ADVERTISEMENT

ಫಲಾನುಭವಿಗಳ ಆಯ್ಕೆಯಲ್ಲಿ ಹಿಂದೆ ಬಿದ್ದ ಶಾಸಕರು

ಉಪ ಚುನಾವಣೆ ಪರಿಣಾಮ: ಏಳರಲ್ಲಿ ಕರ್ತವ್ಯ ನಿರ್ವಹಿಸಿದವರು ಇಬ್ಬರೇ

ಬಾಲಕೃಷ್ಣ ಪಿ.ಎಚ್‌
Published 16 ಡಿಸೆಂಬರ್ 2019, 12:45 IST
Last Updated 16 ಡಿಸೆಂಬರ್ 2019, 12:45 IST
ಪ್ರೊ. ಎನ್‌.ಲಿಂಗಣ್ಣ
ಪ್ರೊ. ಎನ್‌.ಲಿಂಗಣ್ಣ   

ದಾವಣಗೆರೆ: ರಾಜ್ಯದಲ್ಲಿ 15 ಕಡೆ ನಡೆದ ಉಪ ಚುನಾವಣೆಯ ಅಡ್ಡ ಪರಿಣಾಮ ಜಿಲ್ಲೆಯಲ್ಲಿ ಉಂಟಾಗಿದೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಫಲಾನುಭವಿಗಳನ್ನು ಶಾಸಕರು ಅಂತಿಮಗೊಳಿಸಬೇಕಿದ್ದು, ಇಬ್ಬರಷ್ಟೇ ಅಂತಿಮ ಪಟ್ಟಿ ಕಳುಹಿಸಿದ್ದಾರೆ. ಉಳಿದ ಐವರು ಪಟ್ಟಿ ಅಂತಿಮಗೊಳಿಸಿಲ್ಲ.

ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಡಿಯಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಆದಿಜಾಂಬವ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ ಹಾಗೂ ಭೋವಿ ಅಭಿವೃದ್ಧಿ ನಿಗಮಗಳು ಬರುತ್ತವೆ. ಅದರಲ್ಲಿ ಸ್ವಯಂ ಉದ್ಯೋಗ ಹಾಗೂ ಗಂಗಾ ಕಲ್ಯಾಣ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದಾಗ ಪ್ರತಿ ವಿಧಾನಸಭಾ ಕ್ಷೇತ್ರದಿಂದ 200ರಿಂದ 500ರ ವರೆಗೆ ಅರ್ಜಿಗಳು ಬಂದಿವೆ. ನಿಗಮವು ಈ ಅರ್ಜಿಗಳನ್ನು ಶಾಸಕರಿಗೆ ಕಳುಹಿಸಿಕೊಟ್ಟಿದೆ. ಸ್ವಯಂ ಉದ್ಯೋಗಕ್ಕೆ ಕೆಲವು ಕ್ಷೇತ್ರಕ್ಕೆ 20 ಕೆಲವು ಕ್ಷೇತ್ರಗಳಿಗೆ 22 ಮಂದಿ ಫಲಾನುಭವಿಗಳನ್ನು ಶಾಸಕರು ಅಂತಿಮಗೊಳಿಸಬೇಕು. ಹಾಗೇ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆದುಕೊಡಲು ತಲಾ 50 ಫಲಾನುಭವಿಗಳನ್ನು ಅಂತಿಮಗೊಳಿಸಬೇಕು.

ಸ್ವಯಂ ಉದ್ಯೋಗದಲ್ಲಿ ಎರಡು ಘಟಕಗಳಿವೆ. ₹ 5 ಲಕ್ಷ ವೆಚ್ಚದಲ್ಲಿ ಅಂಗಡಿ ಹಾಕುವುದು, ವಾಹನ ಖರೀದಿ ಇನ್ನಿತರ ಕೆಲಸ ಮಾಡುವುದಿದ್ದರೆ ₹ 3.5 ಲಕ್ಷ ನಿಗಮದಿಂದ ಸಬ್ಸಿಡಿ ದೊರೆಯುತ್ತದೆ. ₹ 1.5 ಲಕ್ಷ ಬ್ಯಾಂಕ್‌ ಸಾಲ ಮಾಡಬೇಕು. ₹ 10 ಲಕ್ಷ ಘಟಕ ವೆಚ್ಚವಾದರೆ ಅದರಲ್ಲಿ ₹ 5 ಲಕ್ಷ ಸಬ್ಸಿಡಿ, ₹ 5 ಲಕ್ಷ ಬ್ಯಾಂಕ್‌ ಸಾಲ ಆಗಿರುತ್ತದೆ. ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ನಿಗಮವೇ ₹ 3 ಲಕ್ಷ ವೆಚ್ಚದಲ್ಲಿ ಕೊಳವೆಬಾವಿಯನ್ನು ಕೊರೆದು, ಪಂಪ್‌ಸೆಟ್‌ ಅಳವಡಿಸಿ, ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಡುತ್ತದೆ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಮೇಶ್‌ ತಿಳಿಸಿದ್ದಾರೆ.

