ADVERTISEMENT

ಲಾಠಿ ತೋರಿಸಿ ಲಾಕ್‌ಡೌನ್‌ ಜಾರಿ

ಅಂಗಡಿಗಳನ್ನು ಮುಚ್ಚಿಸಿ, ಅನಗತ್ಯ ಓಡಾಡುವವರನ್ನು ತಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 4:59 IST
Last Updated 29 ಏಪ್ರಿಲ್ 2021, 4:59 IST
ಬುಧವಾರ ದಾವಣಗೆರೆಯ ಹದಡಿ ರಸ್ತೆಯಲ್ಲಿ ಬೆಳಿಗ್ಗೆ 10 ಗಂಟೆಯ ನಂತರವೂ ತೆರೆದ ಹಣ್ಣಿನ ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಪೊಲೀಸ್ ಸಿಬ್ಬಂದಿ–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಬುಧವಾರ ದಾವಣಗೆರೆಯ ಹದಡಿ ರಸ್ತೆಯಲ್ಲಿ ಬೆಳಿಗ್ಗೆ 10 ಗಂಟೆಯ ನಂತರವೂ ತೆರೆದ ಹಣ್ಣಿನ ಅಂಗಡಿಗಳನ್ನು ಬಂದ್ ಮಾಡಿಸುತ್ತಿರುವ ಪೊಲೀಸ್ ಸಿಬ್ಬಂದಿ–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: 14 ದಿನಗಳ ಲಾಕ್‌ಡೌನ್‌ ಬುಧವಾರ ಪೊಲೀಸರು ಅಂಗಡಿ ಮುಚ್ಚಿಸಿ, ಲಾಠಿ ತೋರಿಸಿ ಜಾರಿ ಮಾಡಿದ್ದಾರೆ. ಬೆಳಿಗ್ಗೆ 10 ಗಂಟೆಯ ನಂತರ ಪೊಲೀಸರನ್ನು ಕಂಡ ಬಳಿಕವಷ್ಟೇ ವರ್ತಕರು ಅಂಗಡಿಗಳಿಗೆ ಬಾಗಿಲು ಹಾಕತೊಡಗಿದರು.

ಬೆಳಿಗ್ಗೆ 6ರಿಂದ 10ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಬಳಿಕ ಬಂದ್‌ ಮಾಡಬೇಕು ಎಂದು ಮಾರ್ಗಸೂಚಿ ಹೊರಡಿಸಲಾಗಿತ್ತು. ಆದರೆ ಕೆ.ಆರ್‌. ಮಾರುಕಟ್ಟೆ ಸಹಿತ ಬಹುತೇಕ ಕಡೆಗಳಲ್ಲಿ ಅಂಗಡಿಗಳನ್ನು ಮುಚ್ಚಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಜನರು, ವಾಹನಗಳಿಂದ ತುಂಬಿರುತ್ತಿದ್ದ ರಸ್ತೆಗಳು ನಿರ್ಜನ ಪ್ರದೇಶಗಳಾಗಿ ಕಂಡು ಬಂದವು. ‌ಜಯದೇವ ಸರ್ಕಲ್, ಗುಂಡಿ ಸರ್ಕಲ್, ರಾಂ ಆಂಡ್ ಕೋ ವೃತ್ತ, ಹಾಸಭಾವಿ ಸರ್ಕಲ್, ನಿಟುವಳ್ಳಿ, ಡೆಂಟಲ್ ಕಾಲೇಜ್ ರಸ್ತೆಗಳಲ್ಲಿ ಅಲ್ಲೊಂದು ಇಲ್ಲೊಂದು ವಾಹನಗಳಷ್ಟೇ ಕಂಡು ಬಂದವು. ಬಸ್‌ ನಿಲ್ದಾಣಗಳು ಜನರಿಲ್ಲದೇ ಸ್ತಬ್ಧವಾಗಿದ್ದವು.

ADVERTISEMENT

ಸರಳವಾಗಿ ನಡೆದ ಮದುವೆಗಳು: ಬಕ್ಕೇಶ್ವರ ಛತ್ರ, ಗುಂಡಿ ಮಹಾದೇವಪ್ಪ ಛತ್ರ, ರಾಜನಹಳ್ಳಿ ಹನುಮಂತಪ್ಪ ಕಲ್ಯಾಣ ಮಂಟಪ ಒಳಗೊಂಡಂತೆ ನಗರದ ಎಲ್ಲ ಕಲ್ಯಾಣ ಮಂಟಪಗಳಲ್ಲಿ ಮದುವೆಗಳಿದ್ದವು. ಅದರಲ್ಲಿ ಕೆಲವರು ಮದುವೆ ರದ್ದು ಮಾಡಿದ್ದರು. ಉಳಿದ ಕಡೆಗಳಲ್ಲಿ ನಿಗದಿತ 50 ಜನರು ಕೂಡ ಇರಲಿಲ್ಲ. ತಹಶೀಲ್ದಾರ್‌ ಗಿರೀಶ್‌, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು ವಿವಿಧ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿದರು. ಆದರೆ ಎಲ್ಲಿಯೂ ನಿಯಮ ಮೀರಿದ ಜನಸಂದಣಿ ಕಂಡು
ಬರಲಿಲ್ಲ.

ಎಪಿಎಂಸಿ 10 ಗಂಟೆಗೆ ಬಂದ್‌

ಕೃಷಿ ಉತ್ಪನ್ನಗಳ ಮಾರಾಟ ಅಗತ್ಯವಾಗಿದ್ದರೂ ಬೆಳಿಗ್ಗೆ 6ರಿಂದ 10 ಗಂಟೆಯ ವರೆಗೆ ಮಾತ್ರ ಎಪಿಎಂಸಿ ಪ್ರಾಂಗಣ ತೆರೆದಿಡಲು ಎಪಿಎಂಸಿ ನಿರ್ಧರಿಸಿದೆ.

ಮೇ 12ರ ವರೆಗೆ ಲಾಕ್‌ಡೌನ್‌ ವಿಧಿಸಿರುವುದು ಇಲ್ಲಿನ ವರ್ತಕರೂ ಪಾಲನೆ ಮಾಡಬೇಕು. ನಿಗದಿಪಡಿಸಿದ್ದ ಸಮಯದಲ್ಲಿ ಮಾತ್ರ ವ್ಯಾಪಾರ ಮಾಡಬೇಕು. ಉಳಿದ ಸಮಯಗಳಲ್ಲಿ ಸಂಪೂರ್ಣ ಬಂದ್‌ ಮಾಡಬೇಕು. ರೈತರು ಕೂಡ ಸಹಕರಿಸಬೇಕು ಎಂದು ಎಪಿಎಂಸಿ ಕಾರ್ಯದರ್ಶಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.