ADVERTISEMENT

ಚನ್ನಗಿರಿ: ನಿರ್ವಹಣೆ ಇಲ್ಲದೆ ಸೊರಗಿದ ಘನ ತ್ಯಾಜ್ಯ ವಿಲೇವಾರಿ ಘಟಕ

ಎಚ್.ವಿ. ನಟರಾಜ್‌
Published 13 ಏಪ್ರಿಲ್ 2025, 7:06 IST
Last Updated 13 ಏಪ್ರಿಲ್ 2025, 7:06 IST
ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಗ್ರಾಮದ ಘನ ತ್ಯಾಜ್ಯ ವಿಲೇವಾರಿ ಘಟಕದ ಎದುರು ಕಸ ಹಾಕಿರುವುದು
ಚನ್ನಗಿರಿ ತಾಲ್ಲೂಕಿನ ತಾವರೆಕೆರೆ ಗ್ರಾಮದ ಘನ ತ್ಯಾಜ್ಯ ವಿಲೇವಾರಿ ಘಟಕದ ಎದುರು ಕಸ ಹಾಕಿರುವುದು   

ಚನ್ನಗಿರಿ: ತಾಲ್ಲೂಕಿನ ತಾವರಕೆರೆಯ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆ ಇಲ್ಲದೇ ಸೊರಗಿದೆ.

ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿರುವ ಈ ಘಟಕದಲ್ಲಿ ಪ್ರತಿ ದಿನ ಸಂಗ್ರಹಿಸುವ ಕಸವನ್ನು ತಂದು ರಾಶಿ ಹಾಕಲಾಗುತ್ತಿದೆ. ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಈ ರಾಶಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಹೊರಸೂಸುವ ಹೊಗೆಯಿಂದಾಗಿ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಈಚೆಗೆ ಘಟಕದ ಬಳಿ ಹಾಕಿದ ಬೆಂಕಿಯು ಸಮೀಪದ ತೋಟಗಳಿಗೂ ವ್ಯಾಪಿಸಿ ಅಪಾರ ಪ್ರಮಾಣದ ಅಡಿಕೆ, ಬಾಳೆ ಮತ್ತು ಇತರೆ ಬೆಳೆಗಳಿಗೆ ಹಾನಿಯಾಗಿತ್ತು. ಹೊಗೆಯಿಂದಾಗಿ ಪಕ್ಕದ ವಿದ್ಯುತ್ ಪೂರೈಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವುದೇ ಕಷ್ಟವಾಗಿದೆ ಎಂದು ಅಲ್ಲಿನ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. 

ADVERTISEMENT

‘ಘಟಕದ ಹೊರಗಡೆ ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಹಾಕಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಮರ್ಪಕ ನಿರ್ವಹಣೆ ಕೈಗೊಳ್ಳದೇ ಇರುವುದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮದ ಶಿವಕುಮಾರ್ ಒತ್ತಾಯಿಸಿದರು.

‘ಕಸದ ರಾಶಿಗೆ ಬೆಂಕಿ ಹಾಕುವುದರಿಂದ ಸೃಷ್ಟಿಯಾಗುವ ಹೊಗೆಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಸರಿಯಾಗಿ ಕಾರ್ಯನಿರ್ವಹಿಸಲೂ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ’ ಎಂದು ವಿದ್ಯುತ್ ವಿತರಣಾ ಕೇಂದ್ರದ ಸಿಬ್ಬಂದಿ ಮಂಜುನಾಥ್ ಆರೋಪಿಸಿದರು.

‘ಕಸದ ವಿಂಗಡಣೆ ಮತ್ತು ನಿರ್ವಹಣೆ ಮಾಡಲಾಗುತ್ತಿಲ್ಲ. ತ್ಯಾಜ್ಯ ಸುಡುವುದನ್ನು ಬಿಟ್ಟು, ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವ ವಿಧಾನ ಅನುಸರಿಸಬೇಕು. ಗ್ರಾಮಸ್ಥರಿಗೆ ಕಸದ ಸುರಕ್ಷಿತ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ನಡೆಸಬೇಕು’ ಎಂದು ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಶಿವಮೂರ್ತಿ ಒತ್ತಾಯಿಸಿದರು.

‘ಕಸ ಸಂಗ್ರಹಣೆ ವಾಹನಕ್ಕೆ ಗ್ರಾಮಸ್ಥರು ಕಸ ನೀಡುವ ಸಂದರ್ಭದಲ್ಲಿ ಬೆಂಕಿಯುಕ್ತ ಬೂದಿ ಹಾಕುವುದರಿಂದ ತ್ಯಾಜ್ಯ ವಸ್ತುಗಳ ರಾಶಿಗೆ ಬೆಂಕಿ ಹರಡಿ ತೋಟಗಳಿಗೆ ಹಾನಿಯಾಗಿದೆ. ಇದಕ್ಕೆ ಪರಿಹಾರ ನೀಡಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ತಿಳಿಸಿದರು.

ಕಸದ ರಾಶಿಗೆ ಬೆಂಕಿ ಹಾಕಿರುವುದು
ಕರ್ತವ್ಯ ಲೋಪವೆಸಗಿದ ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಕಸದ ರಾಶಿಗೆ ಬೆಂಕಿ ಹಾಕದಂತೆ ಜಾಗ್ರತೆ ವಹಿಸಲಾಗುವುದು
ಮಂಜುಳಾ ಗ್ರಾ.ಪಂ. ಅಧ್ಯಕ್ಷೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.