ADVERTISEMENT

ರೇಣುಕಾಚಾರ್ಯ ರಾಜೀನಾಮೆ ನೀಡಲಿ: ಕೊಡತಾಳ್ ರುದ್ರೇಶ್

ಎಸ್ಸಿ, ಎಸ್ಟಿ ಮೀಸಲಾತಿ ಒಕ್ಕೂಟದ ಕೊಡತಾಳ್ ರುದ್ರೇಶ್

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 2:34 IST
Last Updated 29 ಮಾರ್ಚ್ 2022, 2:34 IST
ತಮ್ಮ ಪ್ರಭಾವ ಬಳಸಿ ಪುತ್ರಿಗೆ ನಕಲಿ ಜಾತಿ ಪ್ರಮಾಣಪತ್ರ ಕೊಡಿಸಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಎಸ್ಸಿ, ಎಸ್ಟಿ ಪಂಗಡಗಳ ಮೀಸಲಾತಿ ಸಂರಕ್ಷಣಾ ಮಹಾ ಒಕ್ಕೂಟದಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು
ತಮ್ಮ ಪ್ರಭಾವ ಬಳಸಿ ಪುತ್ರಿಗೆ ನಕಲಿ ಜಾತಿ ಪ್ರಮಾಣಪತ್ರ ಕೊಡಿಸಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಎಸ್ಸಿ, ಎಸ್ಟಿ ಪಂಗಡಗಳ ಮೀಸಲಾತಿ ಸಂರಕ್ಷಣಾ ಮಹಾ ಒಕ್ಕೂಟದಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು   

ಹೊನ್ನಾಳಿ: ‘2017ರಲ್ಲಿ ಶಾಲಾ ದಾಖಲಾತಿಯಲ್ಲಿ ಬೇಡ ಜಂಗಮ (ಎಸ್ಸಿ) ಎಂದು ಬರೆಸಿದ್ದರೂ ತಮಗೇನೂ ಗೊತ್ತಿಲ್ಲ ಎಂದು ಅಧಿವೇಶನದಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ತಾನು ತಪ್ಪು ಮಾಡಿಲ್ಲ, ಮಾಡಿದ್ದರೆ ಗಲ್ಲಿಗೇರಿಸಿ ಎಂದು ಹೇಳಿದ್ದಾರೆ. ಅವರು ಗಲ್ಲಿಗೇರುವುದು ಬೇಡ, ರಾಜೀನಾಮೆ ಕೊಟ್ಟು ಹೊಸದಾಗಿ ಚುನಾವಣೆ ಎದುರಿಸಲಿ’ ಎಂದು ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಎಸ್ಸಿ, ಎಸ್ಟಿ ಪಂಗಡಗಳ ಮೀಸಲಾತಿ ಸಂರಕ್ಷಣಾ ಮಹಾ ಒಕ್ಕೂಟದ ಮುಖಂಡ ಕೊಡತಾಳ್ ರುದ್ರೇಶ್ ಆಗ್ರಹಿಸಿದರು.

ಸೋಮವಾರ ಒಕ್ಕೂಟದಿಂದ ಎಸಿ ಕಚೇರಿಯಲ್ಲಿ ಗ್ರೇಡ್-2 ತಹಶೀಲ್ದಾರ್ ಸುರೇಶ್ ನಾಯ್ಕ ಅವರಿಗೆ ಮನವಿ ಸಲ್ಲಿಸಿದ ನಂತರ ‌ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪ್ರಜಾ ಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ. ಈಶ್ವರಪ್ಪ, ‘ಹಿಂದೆ ಮೀಸಲಾತಿ ವಿರೋಧಿಸುತ್ತಿದ್ದವರು ಇಂದು ಎಸ್ಸಿ, ಎಸ್ಟಿ ಜಾತಿಗೆ ಕಾನೂನುಬಾಹಿರವಾಗಿ ಸೇರ್ಪಡೆಗೊಳ್ಳುವ ಮೂಲಕ ಸೌಲಭ್ಯ
ಗಳನ್ನು ಕಸಿದುಕೊಳ್ಳಲು ಹುನ್ನಾರ ನಡೆಸಿದ್ದಾರೆ’ ಎಂದು ದೂರಿದರು.

ADVERTISEMENT

‘ಶಾಸಕರ ಕುಟುಂಬದ ಡಾ. ಎಂ.ಪಿ.ದಾರಕೇಶ್ವರಯ್ಯ, ಎಂ.ಡಿ. ಶೃತಿ, ಮತ್ತು ಎಂ.ಆರ್ ಚೇತನಾ ಮತ್ತು ಇತರರು ಈಗಾಗಲೇ ಎಸ್ಸಿ ನಕಲಿ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ 55 ಸಾವಿರಕ್ಕೂ ಹೆಚ್ಚು ಸುಳ್ಳು ಜಾತಿಪ್ರಮಾಣ ಪತ್ರ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಇದೆ.ರಾಜ್ಯ ಸರ್ಕಾರ ಕೂಡಲೇ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಡಾ. ಈಶ್ವರನಾಯ್ಕ ಮಾತನಾಡಿ, ‘ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವುದು ಎಷ್ಟು ಸರಿ? ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್. ನಾಗಪ್ಪ ಮಾತನಾಡಿ, ‘ಬೇಡುವ ಜಂಗಮರು ಅಲೆಮಾರಿಗಳು. ಅವರು ಗಾಂಜಾ ಸೇದುವ, ಮಾಂಸ ತಿನ್ನುವ ಜಾತಿಗೆ ಸೇರಿದವರಾಗಿದ್ದರಿಂದ ಅವರಿಗೆ ಒಂದು ಡ್ರೆಸ್ ಕೋಡ್ ಇದೆ. ಅಂಥವರಿಗೆ ಸಂವಿಧಾನ ಮತ್ತು ಸರ್ಕಾರಗಳು ಎಸ್ಸಿ ಜಾತಿ ಪ್ರಮಾಣಪತ್ರ ನೀಡಿವೆ’ ಎಂದರು.

‘ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಹಿರಿಯ ಸಹೋದರರಾದ ಎಂ.ವಿ.ಪಿ. ಆರಾಧ್ಯ, ಎಂ.ಪಿ. ದಾರಕೇಶ್ವರಯ್ಯ, ಎಂ.ಪಿ.ರೇಣುಕಾಚಾರ್ಯ, ಸಹೋದರ ಎಂ.ಪಿ. ಬಸವರಾಜಯ್ಯ, ಎಂ.ಪಿ. ಗೀತಾ ಪಂಚಾಕ್ಷರಯ್ಯ ಅವರು ಬೇಡ ಜಂಗಮ (ಎಸ್ಸಿ) ಎಂದು ಶಾಲಾ ದಾಖಲಾತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ದಾಖಲಾತಿಗಳು ನಮ್ಮ ಬಳಿ ಇವೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರಾಮ ನಾಯ್ಕ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪೀರ‍್ಯಾನಾಯ್ಕ, ದಲಿತ ಮುಖಂಡ ಅರಕೆರೆ ಕೃಷ್ಣಪ್ಪ, ಬೆನಕನಹಳ್ಳಿ ಪರಮೇಶ್, ಕೊರಚ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಮಾದಾಪುರ, ಭೋವಿ ಸಮಾಜದ ಅಧ್ಯಕ್ಷ ಹರಗನಹಳ್ಳಿ ನಾಗಪ್ಪ, ಶಿವಮೂರ್ತಪ್ಪ, ವಾಲ್ಮೀಕಿ ಸಮಾಜದ ಶೇಖರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.