
ಜಗಳೂರು: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ 2026– 27ನೇ ಸಾಲಿನ ತಾಲ್ಲೂಕು ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅಧಿಕಾರಿಗಳ ತಪ್ಪು ಮಾಹಿತಿಯಿಂದ ಗರಂ ಆದ ಶಾಸಕ ಬಿ. ದೇವೇಂದ್ರಪ್ಪ ಅವರು ಅಸಮಾಧಾನದಿಂದ ಅರ್ಧಕ್ಕೆ ಸಭೆಯಿಂದ ಹೊರ ನಡೆದರು.
ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಹರೀಶ್ ಮಾತನಾಡಿ, ‘ಸಹಕಾರ ಇಲಾಖೆಯಡಿ ಎಸ್‌ಸಿ, ಎಸ್‌ಟಿ ರೈತರ ಸಾಲದ ಮೇಲೆ ಪಿಕಾರ್ಡ್ ಬ್ಯಾಂಕ್‌ನಲ್ಲಿ ಸೃಷ್ಟಿಸಿದ ಘಟಕ ವೆಚ್ಚ ₹ 50,000 ಅನುದಾನ ಮೀಸಲಿರಿಸಲಾಗಿದೆ’ ಎಂದು ವಿವರಿಸಿದರು.
‘ಅಧಿಕಾರಿಯ ಮಹಿತಿಯಿಂದ ಅಸಮಾಧಾನಗೊಂಡ ಶಾಸಕರು, ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆ ಅತಿ ಹೆಚ್ಚು ಇರುವ ತಾಲ್ಲೂಕಿನಲ್ಲಿ ಕೇವಲ ₹ 50,000 ಮೀಸಲಿಟ್ಟಿದ್ದು ಏಕೆ? ಘೋಷವಾರು ಪುಸ್ತಕದಲ್ಲಿ ಎಸ್‌ಸಿ, ಎಸ್‌ಟಿ ವರ್ಗದ ಬದಲಿಗೆ ಸಾಮಾನ್ಯ ವರ್ಗ ಎಂದು ನಮೂದಿಸಿದ್ದೀರಿ. ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ. ಸಮರ್ಪಕ ಮಾಹಿತಿ ಕೊಡಿ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಹನುಮಂತಾಪುರ ಪಂಚಾಯಿತಿ ಉಪಾಧ್ಯಕ್ಷರು ಕಚೇರಿಯಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಾತಿ ನಿಂದನೆ ಪ್ರಕರಣ ನಡೆದಿವೆ. ಇವುಗಳಿಗೆ ಉತ್ತರ ಯಾರು ಕೊಡುತ್ತಾರೆ’ ಎಂದು ತರಾಟೆಗೆ ತೆಗೆದುಕೊಂಡರು.
ಇಒ ಕೆಂಚಪ್ಪ ಪ್ರತಿಕ್ರಿಯಿಸಿ, ‘ವಿವಿಧ ಇಲಾಖೆಗಳ ಅನುದಾನ ಬೇಡಿಕೆ ಒಳಗೊಂಡಂತೆ ಒಟ್ಟು ₹ 201 ಕೋಟಿ ಅಭಿವೃದ್ಧಿ ಕಾಮಗಾರಿಗಳ ಅನುದಾನದ ಪ್ರಸ್ತಾವ ತಯಾರಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಹೊಸಕಟ್ಟಡ ಹಾಗೂ ಸಾಮರ್ಥ್ಯ ಸೌಧ ನಿರ್ಮಾಣಕ್ಕೆ ಒಟ್ಟು ₹ 5.20 ಕೋಟಿ ವೆಚ್ಚದ ಪ್ರಸ್ತಾವ ಸಲ್ಲಿಸಲಾಗುತ್ತಿದೆ. ಘೋಷವಾರು ಪ್ರತಿ ತಯಾರಿಸುವ ಸಮಯದಲ್ಲಿ ಕಣ್ತಪ್ಪಿನಿಂದ ಎಸ್‌ಸಿ, ಎಸ್‌ಟಿ ಬದಲಿಗೆ ಸಾಮಾನ್ಯ ವರ್ಗ ಎಂದು ನಮೂದಾಗಿದೆ’ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು.
ಅಧಿಕಾರಿಯ ಉತ್ತರದಿಂದ ಅಸಮಾಧಾನಗೊಂಡ ಶಾಸಕಕರು ಎದ್ದು ಸಭೆಯಿಂದ ಹೊರ ನಡೆದರು.
‘ತಾಲ್ಲೂಕಿನಾದ್ಯಂತ ವಿವಿಧ ಶಾಲೆಗಳ 144 ಹೊಸ ಕೊಠಡಿಗಳು, 155 ಶಾಲಾ ಕೊಠಡಿಗಳ ದುರಸ್ತಿ, 49 ಅಡುಗೆ ಕೊಠಡಿ, 45 ಶಾಲೆ ಕಾಂಪೌಂಡ್‌ಗಳ ನಿರ್ಮಾಣ ಸೇರಿ 481 ಭೌತಿಕ ಘಟಕಗಳಿಗೆ ಒಟ್ಟು ₹ 38.90 ಕೋಟಿ ವೆಚ್ಚದಲ್ಲಿ ಪ್ರಸ್ತಾವ ಸಲ್ಲಿಸಲಾಗುತ್ತಿದೆ’ ಎಂದು ಬಿಒ ಹಾಲಮೂರ್ತಿ ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಭುಶಂಕರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಅಶೋಕ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಾಲಸ್ವಾಮಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ವರಿ, ಪಿ.ಆರ್.ಇ.ಡಿ ಎಇಇ ಶಿವಮೂರ್ತಿ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.