ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ನಿರ್ವಾಹಕರೊಬ್ಬರ ಮೇಲೆ ಮರಾಠಿಗರು ನಡೆಸಿದ ಹಲ್ಲೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ ಬಂದ್‌ಗೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಬಸ್ ಸಂಚಾರ ತಡೆಯಲು ಯತ್ನಿಸಿದ ಐವರನ್ನು ಪೊಲೀಸರು ಬಂದಿಸಿದ್ದು, ಹೋರಾಟವು ಪ್ರತಿಭಟನೆಗೆ ಸೀಮಿತಗೊಂಡಿತು.
ದಾವಣಗೆರೆ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಜನಜೀವನ ಸಹಜವಾಗಿದೆ. ಅಶೋಕ ರಸ್ತೆ ಹೊರತುಪಡಿಸಿ ಎಲ್ಲೆಡೆ ಅಂಗಡಿಗಳು ಬಾಗಿಲು ತೆರೆದಿದ್ದು, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಸಂಚಾರ ಎಂದಿನಂತಿದೆ. ಆಟೊ, ಟ್ಯಾಕ್ಸಿಗಳು ಸೇವೆ ಒದಗಿಸುತ್ತಿವೆ. ಶಾಲೆ–ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.
ಜಯದೇವ ವೃತ್ತದಲ್ಲಿ ಜಮಾಯಿಸಿದ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನೆ ವಿರುದ್ಧ ಘೋಷಣೆ ಕೂಗಿದರು. ಪರಭಾಷಿಕರ ಪುಂಡಾಟಿಕೆ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದರು. ಮಾನವ ಸರಪಳಿ ರಚಿಸಿ ವಾಹನ ಸಂಚಾರ ತಡೆದರು. ಉಪವಿಭಾಗಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಪತ್ರ ಸಲ್ಲಿಸಿದರು.
‘ಎಂಇಎಸ್ ಕಾರ್ಯಕರ್ತರು ಬೆಳಗಾವಿಯಲ್ಲಿ ಉದ್ದಟತನದಿಂದ ವರ್ತಿಸುತ್ತಿದ್ದಾರೆ. ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಯಾವೊಬ್ಬ ರಾಜಕೀಯ ನಾಯಕರು ಕೂಡ ಮರಾಠಿಗರ ಈ ವರ್ತನೆಯನ್ನು ಖಂಡಿಸುತ್ತಿಲ್ಲ. ರಾಜಕಾರಣಿಗಳಿಗೆ ಕನ್ನಡಿಗರ ಹಿತಕ್ಕಿಂತ ಮರಾಠಿಗರ ಮತ ಮುಖ್ಯವಾಗಿದೆ’ ಎಂದು ವೇದಿಕೆ ಅಧ್ಯಕ್ಷ ಕೆ.ಜಿ.ಯಲ್ಲಪ್ಪ ಆಕ್ರೋಶ ವ್ಯಕ್ತಪಡಿಸಿದರು.
‘ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಸೇರಿ ಸುತ್ತಲಿನ ರಾಜ್ಯಗಳ ದಬ್ಬಾಳಿಕೆ ಹೆಚ್ಚಾಗಿದೆ. ಕನ್ನಡಿಗರು ಭಾಷೆಯ ಹೆಸರಿನಲ್ಲಿ ಸಂಘಟಿತರಾಗುವ ಬದಲು ಜಾತಿಯ ಹೆಸರಿನಲ್ಲಿ ಚದುರಿ ಹೋಗುತ್ತಿದ್ದಾರೆ. ರಾಜಕಾರಣಿಗಳು ಇದನ್ನು ಸದುಪಯೋಗ ಮಾಡಿಕೊಳ್ಳಲು ಹವಣಿಸುತ್ತಿದ್ದಾರೆ’ ಎಂದು ಆರೋಪಿಸಿದರು.
ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಎಂ.ರವಿ, ಸಂತೋಷ್ ದೊಡ್ಮನಿ, ಬಿ.ಇ.ದಯಾನಂದ್, ಬಿ.ಮಂಜುನಾತ್, ಜಬಿವುಲ್ಲಾ, ನವೀನ್ ಹಾಜರಿದ್ದರು.
ಐವರ ಬಂಧನ, ಬಿಡುಗಡೆ
ಬಸ್ ಸಂಚಾರ ತಡೆಯಲು ಯತ್ನಿಸಿದ ಕರ್ನಾಟಕ ಏಕತಾ ವೇದಿಕೆಯ ಐವರು ಕಾರ್ಯಕರ್ತರನ್ನು ಪೊಲೀಸರು ಶನಿವಾರ ಬಂಧಿಸಿ, ಕೆಲ ಹೊತ್ತಿನ ಬಳಿಕ ಬಿಡಗಡೆ ಮಾಡಿದರು.
ಜಯದೇವ ವೃತ್ತದಲ್ಲಿ ಶನಿವಾರ ಬೆಳಿಗ್ಗೆ ಸೇರಿದ ಪ್ರತಿಭಟನಕಾರರು ಮಹಾರಾಷ್ಟ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನೆಯನ್ನು ಕರ್ನಾಟಕದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿದ್ದ ಬಸ್‌ಗಳನ್ನು ತಡೆಯಲು ಮುಂದಾದರು. ಒತ್ತಾಯಪೂರ್ವಕವಾಗಿ ಬಂದ್ ನಡೆಸಲು ಯತ್ನಿಸಿದ ಆರೋಪದ ಮೇರೆಗೆ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಇದಕ್ಕೂ ಮುನ್ನ ರಿಂಗ್ ರಸ್ತೆಯಲ್ಲಿ ಟೈರುಗಳಿಗೆ ಬೆಂಕಿ ಹಾಕಿ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.