುವ ಮೂಲಕ ಭಕ್ತಿ ಗೌರವದಿಂದ ಬರ ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ರಥ ಸಾಗುವ ಬೀದಿಗಳಲ್ಲಿ ರಂಗೋಲಿ ಹಾಕಿ ಸಂಭ್ರಮಿಸುತ್ತಿದ್ದಾರೆ. ಜನರು ಹಬ್ಬದೋಪಾದಿಯಲ್ಲಿ ರಥವನ್ನು ಸ್ವಾಗತಿಸಿ, ಬೀಳ್ಕೊಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಕಳೆದ ಐದು ದಿನಗಳಿಂದ ಕನ್ನಡ ಹಬ್ಬದ ಸಡಗರ, ಸಂಭ್ರಮ ಕಳೆಗಟ್ಟಿದೆ.

ಜ.11 ಮತ್ತು 12ರಂದು ಜಗಳೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು 13ರಂದು ಜಗಳೂರು ಜಲೋತ್ಸವ ಸಮಾರಂಭ ಜರುಗಲಿದೆ
ಬಿ.ದೇವೇಂದ್ರಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.