ADVERTISEMENT

ವಿವೇಕವಿಲ್ಲದಿರುವುದೇ ಪ್ರಾಣಹಾನಿಗೆ ಕಾರಣ: ಣೇಹಳ್ಳಿ ಸ್ವಾಮೀಜಿ

‘ಕಲ್ಯಾಣದೆಡೆಗೆ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 16:54 IST
Last Updated 25 ಡಿಸೆಂಬರ್ 2019, 16:54 IST
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 100ನೇ ಕೃತಿ ‘ಕಲ್ಯಾಣದೆಡೆಗೆ’ ಬುಧವಾರ ದಾವಣಗೆರೆಯಲ್ಲಿ ಲೋಕಾರ್ಪಣೆಗೊಂಡಿತು
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 100ನೇ ಕೃತಿ ‘ಕಲ್ಯಾಣದೆಡೆಗೆ’ ಬುಧವಾರ ದಾವಣಗೆರೆಯಲ್ಲಿ ಲೋಕಾರ್ಪಣೆಗೊಂಡಿತು   

ದಾವಣಗೆರೆ: ಒಂದು ವಾರದಿಂದ ಭಾರತದಲ್ಲಿ, ಕರ್ನಾಟಕದಲ್ಲಿ ಆಗುತ್ತಿರುವ ಪ್ರತಿಭಟನೆ, ಗಲಭೆ, ಸಾವುಗಳನ್ನು ನೋಡಿದಾಗ ವಿವೇಚನೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂಬುದು ಗೊತ್ತಾಗುತ್ತಿದೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಹಮತ ವೇದಿಕೆ ಬುಧವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಸಾಣೇಹಳ್ಳಿ ಶ್ರೀಗಳ 100ನೇ ಕೃತಿ ‘ಕಲ್ಯಾಣದೆಡೆಗೆ’ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ತಾಳ್ಮೆ ಮತ್ತು ವಿವೇಕ ಇಲ್ಲದಿರುವುದರಿಂದಲೇ ಜಗಳಗಳು, ಗುಂಡು ಹಾರಿಸುವುದು ಎಲ್ಲ ನಡೆದಿವೆ ಎಂದು ವಿಶ್ಲೇಷಿಸಿದರು.

ADVERTISEMENT

ಯಾವುದೇ ಸಮಸ್ಯೆಗಳು ಬಂದಾಗ ನಾವು 12ನೇ ಶತಮಾದ ಕಡೆಗೆ ತಿರುಗಿ ನೋಡುತ್ತೇವೆ. ಆಗ ಶಕ್ತಿ, ವೈತನ್ಯ ಬರುತ್ತದೆ. ಹಾಗಾಗಿ 12ನೇ ಶತಮಾನದ ಇತಿಹಾಸವನ್ನು ಮಕ್ಕಳಿಗೆ ಕಲಿಸಿಕೊಡಬೇಕು. ಸುಂದರ ಸಮಾಜ ಕಟ್ಟಲು ಶರಣರು ಮಾಡಿದ ತ್ಯಾಗವನ್ನು ತಿಳಿಸಿಕೊಡಬೇಕು ಎಂದರು.

‘ಅಂತರಂಗದಲ್ಲಿ ಬೆಳಕು ಕಂಡುಕೊಂಡವನು ಬಹಿರಂಗದಲ್ಲಿ ಬೆಳಕು ಬೀರುತ್ತಾನೆ. ಅಂತರಂಗದಲ್ಲಿ ಅಂಧಕಾರ ಇಟ್ಟುಕೊಂಡವನು ಬಹಿರಂಗದಲ್ಲಿ ಕತ್ತಲ್ಲನ್ನು ವಿಸ್ತರಿಸುತ್ತಾನೆ. ಹಾಗಾಗಿ ನಾವು ಅಂತರಂಗದಲ್ಲಿ ಬೆಳಕು ಕಾಣಬೇಕು. ನಾವು ನಮ್ಮ ಮಕ್ಕಳನ್ನು ಬೆಳಕಿನೆಡೆಗೆ ಕಳುಹಿಸಬೇಕಿತ್ತು. ಆದರೆ ಕತ್ತಲೆಡೆಗೆ ತಳ್ಳುತ್ತಿದ್ದೇವೆ’ ಎಂದು ವಿಷಾದಿಸಿದರು.

