ADVERTISEMENT

ಕೊಟ್ಟೂರೇಶ್ವರ ಸ್ವಾಮಿ ಭಕ್ತರ ಪಾದಯಾತ್ರೆ ಸಂಭ್ರಮ

ಫೆ.12ರಂದು ಭವ್ಯ ರಥೋತ್ಸವ; ಮಾರ್ಗದುದ್ದಕ್ಕೂ ಪ್ರಸಾದ ವ್ಯವಸ್ಥೆ, ಆರೋಗ್ಯ ಸೇವೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 4:32 IST
Last Updated 10 ಫೆಬ್ರುವರಿ 2026, 4:32 IST
ದಾವಣಗೆರೆಯಿಂದ ಕೊಟ್ಟೂರಿನತ್ತ ಪಾದಯಾತ್ರೆ ಆರಂಭಿಸಿದ ಭಕ್ತರು ಪ್ರಜಾವಾಣಿ ಚಿತ್ರಗಳು
ದಾವಣಗೆರೆಯಿಂದ ಕೊಟ್ಟೂರಿನತ್ತ ಪಾದಯಾತ್ರೆ ಆರಂಭಿಸಿದ ಭಕ್ತರು ಪ್ರಜಾವಾಣಿ ಚಿತ್ರಗಳು   

ದಾವಣಗೆರೆ: ಹೆಗಲಮೇಲೆ ಕೇಸರಿ ಶಾಲು ಧರಿಸಿದ್ದ ಅಪಾರ ಸಂಖ್ಯೆಯ ಭಕ್ತರು ಸೋಮವಾರ ಸಂಜೆ ವಿಜಯನಗರ ಜಿಲ್ಲೆ ಕೊಟ್ಟೂರಿನತ್ತ ಸಾಲು ಸಾಲಾಗಿ ಹೆಜ್ಜೆ ಹಾಕಿದರು.  

ಫೆಬ್ರುವರಿ 12ರಂದು ಕೊಟ್ಟೂರಿನ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ನಡೆಯಲಿದ್ದು, ನಗರ ಮಾತ್ರವಲ್ಲದೇ ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಪಾದಯಾತ್ರೆ ಆರಂಭಿಸಿದರು. ಚಿಣ್ಣರಿಂದ ಹಿಡಿದು ವೃದ್ಧರ ವರೆಗೆ ಎಲ್ಲಾ ವಯೋಮಾನದವರೂ ಪಾದಯಾತ್ರೆಯಲ್ಲಿ ಸಾಗುತ್ತಿದ್ದಾರೆ. 

ಪಾದಯಾತ್ರೆ ಹಿನ್ನೆಲೆಯಲ್ಲಿ ನಗರದ ಪಿ.ಬಿ.ರಸ್ತೆ, ಹರಪನಹಳ್ಳಿ ರಸ್ತೆ, ಹದಡಿ ರಸ್ತೆ, ರೈಲು ನಿಲ್ದಾಣ, ಬಸ್‌ ನಿಲ್ದಾಣ, ಚೌಕಿಪೇಟೆ ಸೇರಿದಂತೆ ವಿವಿಧೆಡೆ ಪ್ರಸಾದ ಸೇವೆ ನಡೆಯುತ್ತಿದೆ. 

ADVERTISEMENT

ಕೊಟ್ಟೂರೇಶ್ವರ ಸ್ವಾಮಿಯ ಭಕ್ತರು ಹಾಗೂ ವಿವಿಧ ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಪಾದಯಾತ್ರಿಗಳಿಗೆ ಮಾರ್ಗದುದ್ದಕ್ಕೂ ಪುಲಾವ್, ಮಿರ್ಚಿ, ಒಗ್ಗರಣೆ, ಉಪ್ಪಿಟ್ಟು, ಬಾಳೆಹಣ್ಣು, ಚಾಕ್ಲೇಟ್, ಇಡ್ಲಿ ವಡಾ ವಿತರಿಸುತ್ತಿದ್ದಾರೆ. ಇದಕ್ಕಾಗಿ ಅಲ್ಲಲ್ಲಿ ಪೆಂಡಾಲ್‌ಗಳನ್ನು ಅಳವಡಿಸಿದ್ದಾರೆ. 

