ADVERTISEMENT

ಜಗಳೂರು: ನ್ಯಾಯಾಲಯದ ಕಲಾಪದಿಂದ ಹೊರಗುಳಿದು ವಕೀಲರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 6:21 IST
Last Updated 9 ಅಕ್ಟೋಬರ್ 2025, 6:21 IST
ಜಗಳೂರಿನಲ್ಲಿ ಬುಧವಾರ  ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ  ಘಟನೆಯನ್ನು ಖಂಡಿಸಿ ವಕೀಲರು ಪ್ರತಿಭಟನೆ ನಡೆಸಿದರು.
ಜಗಳೂರಿನಲ್ಲಿ ಬುಧವಾರ  ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ  ಘಟನೆಯನ್ನು ಖಂಡಿಸಿ ವಕೀಲರು ಪ್ರತಿಭಟನೆ ನಡೆಸಿದರು.   

ಜಗಳೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಅವರು ಶೂ ಎಸೆಯಲು ಯತ್ನಿಸಿರುವ ಘಟನೆಯನ್ನು ಖಂಡಿಸಿ ವಕೀಲರು ಬುಧವಾರ ಇಲ್ಲಿನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ  ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

‘ಇದು ಕೇವಲ ವ್ಯಕ್ತಿಯ ಮೇಲೆ ನಡೆದ ಘಟನೆಯಲ್ಲ. ಸಂವಿಧಾನ, ಪ್ರಜಾಪ್ರಭುತ್ವ ಮೌಲ್ಯಗಳ ಮೇಲಿನ ದಾಳಿಯಾಗಿದೆ. ದಲಿತ ವ್ಯಕ್ತಿ ಉನ್ನತ ಹುದ್ದೆ ಅಲಂಕರಿಸಿರುವುದನ್ನು ಸಹಿಸದೆ ಜಾತಿ ಆಧಾರಿತ ಅಸಹನೆ ಮತ್ತು ದ್ವೇಷವನ್ನು ಕಾರುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಿರುವ ವಕೀಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್ ಒತ್ತಾಯಿಸಿದರು.

‘ಇದು ಆಕಸ್ಮಿಕ ಘಟನೆ ಎನ್ನಲು ಸಾಧ್ಯವಿಲ್ಲ. ಕೃತ್ಯದ ಹಿಂದಿರುವ ಹುನ್ನಾರದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಆರೋಪಿ ವಕೀಲನ ಸನ್ನದನ್ನು ರದ್ದುಗೊಳಿಸಿ ವಿಚಾರಣೆಗೆ ಒಳಪಡಿಸಬೇಕು’ ಎಂದು ವಕೀಲ ಡಿ. ಶ್ರೀನಿವಾಸ್ ಒತ್ತಾಯಿಸಿದರು.

ADVERTISEMENT

‘ನ್ಯಾಯಮೂರ್ತಿ ಮೇಲೆ ನಡೆದಿರುವ ಘಟನೆ ಭಯೋತ್ಪಾದಕ ಕೃತ್ಯಕ್ಕೆ ಸಮಾನವಾಗಿದೆ. ಮನುವಾದಿಗಳು ದೆಹಲಿಯ ಜಂತರ್ ಮಂಥರ್‌ನಲ್ಲಿ ಸಂವಿಧಾನ‌ ಪ್ರತಿಯನ್ನು ಸುಟ್ಟು ವಿಕೃತಿ ಮೆರೆದರು. ಇದುವರೆಗೆ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಕ್ರಮಕೈಗೊಳ್ಳಲು ಮುಂದಾಗಬೇಕು. ಇಲ್ಲವಾದರೆ ನೇಪಾಳದ ಮಾದರಿಯಲ್ಲಿ ಜನರು ಸಿಡಿದೇಳುವ ದಿನಗಳು ದೂರವಿಲ್ಲ’ ಎಂದು ವಕೀಲ ಸಣ್ಣೋಬಯ್ಯ ಎಂದರು.

ನಂತರ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಅವರಿಗೆ ವಕೀಲರು ಮನವಿ ಸಲ್ಲಿಸಿದರು. 

ವಕೀಲರ ಸಂಘದ ಕಾರ್ಯದರ್ಶಿ ಪರಶುರಾಮ್, ವಕೀಲರಾದ ಆರ್. ಓಬಳೇಶ್, ವಿ.ತಿಪ್ಪೇಸ್ವಾಮಿ, ಕೆ.ವಿ. ರುದ್ರೇಶ್, ಆರ್.ಭೂಪತಿ, ಮಹಾಂತೇಶ್, ಮರೇನನಹಳ್ಳಿ ತಿಪ್ಪೇಸ್ವಾಮಿ, ಬುಳ್ಳನಹಳ್ಳಿ ನಾಗಪ್ಪ, ಕಲ್ಲೇಶ್‌, ಸುನಿಲ್, ನಾಗೇಶ್, ಅಂಜಿನಪ್ಪ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.