ADVERTISEMENT

ಮೇಕೆ ಹೊತ್ತೊಯ್ದ ಚಿರತೆ: ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 15:21 IST
Last Updated 23 ಆಗಸ್ಟ್ 2024, 15:21 IST
ಸಾಸ್ವೆಹಳ್ಳಿ ಸಮೀಪದ ರಾಂಪುರ ಹೊರವಲಯದ ಜಮೀನಿನಲ್ಲಿ ಚಿರತೆ ದಾಳಿ ನಡೆಸಿದ ಜಾಗ ಪರಿಶೀಲಿಸುತ್ತಿರುವ ಅರಣ್ಯ ಅಧಿಕಾರಿಗಳು ಹಾಗೂ ಪಂಚಾಯಿತಿ ಸಿಬ್ಬಂದಿ
ಸಾಸ್ವೆಹಳ್ಳಿ ಸಮೀಪದ ರಾಂಪುರ ಹೊರವಲಯದ ಜಮೀನಿನಲ್ಲಿ ಚಿರತೆ ದಾಳಿ ನಡೆಸಿದ ಜಾಗ ಪರಿಶೀಲಿಸುತ್ತಿರುವ ಅರಣ್ಯ ಅಧಿಕಾರಿಗಳು ಹಾಗೂ ಪಂಚಾಯಿತಿ ಸಿಬ್ಬಂದಿ   

ಸಾಸ್ವೆಹಳ್ಳಿ: ಹಿಂಡಿನಲ್ಲಿದ್ದ ಆಡನ್ನು ಕುರಿಗಾಹಿಗಳ ಎದುರೇ ಚಿರತೆಯೊಂದು ಹೊತ್ತೊಯ್ದ ಘಟನೆ ರಾಂಪುರ ಗ್ರಾಮದ ಜಮೀನಿನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಚಿರತೆ ಹೊತ್ತೊಯ್ಯುವಾಗ ಕುರಿಗಾಹಿಗಳು ಕೇಕೆ ಹಾಕಿದರು. ಅಷ್ಟರಲ್ಲಿ ಚಿರತೆ ಮೆಕ್ಕೆಜೋಳದ ಹೊಲದಲ್ಲಿ ಪರಾರಿಯಾಯಿತು ಎಂದು ಪ್ರತ್ಯಕ್ಷದರ್ಶಿ ಕೃಷ್ಣನಾಯ್ಕ ಹೇಳಿದರು. 

ಸ್ಥಳಕ್ಕೆ ಚನ್ನಗಿರಿ ಮಾವಿನಕೋಟೆ ವಲಯ ಅರಣ್ಯ ಇಲಾಖೆ ಗಸ್ತು ಅಧಿಕಾರಿ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು. ‘ಮೇಕೆಯ ಮೇಲೆ ದಾಳಿ ಮಾಡಿರುವುದು ಚಿರತೆ ಎಂಬುದು ದೃಢಪಟ್ಟಿದೆ. ಹೆಜ್ಜೆಗಳೂ ಮೂಡಿವೆ. ಆದರೆ ನಮ್ಮಲ್ಲಿ ಬೋನುಗಳ ಸಂಖ್ಯೆ ಕಡಿಮೆ ಇದ್ದು, ಇನ್ನೆರಡು ದಿನಗಳಲ್ಲಿ ಚರಿತೆ ಸೆರೆಗೆ ಬೋನು ಇಡಲಾಗುವುದು’ ಎಂದರು. 

ADVERTISEMENT

ಚಿಕ್ಕಬಾಸೂರಿನ ಹೊರವಲಯದಲ್ಲಿ ಗುರುವಾರ ಬೋನ್ ಇಡಲಾಗಿದೆ. ಇದೇ ಚಿರತೆ ಸುತ್ತಮುತ್ತಲ ಗ್ರಾಮದಲ್ಲಿ ಓಡಾಡುತ್ತಿರಬಹುದು. ಈ ಭಾಗದ ಚಿರತೆಯೇ ರಾಂಪುರದಲ್ಲಿಯೂ ಕಾಣಿಸಿಕೊಂಡಿರಬಹುದು. ಸಾಸ್ವೆಹಳ್ಳಿ 1 ಮತ್ತು 2ನೇ ಹೋಬಳಿಯು ಸುತ್ತಮುತ್ತಲೂ ಗುಡ್ಡಗಳು ಇರುವುದರಿಂದ ಕಾಡು ಪ್ರಾಣಿಗಳು ಹೆಚ್ಚಾಗಿವೆ. ಆಹಾರ ಹುಡುಕಿಕೊಂಡು ಅವು  ಓಡಾಡುವುದರಿಂದ ರೈತರು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಮಾವಿನಕಟ್ಟೆ ವಲಯದ ಕುಂಬಳೂರು ಶಾಖೆಯ ಡಿಆರ್‌ಎಫ್‌ಓ ಮೈಲಾರ ಸ್ವಾಮಿ ಎಲ್. ತಿಳಿಸಿದರು.

ಗ್ರಾಮ ಪಂಚಾಯಿತಿ ಪಿಡಿಒ ಧರ್ಮಣ್ಣ, ಪಂಚಾಯಿತಿ ಸಿಬ್ಬಂದಿ ಚನ್ನಬಸಪ್ಪ ಡಿ.ಆರ್, ಪ್ರದೀಪ್ ಕುಮಾರ್, ವಾಚರ್ ಸಿದ್ದಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.