ADVERTISEMENT

ವೈಭವದ ಲಕ್ಷ್ಮಿರಂಗನಾಥಸ್ವಾಮಿ ಬ್ರಹ್ಮರಥೋತ್ಸವ: ಹೆಳವನಕಟ್ಟೆಗೆ ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 14:40 IST
Last Updated 23 ಏಪ್ರಿಲ್ 2024, 14:40 IST
ಮಲೇಬೆನ್ನೂರು ಸಮೀಪದಹರಿಹರಾತ್ಮಕ ಹೆಳವನಕಟ್ಟೆ ಲಕ್ಷ್ಮಿರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ  ಮಂಗಳವಾರ ವೈಭವದಿಂದ ಜರುಗಿತು
ಮಲೇಬೆನ್ನೂರು ಸಮೀಪದಹರಿಹರಾತ್ಮಕ ಹೆಳವನಕಟ್ಟೆ ಲಕ್ಷ್ಮಿರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ  ಮಂಗಳವಾರ ವೈಭವದಿಂದ ಜರುಗಿತು   

ಮಲೇಬೆನ್ನೂರು: ಸಮೀಪದ ಹರಿಹರಾತ್ಮಕ ಹೆಳವನಕಟ್ಟೆ ಲಕ್ಷ್ಮಿರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ವೈಭವದಿಂದ ನೆರವೇರಿತು.

ಗಣೇಶಪೂಜೆ, ಪುಣ್ಯಾಹವಾಚನ, ರಥಶಾಂತಿ, ವಿಶೇಷ ಶ್ರೀಚಕ್ರ ಪೂಜೆ, ಹೋಮ ಹವನ ದೇವಾಲಯದ ಯಾಗಶಾಲೆಯಲ್ಲಿ ನಡೆದವು. ದೇವಾಲಯದ ಆಡಳಿತಾಧಿಕಾರಿ ಆರ್.ರವಿ ರಥಪೂಜೆ ಮಾಡಿದರು. ಉತ್ಸವಮೂರ್ತಿ ರಥಾರೋಹಣವಾದ ನಂತರ ಮಹಾಮಂಗಳಾರತಿ ಮಾಡಿದರು. ರಥದ ಗಾಲಿಗೆ ಬಲಿ ಹಾಕಿ ಪೂಜೆ ಸಲ್ಲಿಸಿದರು.

ಭಕ್ತ ಸಮೂಹ ರಥಕ್ಕೆ ಬಾಳೆಹಣ್ಣು, ತೆಂಗಿನಕಾಯಿ ಅರ್ಪಿಸಿ, ‘ಹರಹರ ಮಹಾದೇವ’, ‘ಲಕ್ಷ್ಮಿರಮಣ, ರಮಾರಮಣ, ಇಂದಿರಾ ರಮಣ ಗೋವಿಂದ’ ಉದ್ಘೋಷದೊಂದಿಗೆ ತೇರು ಎಳೆದರು. ಮಂಗಳವಾದ್ಯ, ಡೊಳ್ಳು, ತಮಟೆ ಹಾಗೂ ಜಾಂಚ್‌ ಮೇಳ, ಆಗಮಿಕರು, ಅರ್ಚಕ ವೃಂದ, ವಿಪ್ರ ಸಮೂಹದ ವೇದಘೋಷ ಉತ್ಸವಕ್ಕೆ ಮೆರಗು ನೀಡಿತ್ತು.

ADVERTISEMENT

ಹೂ, ಧ್ವಜ ಪತಾಕೆಗಳಿಂದ ರಥವನ್ನು ಹಾಗೂ ಮಿನುಗುವ ವಿದ್ಯುತ್‌ದೀಪಗಳಿಂದ ದೇವಾಲಯವನ್ನು ಹಾಗೂ ಮೂಲ ದೇವತೆಗೆ ಕಮಲದ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ಕಲ್ಯಾಣೋತ್ಸವ: ಶ್ರೀದೇವಿ–ಭೂದೇವಿಯೊಂದಿಗೆ ರಂಗನಾಥಸ್ವಾಮಿ ಕಲ್ಯಾಣೋತ್ಸವ ಸಾಂಪ್ರದಾಯಿಕ ರೀತಿ ರಿವಾಜಿನೊಂದಿಗೆ ಜರುಗಿತು. ಅರ್ಚಕರು, ಉಪಾಧಿವಂತರು, ಆಗಮಿಕರು, ಮುಜರಾಯಿ ಶ್ಯಾನುಭೋಗರು, ಸುತ್ತಮುತ್ತಲ ಗ್ರಾಮಗಳ ಭಕ್ತರು ಉತ್ಸವಕ್ಕೆ ಕಳೆ ತಂದಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆ ಭಕ್ತರು ಆಗಮಿಸಿದ್ದರು. ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು, ಪೊಲೀಸರು ಭದ್ರತೆ ಒದಗಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.