ADVERTISEMENT

ಬಸವಾಪಟ್ಟಣ: ಅಡಿಕೆ ಸಸಿ ಬೆಳೆದು ಲಾಭ ಗಳಿಕೆ

ಇತರರಿಗೆ ಮಾದರಿಯಾದ ಕವಳಿ ತಾಂಡಾದ ರೈತ ಮೋತಿನಾಯ್ಕ್

ಎನ್.ವಿ.ರಮೇಶ್
Published 21 ಡಿಸೆಂಬರ್ 2022, 4:21 IST
Last Updated 21 ಡಿಸೆಂಬರ್ 2022, 4:21 IST
ತಾವು ಬೆಳೆಸಿರುವ ಅಡಿಕೆ ಸಸಿಗಳೊಂದಿಗೆ ರೈತ ಮೋತಿನಾಯ್ಕ್
ತಾವು ಬೆಳೆಸಿರುವ ಅಡಿಕೆ ಸಸಿಗಳೊಂದಿಗೆ ರೈತ ಮೋತಿನಾಯ್ಕ್   

ಬಸವಾಪಟ್ಟಣ: ತಮ್ಮ ಎರಡು ಎಕರೆಯಲ್ಲಿ ಅಡಿಕೆ ಬೆಳೆದಿರುವ ಸಮೀಪದ ಕವಳಿ ತಾಂಡಾದ ರೈತ ಮೋತಿನಾಯ್ಕ್‌ ಅವರು ಕಳೆದ ಒಂದು ದಶಕದಿಂದ ಉತ್ಕೃಷ್ಟವಾದ ಅಡಿಕೆ ಸಸಿ ಬೆಳೆಸಿ ಮಾರಾಟ ಮಾಡಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

‘ಮೊದಲು ತಂದೆಯವರ ಅಡಿಕೆ ತೋಟದ ಜವಾಬ್ದಾರಿ ವಹಿಸಿಕೊಂಡಿದ್ದೆ. ಈ ಭಾಗದಲ್ಲಿ ಅಡಿಕೆ ವಾಣಿಜ್ಯ ಬೆಳೆಯಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೇ ಸಸಿಗಳಿಗೆ ಬೇಡಿಕೆ ಹೆಚ್ಚಾಯಿತು. ತೋಟದಲ್ಲಿ ಸಾಕಷ್ಟು ಸ್ಥಳಾವಕಾಶವಿತ್ತು. ಅಡಿಕೆ ಸಸಿಗಳನ್ನು ಬೆಳೆಸಿ, ಮಾರಾಟ ಮಾಡುವ ಕಾರ್ಯ ಆರಂಭಿಸಿದೆ’ ಎಂದು ಅವರು ತಿಳಿಸಿದರು.

‘38 ವರ್ಷಗಳ ಹಿಂದೆ ತಂದೆ ನಾಟಿ ಮಾಡಿದ್ದ ಲಕ್ಷ್ಮಿ ತಳಿಯ ಗಿಡಗಳು ಈಗ ನಮ್ಮ ತೋಟದಲ್ಲಿ ಸಮೃದ್ಧ ಇಳುವರಿ ನೀಡುತ್ತಿದ್ದು, ಅದರ ಬೀಜಗಳನ್ನೇ ಸಸಿ ಮಾಡಿ ಮಾರುತ್ತಿದ್ದೇನೆ. ಇದು ರೋಗರಹಿತ ತಳಿಯಾಗಿದೆ. ಎಕರೆಗೆ 12ರಿಂದ 14 ಕ್ವಿಂಟಲ್‌ ಇಳುವರಿ ನೀಡುತ್ತದೆ. ಸಸಿಗಳಿಗೆ ಕೇವಲ ಕೊಟ್ಟಿಗೆ ಗೊಬ್ಬರವನ್ನು ಮಾತ್ರ ಬಳಸುತ್ತಿದ್ದು, ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆಸುತ್ತಿದ್ದೇನೆ. ಅಂತೆಯೇ ನಾನು ಬೆಳೆಸುತ್ತಿರುವ ಅಡಿಕೆ ಸಸಿಗಳಿಗೆ ಬೇಡಿಕೆ ಹೆಚ್ಚಾಗಿದೆ’ ಎಂದು ಅವರು ವಿಶ್ವಾಸದಿಂದ ಹೇಳಿದರು.