‘ಬೆಂಗಳೂರಿನಿಂದ ಮಗನೊಂದಿಗೆ ರೈಲಿನಲ್ಲಿ ದಾವಣಗೆರೆಗೆ ಬಂದಿದ್ದೇನೆ. ಇಲ್ಲಿಂದ ಕೊಟ್ಟೂರಿನ ವರೆಗೆ ಪಾದಯಾತ್ರೆ ಮೂಲಕ ಸಾಗುವೆ. ಇದು 3ನೇ ವರ್ಷದ ಪಾದಯಾತ್ರೆಯಾಗಿದ್ದು, ಮನಸ್ಸಿಗೆ ಶಾಂತಿ ದೊರೆತಿದೆ. ಪಾದಯಾತ್ರೆಯ ಮಾರ್ಗದಲ್ಲಿ ನೀರು, ಹಣ್ಣಿನ ರಸ, ಪ್ರಸಾದ ಹಾಗೂ ಆರೋಗ್ಯ ಸೇವೆಯೂ ದೊರೆಯುತ್ತಿದೆ. ಮನೆದೇವರಾದ ಕೊಟ್ಟೂರೇಶ್ವರ ಸ್ವಾಮಿಯ ದರ್ಶನ ಪಡೆದಾಗ ಸಂತೃಪ್ತ ಭಾವ ಮೂಡುತ್ತದೆ’ ಎಂದು 70 ವರ್ಷದ ಕುಸುಮಾ ಹಿರೇಮಠ ಹೇಳಿದರು. 

‘ಗ್ರಾಮದಿಂದ ಕೊಟ್ಟೂರಿಗೆ ಅಂದಾಜು 90 ಕಿ.ಮೀ ದೂರವಿದೆ. ಹರಕೆ ಹೊತ್ತಿರುವ ಕಾರಣಕ್ಕೆ 3 ಜನ ಗೆಳೆಯರೊಂದಿಗೆ ಪಾದಯಾತ್ರೆ ಆರಂಭಿಸಿದ್ದೇವೆ. ರಾತ್ರಿ ಕಂಚಿಕೇರಿ ಮಠದಲ್ಲಿ ಉಳಿದು, ಬೆಳಿಗ್ಗೆ ಪಾದಯಾತ್ರೆ ಮುಂದುವರಿಸುತ್ತೇವೆ’ ಎಂದು ಹೊನ್ನಾಳಿ ತಾಲ್ಲೂಕಿನ ಯರಲಬನ್ನಿಕೋಡು ಗ್ರಾಮದ ಗುರುಪ್ರಸಾದ್ ಹೇಳಿದರು. 

‘ಪಾದಯಾತ್ರೆಯಲ್ಲಿ ಸಾಗುವ ಸಾವಿರಾರು ಭಕ್ತರಿಗೆ ಮಂಡಕ್ಕಿ – ಮಿರ್ಚಿ ಪ್ರಸಾದ ವಿತರಿಸುತ್ತಿದ್ದೇವೆ. ಇದಕ್ಕಾಗಿ 150 ಚೀಲ ಮಂಡಕ್ಕಿ ತರಿಸಿದ್ದೇವೆ. ಮತ್ತಿಹಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ 25 ಚೀಲ ಅಕ್ಕಿ ಬಳಸಿ ಟೊಮೆಟೊ ಬಾತ್‌ ತಯಾರಿಸಿ ಭಕ್ತರಿಗೆ ವಿತರಿಸುತ್ತೇವೆ’ ಎಂದು ಅರಳಿಮರ ಸರ್ಕಲ್ ಗೆಳೆಯರ ಬಳಗದ ಚಂದ್ರಪ್ಪ ವಿವರಿಸಿದರು. 

ಬಳಗದಿಂದ 25 ವರ್ಷದಿಂದ ಪ್ರಸಾದ ಸೇವೆ ನಡೆಸಿಕೊಂಡು ಬರಲಾಗುತ್ತಿದೆ.

