ADVERTISEMENT

ಜಗಳೂರು | ಸೌಲಭ್ಯ ಕೊರತೆ: ಕಮರಿದ ಕ್ರೀಡಾಪಟುಗಳ ಭವಿಷ್ಯ

ಜಗಳೂರು: ಹೆಸರಿಗಷ್ಟೇ ತಾಲ್ಲೂಕು ಕ್ರೀಡಾಂಗಣ

ಡಿ.ಶ್ರೀನಿವಾಸ
Published 3 ಜೂನ್ 2022, 4:21 IST
Last Updated 3 ಜೂನ್ 2022, 4:21 IST
ಜಗಳೂರಿನ ತಾಲ್ಲೂಕು ಕ್ರೀಡಾಂಗಣದ ನೋಟ
ಜಗಳೂರಿನ ತಾಲ್ಲೂಕು ಕ್ರೀಡಾಂಗಣದ ನೋಟ   

ಜಗಳೂರು: ಶಿಕ್ಷಣ, ಕ್ರೀಡೆಯ ಅಭಿವೃದ್ಧಿಗಾಗಿ ಸರ್ಕಾರ ರಾಜ್ಯದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆಯಾದರೂ ಮಕ್ಕಳ, ಯುವಕರ ಕ್ರೀಡಾ ಭವಿಷ್ಯಕ್ಕೆ ಪೂರಕ ವಾತಾವರಣದ ಕೊರತೆಯಿಂದಾಗಿ ತಾಲ್ಲೂಕಿನಲ್ಲಿ ಕ್ರೀಡಾ ವಲಯ ಸಂಪೂರ್ಣ ಸೊರಗಿಹೋಗಿದೆ.

13 ವರ್ಷಗಳ ಹಿಂದೆ ಪಟ್ಟಣದ ಹೊರವಲಯದಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಗುಡ್ಡವನ್ನು ಕಡಿದು ವಿಶಾಲವಾದ ತಾಲ್ಲೂಕು ಕ್ರೀಡಾಂಗಣ ನಿರ್ಮಿಸಲಾಗಿದೆ. ಹೆಸರಿಗಷ್ಟೇ ಇದು ಕ್ರೀಡಾಂಗಣ. ಯಾವುದೇ ಕನಿಷ್ಠ ಸೌಕರ್ಯಗಳಿಲ್ಲದೇ ಸದಾ ಬಿಕೋ ಎನ್ನುತ್ತಿದೆ. ಕ್ರೀಡಾಂಗಣ ನಿರ್ಮಾಣವಾಗಿ ದಶಕ ಉರುಳಿದರೂ ಕ್ರೀಡಾ ಚಟುವಟಿಕೆಗೆ ಬಳಕೆಯಾಗದೆ ಕುಡುಕರು, ಜೂಜುಕೋರರು ಹಾಗೂ ಕ್ರಿಮಿನಲ್‌ಗಳ ಅಡ್ಡೆಯಾಗಿದೆ ಎನ್ನುವುದು ಪಟ್ಟಣದ ನಾಗರಿಕರ ಆರೋಪವಾಗಿದೆ.

ತಾಲ್ಲೂಕಿನಲ್ಲಿ ಕಬಡ್ಡಿ, ಅಥ್ಲೆಟಿಕ್ಸ್, ಗುಡ್ಡಗಾಡು ಓಟ ಕ್ಷೇತ್ರದಲ್ಲಿ ಸಾಕಷ್ಟು ಗ್ರಾಮಿಣ ಪ್ರತಿಭೆಗಳಿದ್ದಾರೆ. ಸೂಕ್ತ ಪ್ರೋತ್ಸಾಹ, ನೆರವಿನ ಕೊರತೆಯಿಂದಾಗಿ ಚಿಗುರಿನ ಹಂತದಲ್ಲೇ ಪ್ರತಿಭೆಗಳು ಮುರುಟಿಹೋಗುತ್ತಿವೆ. ಸುಮಾರು 200 ಜನರ ಪ್ರೇಕ್ಷಕರ ಗ್ಯಾಲರಿ ಮಾತ್ರ ನಿರ್ಮಾಣವಾಗಿದೆ. ಉಳಿದಂತೆ ಕಬಡ್ಡಿ, ಈಜುಕೊಳ, ವಾಲಿಬಾಲ್, ಫುಟ್‌ಬಾಲ್‌, ಕೊಕ್ಕೊ, ಬ್ಯಾಸ್ಕೆಟ್ ಬಾಲ್, ಡಿಸ್ಕಸ್ ಥ್ರೋ ಸೇರಿ ಯಾವುದೇ ಅಂಕಣಗಳೂ ಇಲ್ಲಿ ಇಲ್ಲ.

