ADVERTISEMENT

ಸಾಸ್ವೆಹಳ್ಳಿ: ಕಿರು ದೀಪಾವಳಿ, ಹಾಲಸ್ವಾಮಿಗಳ ಹೂವಿನ ಗದ್ದಿಗೆ ಉತ್ಸವದ ಸಡಗರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:50 IST
Last Updated 4 ನವೆಂಬರ್ 2025, 7:50 IST
ಸಾಸ್ವೆಹಳ್ಳಿ ಸಮೀಪದ ರಾಂಪುರ ಗ್ರಾಮದಲ್ಲಿ ಶ್ರೀ ಹಾಲಸ್ವಾಮಿಗಳ ಹೂವಿನ ಗದ್ದಿಗೆ ಉತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಸಾಸ್ವೆಹಳ್ಳಿ ಸಮೀಪದ ರಾಂಪುರ ಗ್ರಾಮದಲ್ಲಿ ಶ್ರೀ ಹಾಲಸ್ವಾಮಿಗಳ ಹೂವಿನ ಗದ್ದಿಗೆ ಉತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು.   

ಸಾಸ್ವೆಹಳ್ಳಿ: ಸಮೀಪದ ರಾಂಪುರ ಗ್ರಾಮದಲ್ಲಿ ಕಿರು ದೀಪಾವಳಿ ಹಾಗೂ ಶ್ರೀ ಹಾಲಸ್ವಾಮಿಗಳ ಹೂವಿನ ಗದ್ದಿಗೆ ಉತ್ಸವವು ಹುಣ್ಣಿಮೆಯ ಹಿಂದಿನ ಸೋಮವಾರ ಸಂಭ್ರಮ ಸಡಗರದಿಂದ ನಡೆಯಿತು.

ಕಿರು ದೀಪಾವಳಿ ಹಬ್ಬದ ಪ್ರಯುಕ್ತ ಶುಕ್ರವಾರ ಹಟ್ಟಿ ಪೂಜೆ ನೆರವೇರಿಸಲಾಯಿತು. ಶನಿವಾರ ಮತ್ತು ಭಾನುವಾರ ಗ್ರಾಮದ ತುಂಬೆಲ್ಲ ಹಬ್ಬದ ವಾತಾವರಣ ಮನೆ ಮಾಡಿತ್ತು. ಈ ಸಂದರ್ಭದಲ್ಲಿ ರೈತರು ತಮ್ಮ ಕೃಷಿ ಪರಿಕರಗಳಾದ ನೇಗಿಲು, ಒಪ್ಪರಿನೇಗಿಲು, ದೊಡ್ಡ ಕುಂಟೆ, ಸಣ್ಣ ಕುಂಟೆ, ಮೆಣಸಿನಕುಂಟೆ ಮುಂತಾದ ತಮ್ಮ ಮನೆಯಲ್ಲಿರುವ ಕೃಷಿ ಪರಿಕರಗಳು ಒಪ್ಪವಾಗಿ ತೊಳೆದು ಸಿಂಗರಿಸಿದರು.

ಹೂವಿನ ಗದ್ದಿಗೆ ಉತ್ಸವದ ನಿಮಿತ್ತ ಭಾನುವಾರ ರಾತ್ರಿ ಉತ್ಸವದ ಪಲ್ಲಕ್ಕಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸೇವಂತಿಗೆ, ಕನಕಾಂಬರ, ಮಲ್ಲಿಗೆ ಸೇರಿದಂತೆ ವಿವಿಧ ಜಾತಿಯ ಸುಮಾರು ನಾಲ್ಕರಿಂದ ಐದು ಕ್ವಿಂಟಾಲ್ ಹೂವುಗಳಿಂದ ಮಠದ ಭಕ್ತರು ಪಲ್ಲಕ್ಕಿ ಶೃಂಗಾರ ಮಾಡಿದರು.

ADVERTISEMENT

ಸೋಮವಾರ ಬೆಳಿಗ್ಗೆ ಬೃಹನ್ಮಠದ ಆವರಣದಿಂದ ಜಾನಪದ ಮೇಳಗಳಾದ ತಮಟೆ, ಡೊಳ್ಳು ಕುಣಿತ, ಶಹನಾಯಿ ವಾದ್ಯಗಳೊಂದಿಗೆ ಹೂವಿನ ಪಲ್ಲಕ್ಕಿ ಉತ್ಸವ ಹೊರಟಿತು.

ಗ್ರಾಮದಲ್ಲಿರುವ ಮಠದ ಕರ್ತೃ ಗದ್ದುಗೆಯಲ್ಲಿ ಶ್ರೀ ಶಿವಕುಮಾರ ಹಾಲಸ್ವಾಮಿಗಳು ಪಲ್ಲಕ್ಕಿಯಲ್ಲಿನ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳ ಭಾವಚಿತ್ರ, ಪಾದುಕೆ, ಬೆತ್ತಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ, ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯನ್ನು ಭಕ್ತರು ಕಣ್ತುಂಬಿಕೊಂಡರು.

ದೊಡ್ಡವರು ದೊಡ್ಡ ಗಾತ್ರದ ಪಟಾಕಿಗಳನ್ನು ಸಿಡಿಸಿದರೆ, ಮಕ್ಕಳು ಮತ್ತು ಮಹಿಳೆಯರು ಸಣ್ಣ ಸಣ್ಣ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗ್ರಾಮದ ಮನೆಗಳ ಮುಂದೆ ರಂಗೋಲಿಗಳು, ದೀಪಗಳು ಗ್ರಾಮದ ಮೆರಗನ್ನು ಹೆಚ್ಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.