ADVERTISEMENT

ದಾವಣಗೆರೆ: ಕರ್ನಾಟಕ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 6:51 IST
Last Updated 28 ಸೆಪ್ಟೆಂಬರ್ 2020, 6:51 IST
ದಾವಣಗೆರೆ ಜಯದೇವ ಸರ್ಕಲ್‌ನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ದಾವಣಗೆರೆ ಜಯದೇವ ಸರ್ಕಲ್‌ನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.   
""

ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿವೆ ಎಂದು ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ದಾವಣಗೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಖಿಲ ಭಾರತ ಕಿಸಾನ್ ಸಭಾ, ವಿವಿಧ ರೈತ ಸಂಘಗಳು, ಕಾಂಗ್ರೆಸ್‌, ಜೆಡಿಎಸ್‌, ಸಿಪಿಐ, ಸಿಪಿಐಎಂ, ಎಸ್‌ಯುಸಿಐ, ಸಿಐಟಿಯು, ಎಐಡಿಎಸ್‌ಒ, ದಲಾಲರ ಸಂಘ, ದಲಿತ ಸಂಘರ್ಷ ಸಮಿತಿ ಕನ್ನಡ ಪರ ಸಂಘಟನೆಗಳು ಸಹಿತ ವಿವಿಧ ರಾಜಕೀಯ ಪಕ್ಷಗಳು, ವಿವಿಧ ಹೋರಾಟ ಸಮಿತಿಗಳು, ಸಂಘಗಳು ಪ್ರತಿಭಟನೆಯಲ್ಲಿ ಭಾಗಿಯಾದವು.

ಅಂಗಡಿಗಳನ್ನು ಮುಚ್ಚಲಾಗಿತ್ತು. ವ್ಯಾಪಾಯ ವಹಿವಾಟುಗಳು ಬಹುತೇಕ ಸ್ಥಗಿತಗೊಂಡಿದ್ದವು. ಪ್ರತಿಭಟನಕಾರರು ವಿವಿಧ ರಸ್ತೆಗಳಲ್ಲಿ ಸಂಚರಿಸಿದರು. ವಾಹನ ಸಂಚಾರ ಸ್ಥಗಿತಗೊಂಡಿತ್ತು.

ADVERTISEMENT
ದಾವಣಗೆರೆ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ತಲೆ ಇಲ್ಲದ ಸರ್ಕಾರದ ದೇಹ ಎಂದು ಪ್ರತಿಕೃತಿಯನ್ನು ಕನ್ನಡಪರ ಸಂಘಟನೆಗಳು ಸುಟ್ಟು ಹಾಕಿದವು.

ಬಿಗಿ ಬಂದೋಬಸ್ತು: 3 ಕೆಎಸ್‌ಆರ್‌ಪಿ, 6 ಸಶಸ್ತ್ರದಳ, 600 ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳು ಬಿಗಿ ಬಂದೋಬಸ್ತು ಮಾಡಿದ್ದರು. ಬಸ್‌ನಿಲ್ದಾಣ, ರೈಲುನಿಲ್ದಾಣಕ್ಕೆ ಭದ್ರತೆ ನೀಡಲಾಗಿತ್ತು. ಪ್ರಮುಖ ಸ್ಥಳಗಳಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಕಾಂಗ್ರೆಸ್ ನಾಯಕರ ಬಂಧನ

ರಾಷ್ಟ್ರೀಯ ಹೆದ್ದಾರಿಯಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ ಕಿಸಾನ್ ಕಾಂಗ್ರೆಸ್ ನಾಯಕರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.

ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ ಶಿವಗಂಗಾ ಸೇರಿ 50 ಕ್ಕೂ ಅಧಿಕ ಮಂದಿಯನ್ನು ಬಂಧಿಸಿರುವುದನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.