ಚಿಂತಕ ಬೆಂಗಳೂರಿನ ಡಾ. ಬಸವರಾಜ ಕೃತಿ ಲೋಕಾರ್ಪಣೆ ಮಾಡಿ, ‘ಶ್ರೇಷ್ಠ, ಸನಾತನ ಸಂಸ್ಕೃತಿ ಎಂದು ಕೊಂಡಾಡುವ ಸಂಸ್ಕೃತಿಯಲ್ಲಿ ದ್ರೋಹ, ಮೋಸ, ವಂಚನೆ ಇದೆ. ಭಾರತೀಯ ಸಂಸ್ಕೃತಿಯಲ್ಲಿ ಎರಡು ಧಾರೆಗಳಿವೆ. ಒಂದು ತಮಗೆ ಬೇಕಾದಾಗ ಬಳಸಿಕೊಂಡು ಹೊರದಬ್ಬುವ, ಊರಿನ ಹೊರಗೆ ಕೂರಿಸುವ ಸಂಸ್ಕೃತಿಯಾದರೆ, ಇನ್ನೊಂದು ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿ. ಬಸವಣ್ಣನ ಸಂಸ್ಕೃತಿ ಒಳಗೊಳ್ಳುವಂಥದ್ದು’ ಎಂದು ತಿಳಿಸಿದರು.

ಪ್ರಶ್ನೆ ಮಾಡುವುದು, ಪ್ರತಿಭಟನೆ ಮಾಡುವುದು, ನಿರಾಕರಣೆ ಮಾಡುವುದು ಇವಿಷ್ಟನ್ನು ಈಗಲೂ ಹಲವರು ಮಾಡುತ್ತಿದ್ದಾರೆ. ಬಸವಾದಿ ಶರಣರು ಈ ಮೂರರ ಜತೆಗೆ ಪರ್ಯಾಯವನ್ನು ಕಟ್ಟಿಕೊಟ್ಟರು. ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯಕಾಲ ಎಂದು ಮೂರನ್ನು ಗುರುತಿಸಲಾಗಿದೆ. ಇದರ ಜತೆಗೆ ಸದಾಕಾಲ ಅಥವಾ ಸರ್ವಕಾಲ ಎಂಬ ನಾಲ್ಕನೇಯದ್ದನ್ನು ಸೇರಿಸಿಕೊಳ್ಳಬೇಕು. ಯಾಕೆಂದರೆ ಸಮಸ್ಯೆಗಳಿಗೆ ಪರ್ಯಾಯವನ್ನು ನೀಡಿದ ಶರಣರು ಸರ್ವಕಾಲಕ್ಕೆ ಸಲ್ಲುವವರು ಎಂದು ವಿಶ್ಲೇಷಿಸಿದರು.

ಮತ್ತೆ ಕಲ್ಯಾಣದ ಮೂಲಕ ರಾಜ್ಯದಾದ್ಯಂತ ಬೆಳಕು ಮೂಡಿಸುವ ಅಭಿಯಾನವನ್ನು ಸಾಣೇಹಳ್ಳಿ ಶ್ರೀಗಳ ನೇತೃತ್ವದಲ್ಲಿ ನಡೆಯಿತು. ಇಂತ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು ಎಂದು ಹಾರೈಸಿದರು.