ADVERTISEMENT

ಬಹುತೇಕರಿಗೆ ತಾಲ್ಲೂಕು ಕ್ರೀಡಾಂಗಣ ಇದೆ ಎನ್ನುವುದೇ ತಿಳಿದಿಲ್ಲ. ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಕಾರಣ ಹೆಚ್ಚಿನ ಜನ ಆ ಕಡೆ ಸುಳಿಯುವುದಿಲ್ಲ. ಒಂದಿಷ್ಟು ಜನ ವಾಯುವಿಹಾರಕ್ಕೆ ಬರುತ್ತಾರೆ. ಕ್ರೀಡಾಂಗಣದ ಪಕ್ಕದಲ್ಲಿ ಕಾಲೇಜಿನ ಹಾಸ್ಟೆಲ್ ಇದೆ. ಸಂಜೆ ಸಮಯದಲ್ಲಿ ಹಾಗೂ ಭಾನುವಾರ ಮಾತ್ರ ವಿದ್ಯಾರ್ಥಿಗಳು ಕ್ರಿಕೆಟ್ ಆಟವಾಡುವುದನ್ನು ಕಾಣಬಹುದು. ಇನ್ನುಳಿದ ಸಮಯದಲ್ಲಿ ನಿರ್ಜನವಾಗಿರುತ್ತದೆ. ಕ್ರೀಡಾಂಗಣ ಉಸ್ತುವಾರಿಗೆ ಒಬ್ಬರೂ ಇಲ್ಲ. ಹೀಗಾಗಿ ಇಲ್ಲಿ ಹೇಳುವವರು, ಕೇಳುವವರೇ ಇಲ್ಲದಂತಾಗಿದೆ.

‘ಕ್ರೀಡಾಂಗಣದಲ್ಲಿ ಯಾವುದೇ ಕ್ರೀಡಾ ಚಟುವಟಿಕೆ ನಡೆಯದೇ ಇದ್ದರೂ ಪ್ರತಿ ವರ್ಷ ವಿವಿಧ ಯೋಜನೆಗಳಲ್ಲಿ ಲಕ್ಷಾಂತರ ರೂಪಾಯಿ ಅನುದಾನ ಮಾತ್ರ ನಿರಂತರವಾಗಿ ಬಿಡುಗಡೆಯಾಗುತ್ತಲೇ ಇರುತ್ತದೆ. ಯುವಜನ ಮತ್ತು ಕ್ರೀಡಾ ಇಲಾಖೆ ಇದ್ದೂ ಇಲ್ಲದಂತಿದೆ. ಅನುದಾನ ಬಿಡುಗಡೆಯಾದಾಗ ಕೆಲವು ವ್ಯಕ್ತಿಗಳು ಕಳಪೆ ಕಾಮಗಾರಿ ಮಾಡಿ ಹಣ ಬಿಡುಗಡೆ ಮಾಡಿಕೊಂಡು ಮಾಯವಾಗುತ್ತಾರೆ. ಈಚೆಗೆ ಇಲ್ಲಿ ಕಟ್ಟಡವೊಂದನ್ನು ಅರೆಬರೆ ನಿರ್ಮಿಸಲಾಗಿದೆ. ಬಾಗಿಲು ಸಹ ಅಳವಡಿಸಿಲ್ಲ. ಕಟ್ಟಡ ಸಂಪೂರ್ಣ ಕಳಪೆಯಾಗಿದೆ. ಯಾವ ಅನುದಾನದಲ್ಲಿ, ಎಷ್ಟು ವೆಚ್ಚದಲ್ಲಿ ಯಾವ ಉದ್ದೇಶಕ್ಕೆ ಈ ಕಟ್ಟಡ ನಿರ್ಮಿಸಲಾಗಿದೆ ಎಂಬ ಬಗ್ಗೆ ಯಾವುದೇ ನಾಮಫಲಕವನ್ನೂ ಅಳವಡಿಸಿಲ್ಲ’ ಎಂದು ದೇಹದಾರ್ಢ್ಯ ಕ್ರೀಡಾಪಟುಗಳಾದ ಬಾಬು, ತಿರುಮಲೇಶ್ ದೂರುತ್ತಾರೆ.

