ADVERTISEMENT

ಬಜೆಟ್‌ | ದಾವಣಗೆರೆ ಜಿಲ್ಲೆಗೆ ಮತ್ತೆ ಕಹಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2023, 8:10 IST
Last Updated 8 ಜುಲೈ 2023, 8:10 IST
ರಾಜ್ಯ ಬಜೆಟ್‌ 2023
ರಾಜ್ಯ ಬಜೆಟ್‌ 2023   

ದಾವಣಗೆರೆ: ರಾಜ್ಯ ಬಜೆಟ್‌ನಲ್ಲಿ ಈ ಬಾರಿಯೂ ಜಿಲ್ಲೆಗೆ ಸಿಕ್ಕಿದ್ದು ಕಹಿಯೇ ಹೆಚ್ಚು. ಕೈಗಾರಿಕಾ ಕಾರಿಡಾರ್‌, ಜವಳಿ ಪಾರ್ಕ್‌, ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ದಶಕಗಳ ಬೇಡಿಕೆಗೆ ಈ ಬಾರಿಯ ಬಜೆಟ್‌ನಲ್ಲೂ ಮನ್ನಣೆ ಸಿಕ್ಕಿಲ್ಲ.

ಸಮಗ್ರ ಯೋಜನೆಯಡಿ ದಾವಣಗೆರೆ ಜಿಲ್ಲೆಯನ್ನು ಪ್ರಸ್ತಾಪಿಸಿದ್ದನ್ನು ಹೊರತುಪಡಿಸಿದರೆ ಜಿಲ್ಲೆಗೆ ಹೇಳಿಕೊಳ್ಳುವಂತಹ ಮಹತ್ವದ ಯೋಜನೆ ಘೋಷಣೆಯಾಗಿಲ್ಲ. ಐಟಿ ಹಬ್, ಉದ್ಯೋಗ ಸೃಷ್ಟಿ ಯೋಜನೆಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬಡಾವಣೆ, ಬೃಹತ್‌ ಕೈಗಾರಿಕೆ ಘಟಕಗಳ ಆರಂಭಕ್ಕೆ ‘ಲ್ಯಾಂಡ್‌ ಬ್ಯಾಂಕ್‌’ ಆರಂಭಿಸಬೇಕು ಎಂಬ ಬೇಡಿಕೆಗಳಿಗೆ ಸ್ಪಂದನೆ ಸಿಕ್ಕಿಲ್ಲ.

19 ಕೆರೆಗಳನ್ನು ತುಂಬಿಸುವ ಯೋಜನೆಯಡಿ ₹ 770 ಕೋಟಿ ವೆಚ್ಚದಲ್ಲಿ ರಾಜ್ಯದ ಹಲವು ಜಿಲ್ಲೆಗಳ ಜತೆಗೆ ದಾವಣಗೆರೆ ಜಿಲ್ಲೆಯ ಕೆರೆಗಳಿಗೂ ನೀರು ತುಂಬಿಸಲಾಗುವುದು ಎಂಬ ಘೋಷಣೆ, ವೈದ್ಯಕೀಯ ಶಿಕ್ಷಣದಡಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ದಾವಣಗೆರೆಯಲ್ಲಿ ಅತ್ಯಾಧುನಿಕ ಕೌಶಲ ‍ಪ್ರಯೋಗಾಲಯ, ಅಲ್ಪಸಂಖ್ಯಾತರ ಕೌಶಲ ತರಬೇತಿ ಕೇಂದ್ರ, ಪ್ರತ್ಯೇಕ ಹಾಲು ಒಕ್ಕೂಟ ಹೊರತುಪಡಿಸಿದರೆ ಜಿಲ್ಲೆಗೆ ಯಾವುದೇ ದೊಡ್ಡ ಕೊಡುಗೆ ಸಿಕ್ಕಿಲ್ಲ.

ADVERTISEMENT

ಜಿಲ್ಲಾ ಮಟ್ಟದಲ್ಲಿ ಎಸ್‌ಸಿ, ಎಸ್‌ಟಿ ಹಿರಿಯ ನಾಗರಿಕರ ಆರೈಕೆ ಮತ್ತು ನೆರವಿಗೆ ವೃದ್ಧಾಶ್ರಮಗಳನ್ನು ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿ ಅಡಿ ತೆರೆಯುವ ಪ್ರಸ್ತಾಪವಿದೆ. ಪಿಪಿಪಿ ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್‌ಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸ್ಥಾಪಿಸುವ ಉದ್ದೇಶದಲ್ಲಿ ದಾವಣಗೆರೆಯೂ ಸೇರಲಿದೆ ಎಂದು ಕೊಂಚ ಸಂತಸಪಡಬಹುದು. ಇದನ್ನು ಹೊರತುಪಡಿಸಿದರೆ ಜಿಲ್ಲೆಗೆ ಯಾವುದೇ ದೊಡ್ಡ ಮಟ್ಟದ ಯೋಜನೆಗಳು ಘೋಷಣೆಯಾಗಿಲ್ಲ.

