ದಾವಣಗೆರೆ: ‘ಶಿವಮೊಗ್ಗದಲ್ಲಿ ನಡೆದ ಘಟನೆ ಒಂದು ರೀತಿಯ ಮುಸನ್ಮಾನರ ಗೂಂಡಾಗಿರಿ. ಗೂಂಡಾಗಿರಿ ಮಾಡಿದವರನ್ನು ತಕ್ಷಣ ಬಂಧಿಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ದಾವಣಗೆರೆಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಶಿವಮೊಗ್ಗದಲ್ಲಿ ಮುಸ್ಲಿಮರ ಗೂಂಡಾಗಿರಿ ಮತ್ತೆ ಪ್ರಾರಂಭವಾಗಿದೆ. ಮುಸುಕು ಹಾಕಿಕೊಂಡು ಗೂಂಡಾಗಿರಿ ಮಾಡಿದ್ದಾರೆ. ಗುರುವಾರ ಹಲ್ಲೆಗೊಳಗಾದ ವ್ಯಕ್ತಿಯನ್ನು ಭೇಟಿ ಮಾಡಿ ಬಂದಿದ್ದೇನೆ. ಬಹಳ ಬೇಸರವಾಗಿದೆ. ಪೊಲೀಸರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.
‘ರಾಜ್ಯ ಸರ್ಕಾರ ಸಂಪೂರ್ಣವಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಿದ್ದು, ಪಶುಸಂಗೋಪನೆ ಇಲಾಖೆ ಪ್ರಭು ಚವ್ಹಾಣ್ ಅವರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಕಾಯ್ದೆ ಕುರಿತು ಚರ್ಚಿಸಿದ್ದಾರೆ. ರಾಜ್ಯದಲ್ಲೂ ಚರ್ಚಿಸಿ ಸಂಪೂರ್ಣವಾಗಿ ಜಾರಿಗೆ ತರಲಾಗುವುದು’ ಎಂದು ತಿಳಿಸಿದರು.
ಶೇ 80ರಷ್ಟು ಬಿಜೆಪಿ ಬೆಂಬಲಿತರ ಗೆಲುವು: ರಾಜ್ಯದ 5808 ಗ್ರಾಮ ಪಂಚಾಯಿತಿಗಳಲ್ಲಿ ಶೇ 80ರಷ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
‘ಪಕ್ಷವನ್ನು ಸಂಘಟಿಸಲು ರಾಜ್ಯದಾದ್ಯಂತ ಬಿಜೆಪಿಯಿಂದ ‘ಗ್ರಾಮ ಸ್ವರಾಜ್ಯ’ ಕಾರ್ಯಕ್ರಮ ನಡೆಸುತ್ತಿದ್ದು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ 6 ತಂಡಗಳಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪ್ರಧಾನಿ ನರೇಂದ್ರಮೋದಿ ಹಾಗೂ ಯಡಿಯೂರಪ್ಪ ಅವರ ಸರ್ಕಾರಗಳು ಹೆಚ್ಚಿನ ಹಣವನ್ನು ನೀಡುತ್ತಿವೆ. ಇದರ ಪೂರ್ಣ ಸದುಪಯೋಗವಾಗಲು ಗ್ರಾಮೀಣ ಪ್ರದೇಶದ ಅನುಭವಿ ವ್ಯಕ್ತಿಗಳು ಹಾಗೂ ಪಕ್ಷದ ವಿಚಾರಗಳನ್ನು ಒಪ್ಪುವಂತಹವರನ್ನು ತಯಾರು ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.