ADVERTISEMENT

‘ವರ್ಷದ ಸಸಿಗೆ ₹ 25, ಎರಡು ವರ್ಷಗಳ ಸಸಿಗೆ ₹ 30ರಂತೆ ಮಾರಾಟ ಮಾಡುತ್ತಿದ್ದು, ವರ್ಷಕ್ಕೆ ಸುಮಾರು 10,000 ಸಸಿಗಳು ವರ್ಷದ ಎಲ್ಲ ಕಾಲದಲ್ಲೂ ಖರ್ಚಾಗುತ್ತಿವೆ. ಸ್ಥಳೀಯ ರೈತರಲ್ಲದೇ, ದಾವಣಗೆರೆ ಜಿಲ್ಲೆಯ ವಿವಿಧ ಸ್ಥಳಗಳಿಂದ ರೈತರು ಬಂದು ಸಸಿಗಳನ್ನು
ಖರೀದಿಸುತ್ತಿದ್ದಾರೆ. ದೂರದ ಕೋಲಾರ, ಹಾವೇರಿ, ಬಳ್ಳಾರಿ, ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಿಗೆ ರೈತರು ನಮ್ಮ ಅಡಿಕೆ ಸಸಿಗಳನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ಅವರು ತಿಳಿಸಿದರು.

ಅವರ ತೋಟದಲ್ಲಿ ತೆಂಗು, ಮೆಣಸು, ಅರಿಶಿನ, ಶುಂಠಿ, ಕಾಫಿ, ಹಲಸು, ಕಿತ್ತಲೆ, ಪೇರಲೆ, ನೇರಳೆ, ದ್ರಾಕ್ಷಿ ಹಣ್ಣಿನ ಗಿಡಗಳನ್ನೂ ನೆಟ್ಟಿದ್ದು, ಉತ್ತಮ ಫಸಲು ದೊರೆಯುತ್ತಿದೆ.

***

ಶಾಲೆಗೆ ಹೋಗದಿದ್ದರೂ ಕೃಷಿ ಜ್ಞಾನ ಹುಬ್ಬೇರಿಸುವಂತದ್ದು

ಮೋತಿನಾಯ್ಕ್‌ ಶಾಲೆ ಕಲಿತವರಲ್ಲ. ಆದರೂ ಕೃಷಿಯಲ್ಲಿ ಅವರಿಗೆ ಇರುವ ಜ್ಞಾನ ಹುಬ್ಬೇರಿಸುವಂಥದ್ದು. ಎಲ್ಲಿಯೇ ಕೃಷಿ ಮೇಳಗಳು ನಡೆದರೂ ಅಲ್ಲಿಗೆ ಹೋಗಿ ಮಾಹಿತಿ ಪಡೆಯುತ್ತಾರೆ. ವಿವಿಧ ಸಸಿಗಳ ಕಸಿ ಮಾಡುವ ವಿಧಾನ ಅವರಿಗೆ ಕರಗತವಾಗಿದೆ. ವಿವಿಧ ಜಾತಿಯ ಹೂವಿನ ಗಿಡಗಳನ್ನು ಕಸಿ ಮಾಡಿ ಬೆಳೆಸಿ ಉಚಿತವಾಗಿ ನೀಡಿದ್ದಾರೆ. ಕೃಷಿ ವಿಜ್ಞಾನಿಗಳು, ಕೃಷಿ ಪದವಿಯ ವಿದ್ಯಾರ್ಥಿಗಳು ಅವರ ತೋಟಕ್ಕೆ ಭೇಟಿ ನೀಡಿ ಸೂಕ್ತ ಮಾಹಿತಿ ಪಡೆಯುತ್ತಿದ್ದಾರೆ. ಕೃಷಿ ಇಲಾಖೆ ಅವರಿಗೆ ಜಿಲ್ಲಾ ಮಟ್ಟದ ‘ಅತ್ಯುತ್ತಮ ರೈತ’ ಪ್ರಶಸ್ತಿ ನೀಡಿ ಗೌರವಿಸಿದೆ ಎನ್ನುತ್ತಾರೆ ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿ ಡಾ.ನಾಗರಾಜ ಕುಸಗೂರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.