ADVERTISEMENT

ಚನ್ನಗಿರಿಯ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಮತ್ತು ಮಾಯಕೊಂಡದ ಶಾಸಕ ಪ್ರೊ.ಎನ್‌. ಲಿಂಗಣ್ಣ ಮಾತ್ರ ಫಲಾನುಭವಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ದಾವಣಗೆರೆ ಉತ್ತರದ ಶಾಸಕ ಎಸ್‌.ಎ. ರವೀಂದ್ರನಾಥ, ದಕ್ಷಿಣದ ಶಾಸಕ ಶಾಮನೂರು ಶಿವಶಂಕರಪ್ಪ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ಹರಿಹರ ಶಾಸಕ ಎಸ್‌. ರಾಮಪ್ಪ ಇನ್ನೂ ಪಟ್ಟಿ ಅಂತಿಮಗೊಳಿಸಿಲ್ಲ.

ಅರ್ಜಿಗಳು ಬಹಳ ಬಂದಿದ್ದವು. ಅವುಗಳನ್ನು ಪರಿಶೀಲಿಸಿ ಅಂತಿಮಗೊಳಿಸಲು ಸ್ವಲ್ಪ ತಡವಾಯಿತು. ಇವತ್ತೇ ಅಂತಿಮಗೊಳಿಸಲಾಗುವುದು ಎಂದು ಹರಿಹರ ಶಾಸಕ ಎಸ್. ರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಾವು ಅಂತಿಮಗೊಳಿಸಿ ಕಳುಹಿಸಿದ್ದೇವೆ’ ಎಂದು ಶಾಸಕ ಎಸ್‌.ಎ. ರವೀಂದ್ರನಾಥ ಅವರ ಆಪ್ತ ಸಹಾಯಕ ಗಂಗಾಧರ್ ತಿಳಿಸಿದ್ದಾರೆ. ಬಂದಿಲ್ಲ ಎಂದು ನಿಗಮದ ಅಧಿಕಾರಿಗಳು ಹೇಳಿದ್ದಾರೆ.

‘ಉಪ ಚುನಾವಣೆ ಇದ್ದಿದ್ದರಿಂದ ಸ್ವಲ್ಪ ತಡವಾಗಿದೆ. ಅಲ್ಲದೇ ಹೆಚ್ಚು ಅರ್ಜಿಗಳು ಬಂದಿರುವುದರಿಂದ ಎಲ್ಲರೂ ಅರ್ಹರೇ ಇರುವುದರಿಂದ ಅಂತಿಮಗೊಳಿಸುವುದು ಕಷ್ಟವಾಗಿದೆ. ಗುರಿಯನ್ನು ಹೆಚ್ಚು ಮಾಡಬೇಕು ಎಂದು ಸರ್ಕಾರಕ್ಕೆ ಬರೆಯಲಾಗಿದೆ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಆಪ್ತ ಸಹಾಯಕ ಮಾಲತೇಶ್‌ ಮಾಹಿತಿ ನೀಡಿದ್ದಾರೆ.

ಉಪ ಚುನಾವಣೆ ಇತ್ತು. ಅರ್ಜಿಯ ಸಂಖ್ಯೆಗಳು ಹಾಗೂ ಇತರ ಕೆಲಸಗಳಿಂದಾಗಿ ತಡವಾಗಿದೆ. ಇನ್ನು ಎರಡು–ಮೂರು ದಿನಗಳ ಒಳಗೆ ಅಂತಿಮಗೊಳಿಸಲಾಗುವುದು ಎಂದು ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ಶಾಮನೂರು ಶಿವಶಂಕರಪ್ಪ ಅವರ ಆಪ್ತ ಸಹಾಯಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.