ಸಹಮತ ವೇದಿಕೆಯ ಗೌರವಾಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ, ‘ಕಾರ್ಲ್‌ಮಾರ್ಕ್ಸ್‌ ಜನಿಸಿ 200 ವರ್ಷಗಳಷ್ಟೇ ಆಗಿದ್ದು. ಬಸವಣ್ಣ 900 ವರ್ಷಗಳ ಹಿಂದೆಯೇ ಸಮಾಜವಾದ, ಸಮತಾವಾದವನ್ನು ಪ್ರತಿಪಾದಿಸಿದ್ದರು. ಇಂದು ಕೆಲವೇ ಸ್ವಾಮೀಜಿಗಳು ಖಡಾಖಂಡಿತವಾಗಿ ಇದ್ದಾರೆ. ಮತ್ತೆಲ್ಲರೂ ಸರ್ಕಾರದ ಜೀತದ ಸ್ವಾಮೀಜಿಗಳಾಗಿದ್ದಾರೆ’ ಎಂದು ಟೀಕಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಶರಣಪ್ಪ ಎಸ್‌. ಹಲಸೆ, ಸಹಮತ ವೇದಿಕೆ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ್‌ ಕುರ್ಕಿ, ಕಾರ್ಯಾಧ್ಯಕ್ಷ ಮುದ್ದೇಗೌಡ ಗಿರೀಶ್‌ ಉಪಸ್ಥಿತರಿದ್ದರು. ಶಿವಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಸರ್ವಸಂಗ ‍ಪರಿತ್ಯಾಗಿಗಳೇ ?

ಸರ್ವಸಂಗ ಪರಿತ್ಯಾಗಿಗಳು ಎಂದು ಸ್ವಾಮೀಜಿಗಳನ್ನು ಕರೆಯಲಾಗುತ್ತದೆ. ಆದರೆ ಸ್ವಾಮೀಜಿಯ ಪಟ್ಟಾಭಿಷೇಕಕ್ಕೆ ಇತರ ಮಠಗಳ ಸ್ವಾಮೀಜಿಗಳು ಮದುವೆ ಮನೆಯಲ್ಲಿ ಇರುವ ಹಾಗೆ ಚಿನ್ನದ ಉಂಗುರ ಸಹಿತ ಉಡುಗೊರೆ ಕೊಡಲು ನೂಕುನುಗ್ಗಲು ಮಾಡುತ್ತಿರುತ್ತಾರೆ. ಇವರನ್ನು ಸರ್ವಸಂಗ ಪರಿತ್ಯಾಗಿಗಳೆಂದು ಕರೆಯಬೇಕೇ ಎಂದು ಡಾ. ಬಸವರಾಜ ಸಾದರ ಪ್ರಶ್ನಿಸಿದರು.

ಗಣರಾಜ್ಯೊತ್ಸವದಲ್ಲಿ ‘ಮತ್ತೆ ಕಲ್ಯಾಣ’ದ ಟ್ಯಾಬ್ಲೊ

ಮುಂದಿನ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ‘ಮತ್ತೆ ಕಲ್ಯಾಣ’ ಅಭಿಯಾನದಲ್ಲಿ ಇದ್ದ ಟ್ಯಾಬ್ಲೊದ ವಿಸ್ತೃತ ರೂಪದ ಟ್ಯಾಬ್ಲೊ ಭಾಗವಹಿಸಲಿದೆ. ನಮ್ಮ 26 ಕಲಾವಿದರೂ ಅದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಏ.20ರಿಂದ ವ್ಯಕ್ತಿತ್ವ ವಿಕಸನ ಶಿಬಿರ

‘ಮತ್ತೆ ಕಲ್ಯಾಣ’ದ ಮುಂದುವರಿದ ಭಾಗವಾಗಿ ಏ.20ರಿಂದ ಮೇ 10ರವರೆಗೆ ಸಾಣೇಹಳ್ಳಿಯಲ್ಲಿ ಯುವಜನರಿಗೆ ವ್ಯಕ್ತಿತ್ವ ವಿಕಸನ ಶಿಬಿರ ಹಮ್ಮಿಕೊಳ್ಳಲಾಗಿದೆ. ವಚನಗಳ ಹಿನ್ನೆಲೆಯಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಉಚಿತವಾಗಿ ನಡೆಯಲಿರುವ ಈ ಶಿಬಿರದಲ್ಲಿ ಪಾಲ್ಗೊಳ್ಳುವವರು 20 ದಿನಗಳ ಕಾಲ ಸಾಣೇಹಳ್ಳಿಯಲ್ಲಿಯೇ ಉಳಿದುಕೊಳ್ಳುವುದು ಕಡ್ಡಾಯ ಎಂದು ಸಾಣೇಹಳ್ಳಿ ಶ್ರೀ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.