
ದಾವಣಗೆರೆ: ಹೊಸ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಜಿಲ್ಲೆಯಲ್ಲಿ ಮದ್ಯದ ಹೊಳೆಯೇ ಹರಿದಿದೆ. ಸಾಮಾನ್ಯ ದಿನಗಳಿಗಿಂತ ಮದ್ಯ ಮಾರಾಟ ದ್ವಿಗುಣಗೊಂಡಿದ್ದು, ಅಂದಾಜು ₹ 5 ಕೋಟಿಗೂ ಅಧಿಕ ವಹಿವಾಟು ನಡೆದಿದೆ.
ದಾವಣಗೆರೆ ನಗರದ 107 ಮದ್ಯಗಂಡಿ ಸೇರಿದಂತೆ ಜಿಲ್ಲೆಯಲ್ಲಿ 260ಕ್ಕೂ ಅಧಿಕ ಮದ್ಯ ಮಾರಾಟ ಮಳಿಗೆಗಳಿವೆ. ವರ್ಷಾಂತ್ಯದ ಕೊನೆಯ ದಿನ ವಿಸ್ಕಿ, ಬ್ರಾಂಡಿಯಂತಹ 23,638 ಪೆಟ್ಟಿಗೆ ಮದ್ಯ ಹಾಗೂ 10,642 ಪೆಟ್ಟಿಗೆ ಬಿಯರ್ ಸೇರಿ ಒಟ್ಟು 34,280 ಪೆಟ್ಟಿಗೆಗಳು ಮಾರಾಟವಾಗಿವೆ. 2024ರ ಡಿ.31ಕ್ಕೆ ಹೋಲಿಸಿದರೆ ಈ ಮಾರಾಟ ಶೇ 50ರಷ್ಟು ಹೆಚ್ಚಳ ಎನ್ನುತ್ತವೆ ಅಬಕಾರಿ ಇಲಾಖೆಯ ಮೂಲಗಳು.
‘ಸಾಮಾನ್ಯ ದಿನಗಳಲ್ಲಿ 5,000 ಪೆಟ್ಟಿಗೆ ಬಿಯರ್ ಮಾರಾಟವಾಗುತ್ತವೆ. ಹೊಸ ವರ್ಷಾಚರಣೆಯ ಅಂಗವಾಗಿ ಬಿಯರ್ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಸಂಭ್ರಮಾಚರಣೆಯ ಸಂದರ್ಭದಲ್ಲಿ ಯುವಸಮೂಹ ಸಾಮಾನ್ಯವಾಗಿ ಬಿಯರ್ ಸೇವನೆಯನ್ನು ಇಷ್ಟಪಡುತ್ತದೆ’ ಎನ್ನುತ್ತಾರೆ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಈಶ್ವರ್ ಸಿಂಗ್.
ಮದ್ಯ ಮಾರಾಟಗಾರರು ಕರ್ನಾಟಕ ರಾಜ್ಯ ಪಾನೀಯ ನಿಗಮದ ಉಗ್ರಾಣದಿಂದ ನಿತ್ಯ ಮದ್ಯ ಖರೀದಿಸುತ್ತಾರೆ. ಹೊಸ ವರ್ಷಾಚರಣೆಯ ಅಂಗವಾಡಿ ಡಿ.31ರಂದು ತುಸು ಹಚ್ಚು ಬೇಡಿಕೆ ಸಲ್ಲಿಕೆಯಾಗಿತ್ತು. 34,280 ಪೆಟ್ಟಿಗೆ ಮದ್ಯ ಎತ್ತುವಳಿಯಾಗಿದ್ದು ಹೊಸ ದಾಖಲೆ. 2024ರ ಡಿ.31ರಂದು 13,273 ಪೆಟ್ಟಿಗೆ ಮದ್ಯ ಎತ್ತುವಳಿಯಾಗಿತ್ತು ಎಂದು ಮೂಲಗಳು ವಿವರಿಸಿವೆ.
2025ಕ್ಕೆ ವಿದಾಯ ಹೇಳಿ 2026ರನ್ನು ಸ್ವಾಗತಿಸಲು ಜಿಲ್ಲೆಯ ಅಲ್ಲಲ್ಲಿ ಬುಧವಾರ ರಾತ್ರಿ ಔತಣ ಕೂಟ, ಪಾರ್ಟಿಗಳನ್ನು ಆಯೋಜಿಸಲಾಗಿತ್ತು. ಹೋಟೆಲ್, ರೆಸಾರ್ಟ್, ಡಾಬಾ, ಕ್ಲಬ್‌ಗಳಲ್ಲಿ ಅದ್ದೂರಿ ಪಾರ್ಟಿಗಳು ನಡೆದವು. ತೋಟದ ಮನೆ, ಅಪಾರ್ಟ್‌ಮೆಂಟ್ ಸೇರಿದಂತೆ ಇತರೆಡೆ ಕೂಡ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಇಂತಹ ಸ್ಥಳಗಳಲ್ಲಿ ಮದ್ಯ ಮಾರಾಟ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಮದ್ಯ ಮಾರಾಟ ಮಳಿಗೆಗಳು ಬೆಳಿಗ್ಗೆ 9ರಿಂದ ರಾತ್ರಿ 11ರವರೆಗೆ ವಹಿವಾಟು ನಡೆಸುತ್ತವೆ. ಹೊಸ ವರ್ಷಾಚರಣೆಯ ದಿನ ಬೆಳಿಗ್ಗೆಯಿಂದಲೇ ಮದ್ಯ ಮಾರಾಟ ಹೆಚ್ಚಾಗಿತ್ತು. ರಾತ್ರಿ ನಿಗದಿತ ಸಮಯಕ್ಕಿಂತ ತುಸು ಹೆಚ್ಚು ಹೊತ್ತು ವಹಿವಾಟು ನಡೆಯಿತು. ಜನಜಂಗುಳಿ ಉಂಟಾಗದಂತೆ, ಅಹಿತರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ದೇಗುಲಕ್ಕೆ ಭಕ್ತರ ದಂಡು
ಹೊಸ ವರ್ಷದ ಮೊದಲ ದಿನವಾದ ಗುರುವಾರ ದೇಗುಲಗಳಲ್ಲಿ ಭಕ್ತರ ದಂಡು ಕಂಡುಬಂದಿತು. ರಾಘವೇಂದ್ರಸ್ವಾಮಿ ದೇಗುಲ ಹಾಗೂ ಸಾಯಿಬಾಬ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ತುಸು ಹೆಚ್ಚಾಗಿತ್ತು. ಹೊಸ ವರ್ಷದ ಮೊದಲ ದಿನ ದೇಗುಲಗಳಿಗೆ ಭೇಟಿ ನೀಡುವುದು ವಾಡಿಕೆ. ಹೀಗಾಗಿ ಗುರುವಾರ ಬೆಳಿಗ್ಗೆಯಿಂದಲೇ ದೇಗುಲಗಳಲ್ಲಿ ಭಕ್ತಗಣ ಹೆಚ್ಚಾಗಿತ್ತು. ವಿದ್ಯಾನಗರದ ಶಿವಪಾರ್ವತಿ ದೇಗುಲ ಗಣಪತಿ ಶಾರದಾದೇವಿ ದುರ್ಗಾಂಬಿಕಾ ದೇಗುಲಗಳಿಗೆ ಭಕ್ತರು ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.