ದಾವಣಗೆರೆಯ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸ್ವಾಮೀಜಿಗಳು ಉದ್ಘಾಟಿಸಿದರು
ಪಾದಯಾತ್ರಿಗಳಿಗೆ ಬಾದಾಮಿ ಹಾಲು ಹಾಗೂ ಉಪಾಹಾರ ವಿತರಿಸುತ್ತಿರುವುದು

‘ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ’

‘ಮಧುಮೇಹಿಗಳು ಆರೋಗ್ಯದ ದೃಷ್ಟಿಯಿಂದ ಚಪ್ಪಲಿ ಧರಿಸಿ ಪಾದಯಾತ್ರೆ ಮಾಡಬೇಕು’ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.  ಕೊಟ್ಟೂರು ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ವತಿಯಿಂದ ಚೌಕಿಪೇಟೆಯ ಬಕ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಪಾದಯಾತ್ರಿಗಳಿಗೆ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.  ‘ಭಕ್ತರು ಅಲ್ಲಲ್ಲಿ ನೀಡುವ ಪ್ರಸಾದ ಹಣ್ಣುಗಳನ್ನು ಹಾಳು ಮಾಡಬಾರದು. ಅಗತ್ಯವಿರುವಷ್ಟನ್ನೇ ಸ್ವೀಕರಿಸಬೇಕು. ಪಾದಯಾತ್ರೆ ವೇಳೆ ಆರೋಗ್ಯ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.  ‘ಪಾದಯಾತ್ರಿಗಳಿಗೆ ಔಷಧೋಪಚಾರ ಸೇವೆ ಸಲ್ಲಿಸಲು ಬಹಳಷ್ಟು ವ್ಯಾಪಾರಿಗಳು ಕೈಜೋಡಿಸಿದ್ದಾರೆ‌. ಪಾದಯಾತ್ರಿಗಳು ವೈದ್ಯರು ಆರೋಗ್ಯ ಸಿಬ್ಬಂದಿಯ ಸೇವೆ ಪಡೆಯಲಿ. ಗ್ಲೂಕೋಸ್ ಡಬ್ಬಿಗಳು ನೀರಿನ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ’ ಎಂದು ದಾವಣಗೆರೆ ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಮುಖಂಡ ಬಿ.ಒ.ಮಲ್ಲಿಕಾರ್ಜುನ್ ಮನವಿ ಮಾಡಿದರು. 

ಟ್ರಸ್ಟ್ ಸದಸ್ಯೆ ವಿನುತಾ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾಜಿ ಮೇಯರ್ ಬಿ.ಜಿ.ಅಜಯಕುಮಾರ್ ಮಾತನಾಡಿದರು. ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಅಯ್ಯನಹಳ್ಳಿ ರಂಭಾಪುರ ಶಾಖಾಮಠದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಕೊಟ್ಟೂರು ಹಿರೇಮಠದ ಶಿವಪ್ರಕಾಶ ಸ್ವಾಮೀಜಿ ಕೋಣಂದೂರು ಶಿವಲಿಂಗೇಶ್ವರ ಬೃಹನ್ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕೈಗಾರಿಕೋದ್ಯಮಿ ಅಥಣಿ ವೀರಣ್ಣ ಟ್ರಸ್ಟ್‌ನ ಅಧ್ಯಕ್ಷ ಕಣಕುಪ್ಪಿ ಮುರುಗೇಶಪ್ಪ ಉಪಾಧ್ಯಕ್ಷ ಆರ್‌.ಜಿ.ದತ್ತರಾಜ್ ಕಾರ್ಯದರ್ಶಿ ಟಿ.ಜೆ.ಬಕ್ಕೇಶಪ್ಪ ಸಹ ಕಾರ್ಯದರ್ಶಿ ಬಿ.ಚಿದಾನಂದ ಖಜಾಂಚಿ ಮಲ್ಲಬಾದಿ ಗುರುಬಸವರಾಜ ಹಾಗೂ ಇನ್ನಿತರರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.