‘ಪಟ್ಟಣ ಪಂಚಾಯಿತಿಯಿಂದ ಪ್ರತಿ ವರ್ಷ ಇಲ್ಲಿ ಕುಡಿಯುವ ನೀರಿನ ತೊಟ್ಟಿ ಸೇರಿ ಲಕ್ಷಾಂತರ ವೆಚ್ಚದ ಕಾಮಗಾರಿಗಳು ನಡೆಯುತ್ತಿವೆ. ಆದರೂ ಕುಡಿಯಲು ಹನಿ ನೀರೂ ಸಿಗುವುದಿಲ್ಲ. ಕ್ರೀಡಾಂಗಣದ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ಅವ್ಯವಸ್ಥೆಯ ತಾಣವಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಕ್ರೀಡಾಂಗಣದಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು, ಸುಟ್ಟ ಸಿಗರೇಟ್‌ಗಳ ರಾಶಿ ಬಿದ್ದಿವೆ. ಅನೈತಿಕ ಚಟುವಟಿಕೆ ಹಾಗೂ ಕುಡುಕರ ಅಡ್ಡೆಯಾಗಿ ಪರಿಣಮಿಸಿವೆ. ಟ್ರ್ಯಾಕ್ ನಿರ್ವಹಣೆ ಇಲ್ಲದೆ ಇಲ್ಲಿ ಓಡಲು ಸಾಧ್ಯವಿಲ್ಲ. ತಾಲ್ಲೂಕು ಕ್ರೀಡಾಂಗಣ ಎಂದು ಕರೆಯಲಾಗುವ ಉಸ್ತುವಾರಿಗಾಗಿ ಇಲ್ಲಿ ಕನಿಷ್ಠ ಒಬ್ಬ ವ್ಯಕ್ತಿಯನ್ನೂ ನೇಮಿಸಿಲ್ಲ. ಶೌಚಾಲಯವಿಲ್ಲ. ವಿಶ್ರಾಂತಿ ಕೊಠಡಿ ಮೊದಲೇ ಇಲ್ಲ. ಎಲ್ಲಾ ಕೊಠಡಿಗಳು ಸದಾ ಬಾಗಿಲು ಮುಚ್ಚಿದ ಸ್ಥಿತಿಯಲ್ಲಿವೆ’ ಎಂದು ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟಗಾರ ಮೈಲೇಶ್ ಗೌರೀಪುರ ನೊಂದು
ನುಡಿಯುತ್ತಾರೆ.

ಕ್ರೀಡಾಂಗಣದ ಅವ್ಯವಸ್ಥೆಯ ಬಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತಾ ನೇವಲಗಿ ಅವರನ್ನು ವಿಚಾರಿಸಿದಾಗ, ‘ನಾನು ಜಿಲ್ಲೆಗೆ ಅಧಿಕಾರಿಯಾಗಿ ಈಚೆಗಷ್ಟೇ ಬಂದಿದ್ದೇನೆ. ನನಗೆ ಹೆಚ್ಚಿನ ಮಾಹಿತಿ ಇಲ್ಲ’ ಎಂದು ಉತ್ತರಿಸಿದರು.

ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕಿನಲ್ಲಿ ಅಧಿಕಾರಿಗಳು ಹಾಗೂ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕ್ರೀಡಾಕ್ಷೇತ್ರ ಸಂಪೂರ್ಣ ನೆಲಕಚ್ಚಿದ್ದು, ಯುವ ಪ್ರತಿಭೆಗಳ ಸಾಧನೆಗೆ ಅಡ್ಡಿಯಾಗಿದೆ.

ಹೆಲಿಪ್ಯಾಡ್‌ಗೆ ಬಳಕೆ
ಕ್ರೀಡಾಂಗಣ ಹೆಸರಿನಲ್ಲಿ ಗುಡ್ಡವನ್ನು ನೆಲಸಮ ಮಾಡಿ ಹಸನು ಮಾಡಿ ದಶಕ ಕಳೆದಿದ್ದರೂ ಕ್ರೀಡಾ ಚಟುವಟಿಕೆ ಇಲ್ಲಿ ನಡೆಯುತ್ತಿಲ್ಲ. ಪಟ್ಟಣದಲ್ಲಿ ಆಗಾಗ ನಡೆಯುವ ರಾಜಕೀಯ ಸಮಾರಂಭಗಳಿಗೆ ಬರುವ ಗಣ್ಯರ ಹೆಲಿಕಾಪ್ಟರ್ ಇಳಿಯಲು ಈ ಮೈದಾನ ಬಳಕೆಯಾಗುತ್ತಿದೆ. ಹಾಗೆ ನೋಡಿದರೆ ಇದನ್ನು ಕ್ರೀಡಾಂಗಣ ಎಂದು ಕರೆಯುವುದಕ್ಕಿಂತ ಹೆಲಿಕಾಪ್ಟರ್ ನಿಲ್ದಾಣ ಎಂದು ಕರೆಯುವುದೇ ಸೂಕ್ತ ಎಂದು ನಾಗರಿಕರು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.