ನಿರೀಕ್ಷೆಯಂತೆ ಈ ಬಾರಿಯೂ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಇದು ನಿರಾಶದಾಯಕ ಬಜೆಟ್‌. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವುದೇ ಯೋಜನೆಗಳು ಘೋಷಣೆಯಾಗಿಲ್ಲ ಎಂದು ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಅರ್ಥಶಾಸ್ತ್ರಜ್ಞರು ಬೇಸರ ವ್ಯಕ್ತಪಡಿಸಿದ್ದಾರೆ.

‘ಗ್ಯಾರಂಟಿ ಯೋಜನೆಗಳ ಬದ್ಧತೆ ಹಾಗೂ ರಾಜ್ಯದ ದೃಷ್ಟಿಯಿಂದ ಕೆಲ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ದಾವಣಗೆರೆ ಜಿಲ್ಲೆಗೆ ಹೊಸ ಕೊಡುಗೆ ಇಲ್ಲ. ಕೈಗಾರಿಕೆಗಳ ಸ್ಥಾಪನೆ ಪ್ರಸ್ತಾಪವಿದ್ದರೂ ಜಿಲ್ಲೆಯನ್ನು ಹೊರಗಿಡಲಾಗಿದೆ. ಉಳಿದಂತೆ ಬಡವರನ್ನು ಕೇಂದ್ರೀಕರಿಸಿ ಬಜೆಟ್‌ನಲ್ಲಿ ಯೋಜನೆ ಘೋಷಿಸಲಾಗಿದೆ’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ರಂಗಪ್ಪ ಕೆ.ಬಿ. ಪ್ರತಿಕ್ರಿಯಿಸಿದರು.

ಜಿಲ್ಲೆಗೆ ಯಾವುದೇ ಯೋಜನೆಗಳನ್ನು ಘೋಷಿಸದಿರುವುದು ಬೇಸರ ತಂದಿದೆ.  ಜವಳಿ ಪಾರ್ಕ್‌ ಕೈಗಾರಿಕಾ ಕಾರಿಡಾರ್‌ ಸೇರಿದಂತೆ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಯಾವುದೇ ಘೋಷಣೆಯಾಗಿಲ್ಲ. ‘ಮ್ಯಾಂಚೆಸ್ಟರ್‌ ಆಫ್‌ ಕರ್ನಾಟಕ’ ಖ್ಯಾತಿಗೆ ಪೂರಕ ಯೋಜನೆ ಇಲ್ಲ. 40 ವರ್ಷಗಳ ಹಿಂದೆ ವಿಮಾನ ನಿಲ್ದಾಣ ಇತ್ತು. ಚಿಕ್ಕ ವಿಮಾನಗಳು ಇಲ್ಲಿ ಇಳಿಯುತ್ತಿದ್ದವು. ಅದಕ್ಕೆ ಉತ್ತೇಜನ ಸಿಗಲಿಲ್ಲ. ಆ ಭೂಮಿಯೂ ಹೋಯಿತು
ಅಥಣಿ ಎಸ್‌. ವೀರಣ್ಣ, ಉದ್ಯಮಿ
ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಕೇಂದ್ರೀಕರಿಸಿದ ಕಾರಣ ಜಿಲ್ಲೆಗೆ ಯಾವುದೇ ಯೋಜನೆಯ ಪ್ರಸ್ತಾಪವಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಿರುವುದರಿಂದ ಅನುದಾನ ಹಂಚಿಕೆಯಾಗಿಲ್ಲ. ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡರೆ ಒಳಿತು. ಎಲ್ಲವನ್ನೂ ರಾಜ್ಯ ಸರ್ಕಾರದ ಅನುದಾನ ಕಡಿಮೆ ಇರುವ ಕಾರಣ ಸಮಗ್ರ ಅಭಿವೃದ್ಧಿ ಅಸಾಧ್ಯ. ಕೇಂದ್ರದ ಯೋಜನೆಗಳು ಬಂದರೆ ಹೆಚ್ಚಿನ ಅಭಿವೃದ್ಧಿ ಸಾಧ್ಯ.
ಪ್ರೊ. ವೈ. ವೃಷಭೇಂದ್ರಪ್ಪ, ನಿರ್ದೇಶಕ, ಬಿಐಇಟಿ
ಜಿಲ್ಲೆಯ ಅಭಿವೃದ್ಧಿ ಯೀಜನೆಗಳಿಗೆ ಯಾವುದೇ ಉತ್ತೇಜನ ನೀಡಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಜಿಲ್ಲೆಯ ಜನಸಾಮಾನ್ಯರಿಗೆ ಅನುಕೂಲವಾಗುವ ಯಾವುದೇ ಪ್ರಸ್ತಾಪವನ್ನು ಬಜೆಟ್‌ ಒಳಗೊಂಡಿಲ್ಲ. ಜಿಲ್ಲೆಯ ದೃಷ್ಟಿಯಿಂದ ನಿರಾಶದಾಯಕ ಬಜೆಟ್‌ ಇದು.
ಅಣಬೇರು ರಾಜಣ್ಣ, ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.