
ಹರಿಹರ: ತಾಲ್ಲೂಕಿನ ಬೆಳ್ಳೂಡಿ ಗ್ರಾಮ ಸಮೀಪದ ಕಾರ್ಗಿಲ್ ಕಂಪನಿ ವಿವಾದದ ಕುರಿತು ಶೀಘ್ರವೇ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್.ಮರಿಯೋಜಿರಾವ್ ಭರವಸೆ ನೀಡಿದರು.
ಕಂಪನಿ ಮುಂದೆ ಕಾರ್ಮಿಕರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಅವರು, ‘ಈ ಭಾಗದ ನೂರಾರು ಕಾರ್ಮಿಕರು ಹಾಗೂ ಮೆಕ್ಕೆಜೋಳ ಬೆಳೆಯುತ್ತಿರುವ ಸಾವಿರಾರು ರೈತರ ಜೀವನೋಪಾಯಕ್ಕೆ ಆಧಾರವಾಗಿರುವ ಈ ಕಂಪನಿ ಮುಂಚಿನಂತೆ ಕಾರ್ಯ ನಿರ್ವಹಿಸುವುದು ಮುಖ್ಯವಾಗಿದೆ’ ಎಂದರು.
ಲಾಭದಾಯಕವಾಗಿ ನಡೆಯುತ್ತಿದ್ದ ಕೃಷಿ ಆಧಾರಿತ ಕಂಪನಿಯನ್ನು ಮಾರಾಟ ಮಾಡುವಂತಹ ಸ್ಥಿತಿ ಏಕೆ ಬಂತು ಎಂಬ ಪ್ರಶ್ನೆ ಮೂಡಿದೆ. ಕಂಪನಿ ಮಾರಾಟ ಮಾಡುವುದಿದ್ದರೂ ಕೈಗಾರಿಕಾ ನಿಯಮಾವಳಿಗಳನ್ನು ಪಾಲನೆ ಮಾಡಬೇಕು ಎಂದು ಆಗ್ರಹಿಸಿದರು.
10 ವರ್ಷಗಳ ಹಿಂದೆ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರೇ ಕಂಪನಿಯನ್ನು ಉದ್ಘಾಟಿಸಿದ್ದರು. ಈಗ ಅವರ ಅವಧಿಯಲ್ಲೇ ಉತ್ಪಾದನೆ ನಿಲ್ಲಿಸಿ ವಿವಾದ ಸೃಷ್ಟಿಯಾಗಿರುವುದು ವಿಪರ್ಯಾಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಮಿಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಹೇಳಿದರು.
‘ಬಲವಂತವಾಗಿ ಕೆಲಸದಿಂದ ತೆಗೆದಿರುವ ಕಾರ್ಮಿಕರನ್ನು ಮರು ನೇಮಕ ಮಾಡಬೇಕು, ಈಗಿರುವ ಕಾರ್ಮಿಕರಿಗೆ ಸೇವಾ ಭದ್ರತೆ ನೀಡಬೇಕು, ಕಡಿಮೆ ಸಂಬಳಕ್ಕೆ ದುಡಿಯುತ್ತಾರೆ ಎಂಬ ಕಾರಣಕ್ಕೆ ಉತ್ತರ ಪ್ರದೇಶ, ಬಿಹಾರದ ಕಾರ್ಮಿಕರನ್ನು ನೇಮಿಸಿಕೊಳ್ಳಬಾರದು’ ಎಂದು ಆಗ್ರಹಿಸಿದರು.
ಎಐಯುಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಕೈದಾಳೆ, ಕಾರ್ಮಿಕ ಸಂಘದ ಅಧ್ಯಕ್ಷ ಸಂಜಯ್ ಜೆ., ಸಿಐಟಿಯು ಜಿಲ್ಲಾ ಸಂಚಾಲಕ ಮುದಿಮಲ್ಲನ ಗೌಡರು, ಸಿಪಿಐ ಸದಸ್ಯ ಕುಮಾರ ನಾಯಕ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.